ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಲ ಸಿಗಬೇಕು
ಹಾಸನ: ಆರ್ಥಿಕವಾಗಿ ದುರ್ಬಲರಾದ ಸಮಾಜದ ಕಟ್ಟಕಡೆಯ ವ್ಯಕ್ತಿಗೂ ಸಾಲ ಸೌಲಭ್ಯ ದೊರಕಿಸಿಕೊಡುವ ಜವಾಬ್ದಾರಿ ಸಹಕಾರಿ ಸಂಸ್ಥೆಗಳದ್ದಾಗಿದೆ ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳ ನಿಗಮದ ನಿರ್ದೇಶಕರಾದ ಆರ್.ಟಿ. ದ್ಯಾವೇಗೌಡ ತಿಳಿಸಿದ್ದಾರೆ.
ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳಿ ನಿಗಮ, ಹಾಸನ ಜಿಲ್ಲಾ ಸಹಕಾರ ಒಕ್ಕೂಟ, ಸಹಕಾರ ಇಲಾಖೆ ಇವರ ಸಂಯುಕ್ತಾಶ್ರಯದಲ್ಲಿ ಮಂಗಳವಾರ ಜಿಲ್ಲಾ ಸಹಕಾರ ಕೇಂದ್ರ ಬ್ಯಾಂಕ್ ಎಚ್.ಡಿ. ದೇವೇಗೌಡ ರೈತ ಸಭಾ ಭವನದಲ್ಲಿ ಜಿಲ್ಲೆಯ ಪತ್ತಿನ ಸಹಕಾರ ಸಂಘಗಳ ಅಧ್ಯಕ್ಷರು, ನಿರ್ದೇಶಕರು ಮತ್ತು ಮುಖ್ಯ ಕಾರ್ಯ ನಿರ್ವಹಣಾಧಿಕಾರಿಗಳಿಗೆ ನಡೆದ ರಾಜ್ಯ ಮಟ್ಟದ ತರಬೇತಿ ಕಾರ್ಯಾಗಾರವನ್ನು ಅವರು ಉದ್ಘಾಟಿಸಿ ಮಾತನಾಡಿದ ಅವರು, ಜನತೆಗೆ ಸಾಲ ಸೌಲಭ್ಯ ಕಲ್ಪಿಸುವ ನಿಟ್ಟಿನಲ್ಲಿ ಪತ್ತಿನ ಸಹಕಾರ ಸಂಘಗಳು ಹೆಚ್ಚು ಆಸಕ್ತಿ ವಹಿಸಿ ಸುಲಭ ರೀತಿಯಲ್ಲಿ ಸೌಲಭ್ಯ ಜನರಿಗೆ ದೊರಕಿಸಬೇಕು. ಪತ್ತಿನ ಸಹಕಾರ ಸಂಘಗಳ ಪ್ರಯೋಜನವನ್ನು ಹೆಚ್ಚಿನ ಸಂಖ್ಯೆಯಲ್ಲಿ ಬಳಸಿಕೊಂಡು ಜನತೆ ಅಭಿವೃದ್ಧಿ ಹೊಂದಲಿ ಎಂದರು.
ಪ್ರಯೋಜನ ತೆಗೆದುಕೊಳ್ಳಬೇಕು: ಹಾಸನ ಜಿಲ್ಲಾ ಸಹಕಾರ ಒಕ್ಕೂಟ ನಿಗಮದ ಅಧ್ಯಕ್ಷ ಕಾರ್ಲೆ ಇಂದ್ರೇಶ್ ಅವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ, ಸಹಕಾರಿ ಸಂಘ ಸಂಸ್ಥೆಗಳ ಕ್ಷೇತ್ರದಲ್ಲಿ ಪ್ರಾಮಾಣಿಕತೆ ಬಹುಮುಖ್ಯವಾಗಿದ್ದು, ಪರಸ್ಪರ ಸಹಕಾರದಿಂದ ಮಾತ್ರವೇ ಸಹಕಾರ ಸಂಸ್ಥೆಯು ಬೆಳೆಯಲು ಸಾಧ್ಯ. ಈ ನಿಟ್ಟಿನಲ್ಲಿ ವ್ಯವಹಾರ ಅನುಭವ, ಆಡಳಿತ ಜ್ಞಾನವನ್ನು ಪರಸ್ಪರ ಹಂಚಿಕೊಂಡು ಕಾರ್ಯ ನಿರ್ವಹಿಸುವುದು ಸಹಕಾರ ಸಂಸ್ಥೆಗಳಿಗೆ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಕಾರ್ಯಾಗಾರದ ಪ್ರಯೋಜನ ಪಡೆದುಕೊಳ್ಳುವಂತೆ ತಿಳಿಸಿದರು.
ನಿವೃತ್ತ ಅಪರ ನಿಬಂಧಕ ಬಿ.ಎ. ಮಹದೇವಪ್ಪ ಅವರು ಮಾತನಾಡಿ, ಸಹಕಾರಿ ಸಂಸ್ಥೆಗಳು ಬದಲಾವಣೆಗೆ ಹೊಂದಿಕೊಂಡು ಸ್ಪರ್ಧೆಯಲ್ಲಿ ಉಳಿಯಲು ಚಿಂತನೆ ಮಾಡಬೇಕು ಎಂದರು.
ಸರ್ವೋಚ್ಛ ನ್ಯಾಯಾಲಯದ ತೀರ್ಪಿನಂತೆ ಸಹಕಾರ ಸಂಘಗಳು ಮಾಹಿತಿ ಕಾಯ್ದೆಗೆ ಒಳಪಡುವುದಿಲ್ಲ. ಆದರೆ, ಯಾವುದೇ ಸದಸ್ಯ ಮಾಹಿತಿ ಕೇಳಿದರೂ ಮಾಹಿತಿ ನೀಡಬೇಕಾಗುತ್ತದೆ. 2014ರಲ್ಲಿ ನೇರ ತೆರಿಗೆ ಕಾಯ್ದೆ ಜಾರಿಗೆ ಬಂದರೆ ಸಹಕಾರ ಸಂಘಗಳು ಒಳಪಡುತ್ತವೆ. ಲಾಭದ ಹಣದಲ್ಲಿ ತೆರಿಗೆ ಪಾವತಿ ಮಾಡಬೇಕಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಮಹಾಮಂಡಳದ ನಿರ್ದೇಶಕ ಎಚ್.ಪಿ. ಹಿರಿಯಣ್ಣ, ಸಹಕಾರ ಸಂಘಗಳ ಸಂಯುಕ್ತ ನಿಬಂಧಕೆ ಕೆ.ಎಂ. ಆಶಾ, ಸಹಕಾರ ಸಂಘಗಳ ಲೆಕ್ಕ ಪರಿಶೀಧನಾ ಇಲಾಖೆ ಉಪನಿರ್ದೇಶಕ ಕೆ. ಶ್ರೀಧರ್, ಸಹಕಾರ ಸಂಘಗಳ ನಿವೃತ್ತ ಸಹಾಯಕ ನಿಬಂಧಕ ಎಸ್.ಜಿ. ಜೋಷಿ ಮತ್ತಿತರರು ಇದ್ದರು.