ಸುದ್ದಿ ಸಂಕ್ಷೇಪ
ಬಸ್- ಬೈಕ್ ಡಿಕ್ಕಿ ಮಹಿಳೆ ಸಾವು
ಹಾಸನ: ರಾಜ್ಯ ರಸ್ತೆ ಸಾರಿಗೆ ಬಸ್‌ಗೆ ಬೈಕ್ ಸಿಲುಕಿದ ಕಾರಣ ಮಹಿಳೆ ಸಾವನಪ್ಪಿದ್ದು, ಮತ್ತೊಬ್ಬ ವ್ಯಕ್ತಿ ಗಾಯಗೊಂಡಿರುವ ಘಟನೆ ಮಂಗಳವಾರ ನಡೆದಿದೆ.
ನಗರದ ಕೆ.ಆರ್. ಪುರಂ ನಿವಾಸಿ ಪ್ರೇಮಲತಾ (50) ಸಾವನಪ್ಪಿದ್ದು, ಜಾನ್ ವಿಲ್ಸನ್ (48) ಎಂಬುವರು ಗಾಯಗೊಂಡಿದ್ದು, ಅವರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಬೆಂಗಳೂರಿನಲ್ಲಿ ವಾಸವಾಗಿರುವ ಪ್ರೇಮಲತಾ ರವರು ಕೆಲಸದ ನಿಮಿತ್ತ ಹಾಸನಕ್ಕೆ ಬಂದಿದ್ದು, ತನ್ನ ತಮ್ಮನ ಮನೆಗೆ ಬೈಕ್‌ನಲ್ಲಿ ಹೋಗುವಾಗ ನಗರದ ಬಂಧೀಖಾನೆ ಬಳಿ ಸಾರಿಗೆ ಬಸ್ ಹಿಂಭಾಗದ ಚಕ್ರಕ್ಕೆ ಸಿಲುಕಿಕೊಂಡಿದ್ದಾರೆ. ಈ ವೇಳೆ ಹಿಂಬದಿ ಕುಳಿತಿದ್ದ ಪ್ರೇಮಲತಾ ಸ್ಥಳದಲ್ಲಿಯೇ ಸಾವನಪ್ಪಿದರು.
ರಾಜ್ಯಮಟ್ಟಕ್ಕೆ ಆಯ್ಕೆ
ಅರಸೀಕೆರೆ: ಪರೀಕ್ಷಾ ಫಲಿತಾಂಶದಲ್ಲಿ ಪ್ರತಿವರ್ಷ ಶೇ. 100 ಫಲಿತಾಂಶ ಪಡೆಯುತ್ತಿರುವ ಬಾಚೇನಹಳ್ಳಿ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿನಿಯರು ಕಳೆದ 30ರಂದು ಕಾರ್ಕಳ ತಾಲೂಕು ಪೆರ್ವಾಜೆಯಲ್ಲಿ ನಡೆದ ವಿಭಾಗ ಮಟ್ಟದ ಬಾಲ್‌ಬ್ಯಾಡ್ಮಿಂಟನ್ ಪಂದ್ಯಾವಳಿಯಲ್ಲಿ ವಿಜೇತರಾಗಿ ರಾಜ್ಯಮಟ್ಟಕ್ಕೆ ಆಯ್ಕೆಗೊಂಡಿದ್ದಾರೆ. ಗ್ರಾಮೀಣ ಮಕ್ಕಳ ಕ್ರೀಡಾ ಪ್ರತಿಭೆಯನ್ನು ಪ್ರಶಂಶಿಸಿರುವ ಕ್ಷೇತ್ರ ಶಿಕ್ಷಣಾಧಿಕಾರಿ ಎಸ್.ಪಿ.ನಟರಾಜ್, ಕ್ಷೇತ್ರ ಸಮನ್ವಯಾಧಿಕಾರಿ ಲಕ್ಷ್ಮಣ್ ಬೆಳೂಟಗಿ ಅಭಿನಂದಿಸಿದ್ದಾರೆ.
ಕಳೆದ ವರ್ಷ ಈ ಶಾಲೆ ಮಕ್ಕಳು ಕೋಲಾಟದಲ್ಲಿ ರಾಜ್ಯ ಮಟ್ಟಕ್ಕೆ ಹೋಗಿದ್ದನ್ನು ಇಲ್ಲಿ ಸ್ಮರಿಸಬಹುದು. ಶಾಲಾ ಬೋಧಕ ವರ್ಗ ಮತ್ತು ಪೋಷಕರ ಪ್ರೋತ್ಸಾಹ ಈ ಸಾಧನೆಗೆ ಕಾರಣ ಎಂದಿದ್ದಾರೆ ದೈಹಿಕ ಶಿಕ್ಷಣ ಶಿಕ್ಷಕ ಅಂಜನಪ್ಪ, ರಾಜ್ಯ ಮಟ್ಟದಲ್ಲಿ ಸ್ಪರ್ಧೆಗೆ ತೆರಳುವ ಕ್ರೀಡಾಪಟುಗಳಿಗೆ ಅಗತ್ಯ ಸಮವಸ್ತ್ರವನ್ನು ನೀಡುವುದಾಗಿ, ಶಾಲಾ ಪೋಷಕ ಹಾಗು ಗಂಡಸಿ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಪುಟ್ಟಸ್ವಾಮಿ ಮಕ್ಕಳನ್ನು ಅಭಿನಂದಿಸಿ ತಿಳಿಸಿದರು.
ಮಿಲಿಟರಿ ಕಾಲೇಜ್ ಪ್ರವೇಶ ಪರೀಕ್ಷೆ
ಹಾಸನ: ಜನವರಿ 2015ನೇ ಅಧಿವೇಶನಕ್ಕಾಗಿ ಉತ್ತರಕಾಂಡ ರಾಜ್ಯದ ಡೆಹರಾಡೂನ್‌ನಲ್ಲಿ ಇರುವ ರಾಷ್ಟ್ರೀಯ ಇಂಡಿಯನ್ ಮಿಲಿಟರಿ ಕಾಲೇಜಿನಲ್ಲಿ 8 ನೇ ತರಗತಿಗಾಗಿ ಪ್ರವೇಶ ಬಯಸುವ ಕರ್ನಾಟಕ ರಾಜ್ಯದ ಬಾಲಕರಿಗೆ ಅರ್ಹತಾ ಪ್ರವೇಶ ಪರೀಕ್ಷೆಯನ್ನು ಜೂ. 1 ಮತ್ತು 2ರಂದು ಬೆಂಗಳೂರು ಕೇಂದ್ರದಲ್ಲಿ ನಡೆಸಲಾಗುವುದು.
ಅಭ್ಯರ್ಥಿಗಳು ಯಾವುದೇ ಸರ್ಕಾರದಿಂದ ಮಾನ್ಯತೆ ಪಡೆದಿರುವ ಶಾಲೆಯಲ್ಲಿ 7ನೇ ತರಗತಿಯಲ್ಲಿ ಒದುತ್ತಿರುವ ಅಥವಾ ಉತ್ತೀರ್ಣರಾಗಿರುವ ಹಾಗೂ 2015ರ 0.1 ರಂತೆ 11 ವರ್ಷದಿಂದ 13 ವರ್ಷದೊಳಗಿರುವ (ಅಂದರೆ ದಿನಾಂಕ 2-1-2002 ರಿಂದ 1-7-2003 ರೊಳಗೆ ಜನಿಸಿರುವ) ಬಾಲಕರು ಮಾತ್ರ ಸದರಿ ಪ್ರವೇಶ ಪರೀಕ್ಷೆಗೆ ಅರ್ಹರಿರುತ್ತಾರೆ.
ಈ ಸಂಸ್ಥೆಯ ಮುಖ್ಯ ಗುರಿ- ಯುವಕರನ್ನು ದೇಶದ ಸಶಸ್ತ್ರ ಪಡೆಗೆ ಸೇರಲು ಸಿದ್ದಗೊಳಿಸುವುದು ಹಾಗೂ ಈ ನಿಟ್ಟಿನಲ್ಲಿ ಯುವಕರಿಗೆ ಸರ್ವ ರೀತಿಯ ವಿದ್ಯಾಭ್ಯಾಸ, ತರಬೇತಿ ನೀಡುವುದು.
ಕಾಲೇಜಿನಲ್ಲಿ ವರ್ಷವೊಂದಕ್ಕೆ ಪ್ರಸಕ್ತ ವಿದ್ಯಾಬ್ಯಾಸ ಶುಲ್ಕ ರು. 26,400 ಆಗಿದೆ. ವಿವರಣೆ ಪತ್ರ ಹಾಗೂ ಹಳೇ ಪ್ರಶ್ನೆ ಪತ್ರಿಕೆಗಳನ್ನು ಒಳಗೊಂಡ ಅರ್ಜಿ ನಮೂನೆಯನ್ನು ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ಭವನ, ನಂ 58, ಫೀಲ್ಡ್ ಮಾರ್ಷಲ್ ಕೆ.ಎಂ. ಕಾರಿಯಪ್ಪ ರಸ್ತೆ , ಬೆಂಗಳೂರು - 560025. ರಿಜಿಸ್ಟರ್ಡ್ ಪೋಸ್ಟ್ ಮುಖಾಂತರ ಅರ್ಜಿ ನಮೂನೆಗಳನ್ನು ಪಡೆಯಲಿಚ್ಚಿಸುವ ಅಭ್ಯರ್ಥಿಗಳು ಸಂಬಂಧಿಸಿದ ಬ್ಯಾಂಕ್ ಡ್ರಾಫ್ಟ್‌ನೊಂದಿಗೆ 11 ಉದ್ದ ಮತ್ತು 9 ಅಗಲ ಸೈಜಿನ ಸ್ವವಿಳಾಸದ (ಪೂರ್ಣ ಅಂಚೆ ವಿಳಾಸ, ದೂರವಾಣಿ ಸಂಖ್ಯೆಯೊಂದಿಗೆ) ಲಕೋಟೆಯ ಮೇಲೆ ರು. 40 ಮೌಲ್ಯದ ಅಂಚೆ ಚೀಟಿ ಲಗತ್ತಿಸಿ ಕಳುಹಿಸಬೇಕು.
ಭರ್ತಿ ಮಾಡಿದ ನಿಗದಿತ ಅರ್ಜಿ ನಮೂನೆಯ ಎರಡು ಪ್ರತಿಗಳನ್ನು ಈ ಕೆಳಗಿನ ಅಡಕಗಳೊಂದಿಗೆ ಮಾ. 31ರೊಳಗಾಗಿ ನಿರ್ದೇಶಕರು, ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ, ಬೆಂಗಳೂರು ಇವರಿಗೆ ಇವರ ಕಂಡಿಕೆ (2) ರಲ್ಲಿ ತಿಳಿಸಿರುವ ವಿಳಾಸಕ್ಕೆ ಸಲ್ಲಿಸಬೇಕು.
ಹೆಚ್ಚಿನ ಮಾಹಿತಿಗಾಗಿ, ದೂರವಾಣಿ ಸಂಖ್ಯೆ 080-25589459 ಸಂಪರ್ಕಿಸುವಂತೆ ಹಾಸನ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆಯ ಉಪನಿರ್ದೇಶಕರು ಕೋರಿದ್ದಾರೆ.
ಹದಗೆಟ್ಟ ರಸ್ತೆಗೆ ಬೇಕಾಬಿಟ್ಟಿ ಕಾಮಗಾರಿ: ಗ್ರಾಮಸ್ಥರ ಆಕ್ರೋಶ
ಅರಸೀಕೆರೆ: ತಾಲೂಕಿನ ಬೆಂಡೆಕೆರೆ ಹೃದಯಭಾಗದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಿಂದ ಹುಳಿಯಾರು ಬೇಲೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು ತೇಪೆ ಕಾರ್ಯ ಕೆಲ ಭಾಗದಲ್ಲಿ ನಡೆದು ಕೆಲಭಾಗದಲ್ಲಿ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರಿಗೆ, ವಾಹನಸವಾರರಿಗೆ ತೀವ್ರ ತೊಂದರೆಯಾಗಿದೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿಡಿ: ಈ ರಸ್ತೆಯ ಮರಟಗೆರೆ, ಬ್ಯಾಡರಹಳ್ಳಿ ಸಮೀಪ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಬೇಕಾಬಿಟ್ಟಿ ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ನಿಯಮಗಳನ್ನು ಪಾಲಿಸದೆ ಕಾಮಗಾರಿ ನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮರು ಡಾಂಬರೀಕರಣದಲ್ಲಿ ನಿಯಮಾನುಸಾರ ಡಾಂಬರ್, ಜೆಲ್ಲಿ ಕಲ್ಲು ಮಿಶ್ರಣ ಮಾಡದೆ ತರಾತುರಿಯಲ್ಲಿ ಮುಗಿಸುವ ಯತ್ನ ನಡೆಸಿದ್ದಾರೆಂದು ನಾಗಸಮುದ್ರ ಶಶಿಧರ್ ಕಳಪೆ ಕಾಮಗಾರಿಯ ವಿರುದ್ಧ ಕಿಡಿಕಾರಿದ್ದಾರೆ.
ಸರ್ಕಾರ ಗ್ರಾಮೀಣ ಭಾಗದ ಜನರ ಸೌಲಭ್ಯಕ್ಕೆಂದು ಲಕ್ಷಾಂತರ ರು.ಗಳನ್ನು ವ್ಯಯಿಸಿ ಗುಣಮಟ್ಟದ ರಸ್ತೆ ನಿರ್ಮಿಸಲು ಮುಂದಾಗುತ್ತಿದೆ. ಈ ರೀತಿ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಬೇಕು. ಕಾಮಗಾರಿ ಗುಣಮಟ್ಟ ಕಾಪಾಡಬೇಕು. ಇಲ್ಲದಿದ್ದಲ್ಲಿ ಲೋಕೋಪಯೋಗಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.