'ರಕ್ತದಾನದ ಬಗ್ಗೆ ಜಾಗೃತಿ ಮೂಡಿಸಬೇಕಾಗಿದೆ'
ಕ.ಪ್ರ.ವಾರ್ತೆ ಸಕಲೇಶಪುರ ಜ. 27
ರಕ್ತದಾನದ ಬಗ್ಗೆ ಯುವಕರಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಾಗಿದೆ ಎಂದು ಪುರಸಭೆ ಅಧ್ಯಕ್ಷ ಎಸ್.ಎನ್. ಸತೀಶ್ ಹೇಳಿದ್ದಾರೆ.
ಪಟ್ಟಣದ ಹಾಡ್ಯಸುಬ್ಬೇಗೌಡರ ಪುರಭವನದಲ್ಲಿ ಜೆ.ಸಿ.ಐ ಹಾಗೂ ಸ್ನೇಹ ಯೂತ್ ಮೂವ್ಮೆಂಟ್ ಭಾನುವಾರ ಆಯೋಜಿಸಿದ್ದ ಭೂಗತಪಾತಕಿ ಗುಂಡಿಗೆ ಬಲಿಯಾದ ಪಿ.ಎಸ್.ಐ ಮಲ್ಲಿಕಾರ್ಜುನ್ ಬಂಡೆಯವರ ಸ್ಮರಣಾರ್ಥವಾಗಿ ಏರ್ಪಡಿಸಲಾಗಿದ್ದ ರಕ್ತದಾನ ಶಿಬಿರ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ರಕ್ತ ನೀಡಿದರೆ ರೋಗಕ್ಕೆ ತುತ್ತಾಗುತ್ತಾರೆಂಬ ಮೂಢ ನಂಬಿಕೆಯನ್ನು ದೂರ ಮಾಡುವ ಮೂಲಕ ಅಮೂಲ್ಯವಾದ ರಕ್ತವನ್ನು ದಾನಮಾಡುವಂತೆ ಯುವಕರಲ್ಲಿ ಜಾಗೃತಿ ಮೂಡಿಸಬೇಕಾಗಿದೆ ಎಂದರು.
ರೋಟರಿ ಇನ್ನರ್ವ್ಹೀಲ್ ಅಧ್ಯಕ್ಷೆ ಚನ್ನವೇಣಿ ಎಂ. ಶೆಟ್ಟಿ ಮಾತನಾಡಿ, ನಿಷ್ಠಾವಂತ ಅಧಿಕಾರಿಯನ್ನು ನಾಡಿನ ಎಲ್ಲೆಡೆ ನೆನೆಯವಂತಹ ಇಂತಹ ಕಾರ್ಯಕ್ರಮಗಳು ಜರುಗಿದರೆ ಹುತಾತ್ಮರ ಆತ್ಮಕ್ಕೆ ಗೌರವ ನೀಡಿದಂತಾಗುತ್ತದೆ ಎಂದರು.
ಸಂಸ್ಥೆಯ ಅಧ್ಯಕ್ಷ ಸಚಿನ್ ಅಧ್ಯಕ್ಷತೆ ವಹಿಸಿದ್ದರು. ಪುರಸಭೆ ಉಪಾಧ್ಯಕ್ಷ ಮುಖೇಶ್ ಶೆಟ್ಟಿ, ಪತ್ರಕರ್ತರ ಸಂಘದ ಅಧ್ಯಕ್ಷ ಚಂದ್ರಶೇಖರ್, ಪುರಸಭೆ ಸದಸ್ಯ ಸಂತೋಷ್ ಇತರರು ಇದ್ದರು.