ಚುಡಾಯಿಸುತ್ತಿದ್ದವರಿಗೆ ಬಿತ್ತು ಧರ್ಮದೇಟು
ಅರಸೀಕೆರೆ: 65ನೇ ಗಣರಾಜ್ಯೋತ್ಸವ ಸಮಾರಂಭದ ವೇಳೆ ಮೈದಾನದಲ್ಲಿ ಹಾಜರಿದ್ದ ಕೆಲ ಪೋಲಿ ಪುಂಡರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಶಾಲಾ- ಕಾಲೇಜು ವಿದ್ಯಾರ್ಥಿನಿಯರನ್ನು ರೇಗಿಸುತ್ತಿದ್ದರು. ಇದನ್ನು ಗಮನಿಸಿದ ಸಾರ್ವಜನಿಕರು ಗೂಸಾ ನೀಡಿ ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆಯಿತು.
ಪಟ್ಟಣದ ಜೇನುಕಲ್ ಕ್ರೀಡಾಂಗಣದಲ್ಲಿ ಆಯೋಜಿಸಲಾಗುವ ರಾಷ್ಟ್ರೀಯ ಹಬ್ಬ ಹಾಗೂ ನಾಡಹಬ್ಬಗಳ ಆಚರಣೆಯ ವೇಳೆ ಕ್ರೀಡಾಂಗಣಕ್ಕೆ ಆಗಮಿಸುವ ಕೆಲ ದುಷ್ಕರ್ಮಿಗಳು ಪ್ರತಿಬಾರಿಯೂ ಇಂತಹ ನೀಚ ಕೃತ್ಯಕ್ಕೆ ಇಳಿಯುವ ಮೂಲಕ ಶಾಲಾ ಕಾಲೇಜು ವಿದ್ಯಾರ್ಥಿನಿಯರಿಗೆ ನಿರಂತರ ಕಿರುಕುಳ ನೀಡುತ್ತಿದ್ದುದು ಪೊಲೀಸರಿಗೆ ಸವಾಲಾಗಿ ಪರಿಣಮಿಸಿತು. ಗುಪ್ತಚರ ಅಧಿಕಾರಿಗಳು ಈ ಬಗ್ಗೆ ಪ್ರಶ್ನಿಸಿದಾಗ ಅವರನ್ನೇ ಅವ್ಯಾಚ್ಚ ಶಬ್ಧಗಳಿಂದ ನಿಂದಿಸಿದ್ದಾರೆ. ಸ್ಥಳದಲ್ಲಿಯೇ ಇದ್ದ ಪೋಷಕರು ಕಿಡಿಗೇಡಿಗಳಿಗೆ ಥಳಿಸಿ ಪೋಲಿಸರಿಗೆ ನೀಡಿದ್ದಾರೆ. ನಂತರ ವಶಕ್ಕೆ ಪಡೆದ ಪೊಲೀಸರು ಕಿಡಿಗೇಡಿಗಳನ್ನು ವಿಚಾರಣೆಗಾಗಿ ಠಾಣೆಗೆ ಕರೆದೊಯ್ದರು.