'ಗುರಿ ಹೊಂದುವ ಮೂಲಕ ಸಾಧನೆ ಮಾಡಬೇಕು'
ಹಾಸನ: ವಿದ್ಯಾರ್ಥಿಗಳು ಜೀವನದಲ್ಲಿ ಗುರಿ ಹೊಂದುವ ಮೂಲಕ ಸಾಧನೆಗೈಯ್ಯಬೇಕು ಎಂದು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ರವಿ ಡಿ. ಚನ್ನಣ್ಣನವರ್ ಹೇಳಿದರು.
ನಗರದ ಬಿ.ಇಜಿ. ಕಾಲೇಜು ಸಭಾಂಗಣದಲ್ಲಿ ಕರ್ನಾಟಕ ರಾಜ್ಯ ಮುಕ್ತ ವಿಶ್ವವಿದ್ಯಾನಿಲಯ ಹಾಸನ ಪ್ರಾದೇಶಿಕ ಕೇಂದ್ರ, ಎಂಎ, ಎಂಕಾಂ ತರಗತಿಗಳ ಸಂಪರ್ಕ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಅವರು, ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಯೋಜನೆಗಳನ್ನು ಹಾಕಿಕೊಳ್ಳುವುದರ ಮೂಲಕ ಗುರಿ ಸಾಧಿಸಬೇಕು. ಜೀವನದಲ್ಲಿ ಸಾಧನೆ ಮಾಡುವ ನಿರ್ಧಾರ ಕೈಗೊಂಡಾಗ ಮಾತ್ರ ಗುರಿ ತಲುಪಬಹುದು ಎಂದು ಹೇಳಿದರು.
ಕಾಳಜಿ ಬೇಕು: ವಿದ್ಯಾರ್ಥಿಗಳು ಕಲಿತ ಶಿಕ್ಷಣ ಉಪಯೋಗ ಆಗದಿದ್ದರೆ ಕಲಿತದ್ದು ಶೂನ್ಯವಾಗಲಿದೆ. ಸಾಧನೆ ಮಾಡುವವರಿಗೆ ಜಗತ್ತು ವಿಶಾಲವಾಗಿದ್ದು, ಅವಕಾಶಗಳು ಬಹಳಷ್ಟಿವೆ. ಶಿಕ್ಷಣ ಕಲಿತು ಅಜ್ಞಾನಿಗಳಾಗಿರುವುದು ಉಂಟು, ಶಿಕ್ಷಣ ಕಲಿಯದವರು ಬುದ್ಧಿವಂತರಾಗಿರುವಂತಹ ಉದಾಹರಣೆಗಳು ಬಹಳಷ್ಟಿದೆ. ತನ್ನ ಬದುಕನ್ನು ರೂಪಿಸಿಕೊಳ್ಳುವ ಕಾಳಜಿ ಇದ್ದರೆ, ಗುರಿ ತಲುಪಲು ಸಾಧ್ಯ ಎಂದರು.
ಜೀವನದಲ್ಲಿ ಸೋಲು ಅನುಭವಿಸಿದರೆ ಅದಕ್ಕೆ ಅಂಜದೇ ಮುಂದೆ ಸಾಗಬೇಕು ಎಂದ ಅವರು, ಶಿಕ್ಷಣ ಪಡೆಯುವ ಮೂಲಕ ದೇಶದ ಅಭಿವೃದ್ಧಿಗೆ ಶ್ರಮಿಸಬೇಕು ಎಂದ ಕರೆ ನೀಡಿದರು.
ಕಾರ್ಯಕ್ರಮದಲ್ಲಿ ಬಿಈಜಿ ಕಾಲೇಜಿನ ಪ್ರಾಂಶುಪಾಲ ಬಿ.ಈ. ಜಗದೀಶ್, ಕರಾಮುವಿ ಕನ್ನಡ ವಿಭಾಗದ ಅಧ್ಯಕ್ಷ ಡಿ.ಟಿ. ಬಸವರಾಜ್, ಅರ್ಥಶಾಸ್ತ್ರ ವಿಭಾಗದ ಅಧ್ಯಕ್ಷರು ಎಂ.ಎಸ್. ರಮಾನಂದ್, ಸಮಾಜಶಾಸ್ತ್ರ ವಿಭಾಗದ ಮುಖ್ಯಸ್ಥ ಎಂ.ಎಚ್. ಕೃಷ್ಣಪ್ಪ, ಇತಿಹಾಸ ವಿಭಾಗದ ಮುಖ್ಯಸ್ಥ ಸೋಮಶೇಖರ್, ಜೈಕುಮಾರ್, ಪ್ರಾಂಶುಪಾಲೆ ರೇಖಾ, ಪತ್ರಕರ್ತ ಮದನ್ ಗೌಡ ಹಾಗೂ ಇತರರು ಇದ್ದರು.