ಶುಂಠಿ ಜತೆಗೆ ಪರ್ಯಾಯ ಬೆಳೆಗಳಿಗೂ ಆದ್ಯತೆ ನೀಡಿ
ಅರಕಲಗೂಡು: ಶುಂಠಿ ಹೆಳೆಗೆ ವಿಶ್ವದೆಲ್ಲೆಡೆ ಬಾರೀ ಪ್ರಮಾಣದ ಬೇಡಿಕೆ ಇದ್ದು, ಇತರೆಡೆಗಳಿಗೂ ರಫ್ತು ನಡೆಯುತ್ತಿರುವುದರಿಂದ ಶುಂಠಿ ಬೆಳೆಗೆ ಉತ್ತಮ ಬೇಡಿಕೆ ನಿರ್ಮಾಣವಾಗಿದೆ. ಇದರಿಂದ ಇಲ್ಲಿನ ರೈತರು ಆರ್ಥಿಕವಾಗಿ ಉತ್ತಮಗೊಳ್ಳಲು ಸಾಧ್ಯವಾಗಿದೆ ಎಂದು ಹಿರಿಯ ತೋಟಗಾರಿಕೆ ಇಲಾಖೆ ಸಹಾಯಕ ನಿರ್ದೇಶಕಿ ಶ್ವೇತಾ ತಿಳಿಸಿದ್ದಾರೆ.
ಅವರು ಇಲ್ಲಿನ ಕಸಬಾ ಹೋಬಳಿ ಕೆಲ್ಲೂರು ಗ್ರಾಮದ ಚಿಕ್ಕ ರಾಜೇಗೌಡರ ಜಮೀನಿನಲ್ಲಿ ಖಾಸಗಿ ಕಂಪೆನಿ ಟ್ರೈಪಿಕಲ್ ಆಗ್ರೋ ಇಂಡಿಯಾ ಲಿಮಿಟೆಡ್ ಕಂಪೆನಿ ಆಯೋಜಿಸಿದ್ದ ಶುಂಠಿ ಬೆಳೆ ಕ್ಷೇತ್ರೋತ್ಸವ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ಕ್ಷೇತ್ರೋತ್ಸವಗಳನ್ನು ರೈತರ ಜಮೀನುಗಳಲ್ಲೇ ಆಯೋಜಿಸುವುದರಿಂದ ಅಕ್ಕ ಪಕ್ಕದ ರೈತರಿಗೂ ಕೃಷಿ ಕುರಿತ ಪ್ರಾತ್ಯಕ್ಷಿಕೆ ದೊರೆಯಲು ಸಾಧ್ಯವಾಗುತ್ತದೆ. ಇದೊಂದು ಒಳ್ಳೆಯ ಕಾರ್ಯಕ್ರಮ ಎಂದು ತಿಳಿಸಿದರು.
ಯಥೇಚ್ಛ ಬೆಳೆ: ಶುಂಠಿ ಬೆಳೆಯನ್ನು ಯಥೇಚ್ಛವಾಗಿ ಬೆಳೆಯಲಾಗುತ್ತಿದೆ. ಇದೊಂದೇ ಬೆಳೆ ನಿರಂತರವಾಗಿ ಬೆಳೆಯುವುದರಿಂದ ಭೂಮಿಯ ಫಲವತ್ತತೆ ಕಡಿಮೆಯಾಗುತ್ತದೆ. ಆದ್ದರಿಂದ ಕಾಲ ಕಾಲಕ್ಕೆ ಇತರ ಬೆಳೆಗಳಿಗೂ ಆಧ್ಯತೆ ನೀಡಬೇಕು ಎಂದು ಸಲಹೆ ನೀಡಿದರು. ತೋಟಗಾರಿಕೆ ಕೃಷಿ ಚಟುವಟಿಕೆಗೆ ಸಂಬಂಧಿಸಿದಂತೆ ತಾಂತ್ರಿಕ ಮಾಹಿತಿಗಳು ಬೇಕಿದ್ದರೆ ಇಲಾಖೆಯನ್ನು ಸಂಪರ್ಕಿಸುವಂತೆ ತಿಳಿಸಿದರು.
ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದ ಶುಂಠಿ ಬೆಳೆಗಾರ, ಒಂದು ಎಕರೆ ಜಮೀನಿಗೆ 15 ಚೀಲ ಶುಂಠಿ ಬಿತ್ತನೆ ಮಾಡಿ ಪ್ರತಿ ಚೀಲಕ್ಕೆ 22 ಚೀಲದಂತೆ ಶುಂಠಿ ಬೆಳೆ ಬೆಳೆದಿದ್ದು, ಇದಕ್ಕೆ ಕಾಲಕಾಲಕ್ಕೆ ಶುಂಠಿ ಬೆಳೆ ತರಬೇತುದಾರ ಗಿರೀಶ್ ಅವರು ನೀಡಿದ ಮಾರ್ಗದರ್ಶನ ಮತ್ತು ಔಷಧೋಪಚಾರದಿಂದ ಸಾಧ್ಯವಾಯಿತು ಎಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಮಾಜಿ ಜಿಲ್ಲಾ ಪಂಚಾಯಿತಿ ಸದಸ್ಯ ಹೆಚ್.ಎಸ್.ಶಂಕರ್ ಮಾತನಾಡಿ, ರಾತರು ಸೋಮಾರಿಗಳಾಗದೇ ಕೃಷಿಯ ಬಗೆಗೆ ಹೆಚ್ಚಿನ ಕಾಳಜಿ ವಹಿಸಿದಲ್ಲಿ ಉತ್ತಮ ಬೆಳೆ ತೆಗೆದು ಆರ್ಥಿಕವಾಗಿ ಮುಂದೆ ಬರಲು ಸಾಧ್ಯವಿದೆ ಎಂದು ನುಡಿದರು. ಹಿಂದಿನ ವರ್ಷಗಳಂತೆ ಪ್ರಸಕ್ತ ದಲ್ಲಾಳಿಗಳ ಹಾವಳಿ ಕಡಿಮೆ ಆಗುತ್ತಿದೆ.ರೈತರು ದಲ್ಲಾಳಿಗಳನ್ನು ಅವಲಂಭಿಸದೇ ನೇರವಾಗಿ ಮಾರುಕಟ್ಟೆಗೆ ತೆರಳುವಂತಾಗಬೇಕು.ಆಗ ಲಾಭ ಗಳಿಸಲು ಸಾಧ್ಯವಾಗುತ್ತದೆ ಎಂದು ನುಡಿದರು. ಕಂಪೆನಿಯ ಜಿಲ್ಲಾ ಸಂಸ್ಥಾಪಕ ಮಾರಾಟಾಧಿಕಾರಿ ರಘುಪತಿ ಮಾತನಾಡಿದರು.
ಮಾರುಕಟ್ಟೆ ವಿಸ್ತರಣಾಧಿಕಾರಿ ಶರತ್ ಕುಮಾರ್ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಉತ್ತಮ ಬೆಳೆ ಬೆಳೆದ ಚಿಕ್ಕ ರಾಜೇಗೌಡ ಮತ್ತು ಉತ್ತಮ ತರಬೇತುದಾರ ಗಿರೀಶ್ ಇವರುಗಳನ್ನು ಸನ್ಮಾನಿಸಲಾಯಿತು.