ಹದಗೆಟ್ಟ ರಸ್ತೆಗೆ ಬೇಕಾಬಿಟ್ಟಿ ಕಾಮಗಾರಿ: ಗ್ರಾಮಸ್ಥರ ಆಕ್ರೋಶ
ಅರಸೀಕೆರೆ: ತಾಲೂಕಿನ ಬೆಂಡೆಕೆರೆ ಹೃದಯಭಾಗದಲ್ಲಿ ಹಾದುಹೋಗಿರುವ ರಾಷ್ಟ್ರೀಯ ಹೆದ್ದಾರಿಯಿಂದ ಹುಳಿಯಾರು ಬೇಲೂರು ರಾಷ್ಟ್ರೀಯ ಹೆದ್ದಾರಿಗೆ ಸಂಪರ್ಕ ಕಲ್ಪಿಸುವ ರಸ್ತೆ ಹದಗೆಟ್ಟಿದ್ದು ತೇಪೆ ಕಾರ್ಯ ಕೆಲ ಭಾಗದಲ್ಲಿ ನಡೆದು ಕೆಲಭಾಗದಲ್ಲಿ ಸ್ಥಗಿತಗೊಂಡಿದೆ. ಇದರಿಂದ ಪ್ರಯಾಣಿಕರಿಗೆ, ವಾಹನಸವಾರರಿಗೆ ತೀವ್ರ ತೊಂದರೆಯಾಗಿದೆ ಎಂದು ಸುತ್ತಮುತ್ತಲಿನ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕಿಡಿ: ಈ ರಸ್ತೆಯ ಮರಟಗೆರೆ, ಬ್ಯಾಡರಹಳ್ಳಿ ಸಮೀಪ ರಸ್ತೆಗಳ ಗುಂಡಿ ಮುಚ್ಚುವ ಕಾರ್ಯ ಪ್ರಗತಿಯಲ್ಲಿದೆ. ಗುತ್ತಿಗೆದಾರರ ನಿರ್ಲಕ್ಷ್ಯ ಹಾಗೂ ಬೇಜವಾಬ್ದಾರಿತನದಿಂದ ಬೇಕಾಬಿಟ್ಟಿ ಕಾರ್ಯ ನಿರ್ವಹಿಸುತ್ತಿದ್ದು, ಯಾವುದೇ ನಿಯಮಗಳನ್ನು ಪಾಲಿಸದೆ ಕಾಮಗಾರಿ ನಿರ್ವಹಿಸುತ್ತಿರುವುದು ಮೇಲ್ನೋಟಕ್ಕೆ ಕಂಡುಬರುತ್ತಿದೆ. ಮರು ಡಾಂಬರೀಕರಣದಲ್ಲಿ ನಿಯಮಾನುಸಾರ ಡಾಂಬರ್, ಜೆಲ್ಲಿ ಕಲ್ಲು ಮಿಶ್ರಣ ಮಾಡದೆ ತರಾತುರಿಯಲ್ಲಿ ಮುಗಿಸುವ ಯತ್ನ ನಡೆಸಿದ್ದಾರೆಂದು ನಾಗಸಮುದ್ರ ಶಶಿಧರ್ ಕಳಪೆ ಕಾಮಗಾರಿಯ ವಿರುದ್ಧ ಕಿಡಿಕಾರಿದ್ದಾರೆ.
ಸರ್ಕಾರ ಗ್ರಾಮೀಣ ಭಾಗದ ಜನರ ಸೌಲಭ್ಯಕ್ಕೆಂದು ಲಕ್ಷಾಂತರ ರು.ಗಳನ್ನು ವ್ಯಯಿಸಿ ಗುಣಮಟ್ಟದ ರಸ್ತೆ ನಿರ್ಮಿಸಲು ಮುಂದಾಗುತ್ತಿದೆ. ಈ ರೀತಿ ನಿರ್ಲಕ್ಷ್ಯ ವಹಿಸುತ್ತಿರುವುದು ಸರಿಯಲ್ಲ. ಸಂಬಂಧಿಸಿದ ಅಧಿಕಾರಿಗಳು ಕೂಡಲೇ ಇತ್ತ ಗಮನ ಹರಿಸಬೇಕು. ಕಾಮಗಾರಿ ಗುಣಮಟ್ಟ ಕಾಪಾಡಬೇಕು. ಇಲ್ಲದಿದ್ದಲ್ಲಿ ಲೋಕೋಪಯೋಗಿ ಕಚೇರಿ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.