ಖಾತ್ರಿ ಅಕ್ರಮಗಳ ವಿರುದ್ಧ ದೂರು
ಆಲೂರು: ಉದ್ಯೋಗ ಖಾತ್ರಿ ಯೋಜನೆಯಡಿ ನಡೆಯುತ್ತಿರುವ ಅಕ್ರಮಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಯು.ಡಿ. ಲಕ್ಷ್ಮಣರಾಜೇ ಅರಸು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಯಂತ್ರಗಳ ಬಳಕೆ: ತಾಲೂಕಿನ ದೊಡ್ಡಗಣಗಾಲು ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಉಮಾದೇವರಹಳ್ಳಿ ಗ್ರಾಮದ ಗುಂಡಿಕಟ್ಟೆ ಎಂಬ ಚಿಕ್ಕಕಟ್ಟೆಯ ಕೆಲ ಕಾಮಗಾರಿಯನ್ನು ಉದ್ಯೋಗ ಖಾತ್ರಿ ಯೋಜನೆಯಡಿ ಏರಿ, ತೂಬು ಮತ್ತು ಕೋಡಿ ಕಾಮಗಾರಿಗಳನ್ನು ಯಂತ್ರಗಳ ಸಹಾಯದಿಂದ ಮಾಡುತ್ತಿದ್ದು, ಈ ಕಟ್ಟೆ ಮಳೆ ನೀರಿನ ಆಶ್ರಯದಿಂದ ದನಕರುಗಳಿಗೆ ನೀರು ಕುಡಿಯಲು ಮಾತ್ರ ಸೀಮಿತವಾಗಿದ್ದು, ಅದನ್ನು ಗುತ್ತಿಗೆದಾರರೊಬ್ಬರು ಕೂಲಿಗಾರರಿಂದ ಕೆಲಸ ಮಾಡದೇ ಯಂತ್ರಗಳಿಂದ ಕೆಲಸ ಮಾಡಿಸುತ್ತಿದ್ದಾರೆ. ಅಲ್ಲದೇ, ಕೆರೆ ಕಟ್ಟೆಗೆ ಏರಿ, ತೂಬು ಮತ್ತು ಕೋಡಿ ನಿರ್ಮಿಸಲಾಗುತ್ತಿದ್ದು, ಜೆಸಿಬಿ ಮತ್ತು ಹಿಟಾಚಿ ಯಂತ್ರಗಳನ್ನು ಬಳಸಿ ಸುಮಾರು 20 ಟ್ರ್ಯಾಕ್ಟರ್ಗಳಿಂದ ಮಣ್ಣನ್ನು ತೆಗೆಯುತ್ತಿದ್ದಾರೆ.
ಕಾರ್ಯನಿರ್ವಹಣಾಧಿಕಾರಿಗೆ ದೂರು: ಗುತ್ತಿಗೆದಾರರು ಅನುಸರಿಸುತ್ತಿರುವ ಈ ಕ್ರಮ ಉದ್ಯೋಗ ಖಾತ್ರಿ ಯೋಜನೆಗೆ ವಿರುದ್ಧವಾಗಿದೆ. ಆದ್ದರಿಂದ ತಾಲೂಕು ಪಂಚಾಯ್ತಿಯ ಕಾರ್ಯನಿರ್ವಹಣಾಧಿಕಾರಿ ಶೀಘ್ರ ಇತ್ತ ಗಮನ ಹರಿಸಿ, ಗ್ರಾಮದ ಕೆರೆಯ ಕಾಮಗಾರಿಯಲ್ಲಿ ಅಕ್ರಮ ನಡೆಸುತ್ತಿರುವ ಗುತ್ತಿಗೆದಾರರ, ಸಂಬಂಧಪಟ್ಟ ಪಿಡಿಓ ಹಾಗೂ ಅಧಿಕಾರಿಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ದೊಡ್ಡ ಕಣಗಾಲು ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಯು.ಡಿ. ಲಕ್ಷ್ಮಣರಾಜೇ ಅರಸು ತಾಲೂಕು ಪಂಚಾಯ್ತಿ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿದ್ದಾರೆ.
ಪ್ರತಿಭಟನೆಯ ಎಚ್ಚರಿಕೆ: ಈ ಸಂಬಂಧವಾಗಿ ಶೀಘ್ರ ಕ್ರಮ ಕೈಗೊಳ್ಳದಿದ್ದಲ್ಲಿ ನಾವು ಲೋಕಾಯುಕ್ತರಿಗೆ ದೂರು ನೀಡುವುದಲ್ಲದೆ ತಾಲೂಕು ಪಂಚಾಯ್ತಿ ಕಚೇರಿ ಎದುರು ಪ್ರತಿಭಟನೆ ನಡೆಸಿದುವುದಾಗಿ ಎಚ್ಚರಿಕೆ ನೀಡಿದ್ದಾರೆ.