ಆಧ್ಯಾತ್ಮಿಕ ಶಕ್ತಿ ಹೆಚ್ಚಿಸಿಕೊಳ್ಳಿ: ಆದಿಚುಂಚನಗಿರಿ ಶ್ರೀ
ಅರಕಲಗೂಡು: ತಾಲ್ಲೂಕಿನ ಕಳ್ಳಿ ಮುದ್ದನಹಳ್ಳಿ ಗ್ರಾಮದಲ್ಲಿ ನೂತನವಾಗಿ ನಿರ್ಮಿಸಿರುವ ಶ್ರೀ ಲಕ್ಷ್ಮೀದೇವಿ ದೇವಾಲಯ ಮತ್ತು ಶ್ರೀ ವೆಂಕಟರಮಣ ಸ್ವಾಮಿ ದೇವಾಲಯಗಳ ಪ್ರತಿಷ್ಠಾಪನೆ ನೆರವೇರಿಸಲಾಯಿತು.
ಸುಮಾರು ರು. 50 ಲಕ್ಷ ವೆಚ್ಚದಲ್ಲಿ ನಿರ್ಮಿಸಲಾಗಿರುವ ದೇವಾಲಯವನ್ನು ಲೋಕಾರ್ಪಣೆಗೊಳಿಸಿದ ನಂತರ ಧಾರ್ಮಿಕ ಸಭೆಯಲ್ಲಿ ಮಾತನಾಡಿದ ಶ್ರೀ ಆದಿತುಂಚನಗಿರಿ ಸಂಸ್ಥಾನದ ಪೀಠಾಧ್ಯಕ್ಷ ಶ್ರೀ ನಿರ್ಮಲಾನಂದನಾಥ ಸ್ವಾಮಿಗಳು ಹುಟ್ಟಿದ ಮನುಷ್ಯ ಆರ್ಥಿಕ ಮತ್ತು ಭೌತಿಕವಾಗಿ ದುರ್ಬಲವಾಗಿದ್ದರೂ ಸಹ ಹೃದಯ ಸಂಪತ್ತು ಗಳಿಸಬೇಕು. ಪವಿತ್ರ ಅಧ್ಯಾತ್ಮಿಕ ಶಕ್ತಿ ಹೊಂದುವ ಮೂಲಕ ದ್ವೇಷ, ಅಸೂಯೆ, ಕಿತ್ತಾಟ ದೂರ ಮಾಡಿ ಪುಣ್ಯ ಕಾರ್ಯಗಳಿಂದ ದೇವರ ಅನುಗ್ರಹ ಪಡೆಯಬೇಕು. ಸಂಸಾರದಲ್ಲಿ ಕಿತ್ತಾಟ ಬರಂದಂತೆ ನೋಡಿಕೊಂಡು ಹೊಂದಾಣಿಕೆ ಜೀವನ ಸಾಗಿಸುವಂತಾಗಬೇಕು ಎಂದರು.
ಇಂದಿನ ಸನ್ನಿವೇಶದಲ್ಲಿ ಕೌಟುಂಬಿಕ ಕಲಹಗಳು ಹೆಚ್ಚಾಗುತ್ತಿರುವುದು ಆತಂಕಕಾರಿ ಎಂದು ನುಡಿದು ಎರಡನೇ ಮದುವೆಯಂತಹ ದುಸ್ಸಾಹಸಗಳಿಗೆ ಮನಸ್ಸು ಮಾಡಬಾರದು ಎಂದು ಹಿತವಚನ ಹೇಳಿದರು. ಹಿರಿಯರ ನಡವಳಿಕೆ ಮುಂದಿನ ಪೀಳಿಗೆಗೆ ಉತ್ತಮ ಮಾರ್ಗದರ್ಶನ ನೀಡುವಂತಾಗಬೇಕು ಎಂದರು.
ಇದೇ ವೇಳೆ ಹಾಸನದ ಆದಿಚುಂಚನಗಿರಿ ಶಾಖಾ ಮಠದ ಮಠಾಧೀಶರಾದ ಶ್ರೀ ಶಂಭುನಾಥಸ್ವಾಮಿಗಳು ಮಾತನಾಡಿದರು.
ಸಮಾರಂಭದ ಉದ್ಘಾಟನೆಯನ್ನು ಶಾಸಕ ಎ. ಮಂಜು ನೆರವೇರಿಸಿದರು. ಈ ಸಂದರ್ಭದಲ್ಲಿ ಶಾಸಕ ಎಚ್.ಡಿ. ರೇವಣ್ಣ, ಪೊಟ್ಯಾಟೊ ಕ್ಲಬ್ನ ಸಂಸ್ಥಾಪಕ ಅಧ್ಯಕ್ಷ ಹೆಚ್. ಯೋಗಾ ರಮೇಶ್, ನಿವೃತ್ತ ಎಂಜಿನಿಯರ್ ಎಂ.ಡಿ. ಸೋಮಶೇಖರ್, ತಾಲೂಕು ಜೆಡಿಎಸ್ ಅಧ್ಯಕ್ಷ ಎಂ.ಸಿ. ರಂಗಸ್ವಾಮಿ, ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಹೆಚ್. ಸತೀಶ್, ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ. ಭೈರೇಗೌಡ ಮಾತನಾಡಿದರು.
ಜಿ.ಪಂ. ಸದಸ್ಯ ವಿ.ಎ. ನಂಜುಂಡಸ್ವಾಮಿ, ಮಾಜಿ ಸದಸ್ಯ ಎಚ್.ಎಸ್. ಶಂಕರ್, ಬಿ.ಟಿ. ಜವರೇಗೌಡ, ತಾ.ಪಂ. ಸದಸ್ಯ ಯೋಗೇಶ್, ಎಂ.ಟಿ. ಸತ್ಯನಾರಾಯಣ, ಮುದ್ದನಹಳ್ಳಿ ರಮೇಶ್, ಗುತ್ತಿಗೆದಾರ ನಾರಾಯಣಗೌಡ, ಕಟ್ಟಾಯ ಚಂದ್ರಶೇಖರ್, ಎಂ.ಟಿ. ಸತ್ಯನಾರಾಯಣ ಮುಂತಾದವರು ಉಪಸ್ಥಿತರಿದ್ದರು.
ಇದಕ್ಕೂ ಮುನ್ನ ಪುರ ಪ್ರವೇಶ ಮಾಡಿದ ಆದಿಚುಂಚನಗಿರಿ ಮಠದ ನಿರ್ಮಲಾನಂದನಾಥ ಸ್ವಾಮೀಜಿ, ಶಂಭುನಾಥ ಸ್ವಾಮೀಜಿ ಅವರನ್ನು ಮಹಿಳೆಯರು ಪೂರ್ಣಕುಂಭ ಸ್ವಾಗತದ ಮೂಲಕ ಮೆರವಣಿಗೆಯಲ್ಲಿ ಕರೆತಂದರು. ವೀರಗಾಸೆ, ಕೀಲು ಕುದುರೆ ಮತ್ತು ಸ್ತ್ರೀ ವೇಷಧಾರಿ ನೃತ್ಯಗಳು ಮೆರವಣಿಗೆಗೆ ಮೆರಗು ನೀಡಿದವು.