ಮದ್ಯದಂಗಡಿ ತೆರೆಯದಂತೆ ಗ್ರಾಮಸ್ಥರ ಪ್ರತಿಭಟನೆ
ಕ.ಪ್ರ.ವಾರ್ತೆ ಹಾಸನ ಜ. 27
ಬಾಗೇಶಪುರ ಹಾಗೂ ಸುತ್ತಮುತ್ತ ಮದ್ಯದ ಅಂಗಡಿಯನ್ನು ತೆರೆಯದಂತೆ ಆಗ್ರಹಿಸಿ ಬಾಗೇಶಪುರ ಗ್ರಾಮಸ್ಥರು ಸೋಮವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲ ಸಮಯ ಧರಣಿ ನಡೆಸಿ ಜಿಲ್ಲಾಧಿಕಾರಿಗೆ ಮನವಿ ನೀಡಿದರು.
ಆಕ್ರೋಶ: ಅರಸೀಕೆರೆ ತಾಲೂಕಿನ ಬಾಗೇಶಪುರ ಗ್ರಾಮದಲ್ಲಿ ಕಳೆದ ಹಲವು ವರ್ಷಗಳಿಂದ ಬಾಗೇಶಪುರ ಶಾಂತಿಯಿಂದ ಇರುವ ಗ್ರಾವಾಗಿದೆ. ಆದರೆ, ಕೆಲವು ಕಿಡಿಗೇಡಿಗಳು ಇಲ್ಲಿ ಮದ್ಯದ ಅಂಗಡಿಯನ್ನು ತೆರೆಯಲು ಉದ್ದೇಶಿಸಿದ್ದು, ಇದರಿಂದ ಗ್ರಾಮದಲ್ಲಿ ಇರುವ ಶಾಂತಿಯ ವಾತಾವರಣ ಕದಡಲಿದೆ. ಬಾಗೇಶಪುರದಲ್ಲಿ ಮದ್ಯದ ಅಂಗಡಿಯ ಪರವಾನಗಿ ಪಡೆದು ಅಂಗಡಿಯನ್ನು ತೆರೆಯಲು ಮುಂದಾಗಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಪಟ್ಟು: ಗ್ರಾಮದಲ್ಲಿ ಖಾಸಗಿ ಮದ್ಯದ ಅಂಗಡಿ ತೆರೆಯುವ ಬಗ್ಗೆ ವದಂತಿ ಕೇಳಿ ಬಂದಿದ್ದರಿಂದ ಈ ಬಡಾವಣೆಯ ಸಾರ್ವಜನಿಕರು ಮದ್ಯದ ಅಂಗಡಿಯನ್ನು ನಿಷೇಧಕ್ಕೆ ಅರ್ಜಿಯನ್ನು ಸಲ್ಲಿಸಿದ್ದರು. ಆದರೆ, ಮತ್ತೆ ಮದ್ಯದ ಅಂಗಡಿಯನ್ನು ತೆರೆಯುವುದಾಗಿ ಕೇಳಿ ಬರುತ್ತಿರುವುದರಿಂದ ಯಾವುದೇ ಕಾರಣಕ್ಕೆ ಮದ್ಯದ ಅಂಗಡಿ ತೆರೆಯಲು ಅವಕಾಶ ನೀಡಬಾರದು ಎಂದು ಪಟ್ಟು ಹಿಡಿದರು.
ಆರೋಪ: ಜನರು ಈಗ ಗ್ರಾಮದಲ್ಲಿ ನೆಮ್ಮದಿಯಿಂದ ಜೀವನ ನಡೆಸುತ್ತಿದ್ದು, ಮದ್ಯದ ಅಂಗಡಿಗೆ ಅನುಮತಿ ನೀಡಿದರೆ ಇಲ್ಲಿರುವ ಶಾಂತಿಯ ವಾತಾವರಣ ಹಾಳಾಗಲಿದೆ. ಮದ್ಯದ ಅಂಗಡಿಯಿಂದ ಗ್ರಾಮದಲ್ಲಿ ಮಹಿಳೆಯರು, ಮಕ್ಕಳು ಓಡಾಡಲು ಸಾಧ್ಯವಾಗುವುದಿಲ್ಲ. ಕುಡುಕರ ಸಂಖ್ಯೆ ಹೆಚ್ಚಾಗಲಿದ್ದು, ಇದರಿಂದ ಸಾಕಷ್ಟು ಕುಟುಂಬಗಳು ಬೀದಿಗೆ ಬೀಳಲಿವೆ. ನೆಮ್ಮದಿಯ ಜೀವನ ನಡೆಸಲು ಕಡಿವಾಣ ಹಾಕಿದಂತಾಗುತ್ತದೆ ಎಂದು ಆರೋಪಿಸಿದರು.
ಒತ್ತಾಯ: ಗ್ರಾಮದ ಸುತ್ತುಮುತ್ತ ಮದ್ಯದ ಅಂಗಡಿಗಳು ಇಲ್ಲ. ಈಗ ಖಾಸಗಿ ವ್ಯಕ್ತಿಗಳಿಗೆ ಇಲ್ಲಿ ಮದ್ಯದ ಅಂಗಡಿಯನ್ನು ತೆರೆಯಲು ಅನುಮತಿ ನೀಡಿರುವುದು ಸರಿಯಲ್ಲ. ಗ್ರಾಮಸ್ಥರೇ ಮದ್ಯದ ಅಂಗಡಿ ಬೇಡ ಅಂತ ಹೇಳುತ್ತಿರುವಾಗ ಒತ್ತಾಯಿದಿಂದ ಇಲ್ಲಿ ಅಂಗಡಿ ತೆರೆಯುವಂತಹ ಅವಶ್ಯಕತೆ ಏನಿದೆ. ಆದ್ದರಿಂದ, ಕೂಡಲೇ ಅಂಗಡಿ ತೆರೆಯಬೇಕೆಂದಿರುವ ನಿರ್ಧಾರವನ್ನು ಕೈಬಿಡುವಂತೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಗ್ರಾಮಸ್ಥರಾದ ರಮೇಶ್, ಈರೇಗೌಡ, ಪ್ರಸಾದ್, ಚಂದ್ರೇಗೌಡ, ಮಂಜೇಗೌಡ, ದೊಡ್ಡೇಗೌಡ, ಶಾಂತಮ್ಮ, ಪುಟ್ಟಲಕ್ಷ್ಮಿ, ಜಯಮ್ಮ, ಸುಶೀಲ, ಶಾಂತಮ್ಮ, ಇಂದ್ರಾಣಿ, ಗಂಗಮ್ಮ, ಸಂಗೀತ, ಗೌರಮ್ಮ, ಪಾರ್ವತಿ, ಸರೋಜ, ರೂಪ, ನಾಗಮಣಿ, ಸುಮಾ, ಕೃಷ್ಣೇಗೌಡ ಹಾಗೂ ಇತರರು ಇದ್ದರು.