'ಶಾಲಾ ವಾತಾವರಣ ಅರಿವು ಮೂಡಿಸಬೇಕು'
ಜಾವಗಲ್: ಶಾಲಾ ವಾತಾವರಣವು ಮಕ್ಕಳಲ್ಲಿ ಪರಿಸರದ ಬಗ್ಗೆ ಅರಿವು ಮೂಡಿಸುವಂತಿರಬೇಕೆಂದು ಕೋಳಗುಂದ ಸರ್ಕಾರಿ ಪದವಿ ಪೂರ್ವ ಕಾಲೆಜಿನ ಉಪನ್ಯಾಸಕ ಕೆ.ಎಸ್. ರಾಘವೇಂದ್ರ ಅಭಿಪ್ರಾಯಪಟ್ಟರು.
ಜಾವಗಲ್ ಶ್ರೀನಿಧಿ ಕೈಗಾರಿಕಾ ತರಬೇತಿ ಮತ್ತು ಕಾನ್ವೆಂಟ್ನ ವಾರ್ಷಿಕೋತ್ಸವ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು, ಪ್ರಾಥಮಿಕ ಹಂತದಲ್ಲಿ ಮಕ್ಕಳು ಸ್ವತಂತ್ರವಾಗಿ ಮತ್ತು ಸ್ವಚ್ಛಂದವಾಗಿ ಕಲಿಯುವ ಅವಕಾಶ ಕಲ್ಪಿಸಬೇಕು ಎಂದರು.
ದೂರದರ್ಶನ ಹಾಗೂ ಮೊಬೈಲ್ ಸಂಸ್ಕೃತಿಯಿಂದ ದೂರವಿಡಬೇಕು. ಪೋಷಕರು ದೂರದರ್ಶನದ ವ್ಯಾಮೋಹ ಕಡಿಮೆಮಾಡಿ, ಅದರಲ್ಲೂ ಮಹಿಳೆಯರು ಧಾರವಾಹಿವ್ಯಾಮೋಹ ಬದಿಗಿರಿಸಿ ಮಕ್ಕಳ ವಿದ್ಯಾಭ್ಯಾಸಕ್ಕೆ ಹೆಚ್ಚಿನ ಕಾಳಜಿ ನೀಡಬೇಕೆಂದರು. ತಾಪಂ ಸದಸ್ಯೆ ಲಕ್ಷ್ಮೀ ರವಿಶಂಕರ್ ಮಾತನಾಡಿ, ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಗಳಾದ ಕ್ರೀಡೆ ಮತ್ತು ಸಾಂಸ್ಕೃತಿಕ ಚಟುವಟಿಕೆಗಳಿಗೆ ಪ್ರೋತ್ಸಾಹ ನೀಡಬೇಕೆಂದರು.
ಕಾರ್ಯಕ್ರಮ ಉದ್ಘಾಟಿಸಿದ ಗ್ರಾಪಂ ಕವಿತಾ ಮಂಜುನಾಥ್ ಮಾತನಾಡಿ, ವಿದ್ಯಾರ್ಥಿಗಳು ಚೆನ್ನಾಗಿ ವ್ಯಾಸಂಗ ಮಾಡಬೇಕು ಎಂದ ಅವರು, ವಿದ್ಯೆ ಜತೆಗೆ ಆಟೋಟಗಳು ಅವಶ್ಯಕ ಎಂದು ಹೇಳಿದರು.
ಅಧ್ಯಕ್ಷತೆ ವಹಿಸಿದ್ದ ಸಂಸ್ಥೆಯ ಕಾರ್ಯದರ್ಶಿ ಜೆ.ಆರ್. ತಿಮ್ಮಶೆಟ್ಟಿ ಮಾತನಾಡಿ, ಶಿಕ್ಷಕರು ಮತ್ತು ಪೋಷಕರು ಮಕ್ಕಳ ಕಲಿಕೆಯಲ್ಲಿ ಹೆಚ್ಚಿನ ಗಮನ ಹರಿಸಬೇಕೆಂದರು. ಜೆ.ಆರ್. ವಸಂತಕುಮಾರ್, ಜೆ.ಎಸ್.ರವಿಶಂಕರ್, ಶ್ರೀಕಾಂತ್, ಹೇಮಂತ್, ಸುರೇಶ್, ಚೈತ್ರ ಮಾತನಾಡಿದರು.
ಕ್ರೀಡೆ ಮತ್ತು ಸಾಂಸ್ಕೃತಿಕ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳು ಮತ್ತು ಪೋಷಕರಿಗೆ ಬಹುಮಾನ ನೀಡಲಾಯಿತು. ಪ್ರಾಂಶುಪಾಲರಾದ ಸೌಮ್ಯ, ಮುಖ್ಯಶಿಕ್ಷಕಿ ಶೋಭಾ, ಜೆ.ವಿ. ಹರೀಶ್ ಇದ್ದರು.