ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಚಿದಾನಂದ್ ಅಧಿಕಾರ ಸ್ವೀಕಾರ

Rashmi Kasaragodu
Updated On : 30 Jan 2014, 1:27 am

ಅರಕಲಗೂಡು: ತಾಲೂಕಿಗೆ ನೂತನ ತಹಸೀಲ್ದಾರ್ ಆಗಿ ಚಿದಾನಂದ್ ಶನಿವಾರ ಅಧಿಕಾರ ಸ್ವೀಕರಿಸಿದರು. ಮೂಲತಃ ಅರಕಲಗೂಡು ತಾಲೂಕಿನವರೇ ಆದ ಇವರು ಈವರೆಗೆ ರಾಜ್ಯದ ವಿವಿದೆಡೆ ಕೆಲಸ ನಿರ್ವಹಿಸಿದ್ದು, ಜಿಲ್ಲೆಯ ಬೇಲೂರಿನಲ್ಲೂ ತಹಸೀಲ್ದಾರ್ ಆಗಿ ಸೇವೆ ಸಲ್ಲಿಸಿದ್ದಾರೆ. ಸ್ವಂತ ತಾಲೂಕಿನಲ್ಲಿ ಸೇವೆ ಸಲ್ಲಿಸಲು ಸಿಕ್ಕ ಅವಕಾಶಕ್ಕಾಗಿ ಪತ್ರಕರ್ತರೊಂದಿಗೆ ಸಂತಸ ಹಂಚಿಕೊಂಡರು.
ತಹಸೀಲ್ದಾರ್ ನಾಗರಾಜ್ಗೆ ಪ್ರಶಸ್ತಿ
ಚನ್ನರಾಯಪಟ್ಟಣ: ರಾಜ್ಯದಲ್ಲಿ ಉತ್ತಮ ಆಡಳಿತ ನೀಡಿದ ಅಧಿಕಾರಿಗಳಿಗೆ ರಾಜ್ಯ ಸರ್ಕಾರ ನೀಡುತ್ತಿರುವ ಸರ್ವೋತ್ತಮ ಪ್ರಶಸ್ತಿಗೆ ತಾಲೂಕು ದಂಡಾಧಿಕಾರಿಗಳು ಹಾಗೂ ತಹಸೀಲ್ದಾರ್ ಡಾ.ಎಚ್.ಎಲ್. ನಾಗರಾಜು ಅವರು ಆಯ್ಕೆಯಾಗಿದ್ದಾರೆ. ಗಣರಾಜ್ಯೋತ್ಸವದ ಅಂಗವಾಗಿ ಜ. 26ರಂದು ಮದ್ಯಾಹ್ನ 4ಕ್ಕೆ ರಾಜಭವನದಲ್ಲಿ ನಡೆಯಲಿರುವ ಕಾರ್ಯಕ್ರಮದಲ್ಲಿ ಸರ್ವೋತ್ತಮ ಪ್ರಶಸ್ತಿಯನ್ನು ರಾಜ್ಯಪಾಲ ಹಂಸರಾಜ್ ಭಾರದ್ವಾಜ್ ಅವರಿಂದ ಡಾ.ಎಚ್.ಎಲ್. ನಾಗರಾಜು ಸ್ವೀಕರಿಸಲಿದ್ದಾರೆ. ಡಾ. ನಾಗರಾಜು ಅವರು ತಹಸೀಲ್ದಾರ್ ಸೇವೆಯಲ್ಲಿ ಮಾಡಿರುವ ಉತ್ತಮ ಆಡಳಿತ, ಕಂದಾಯ ಇಲಾಖೆಯಲ್ಲಿನ ಸಾರ್ವಜನಿಕ ಸೇವೆ, ಸಾರ್ವಜನಿಕ ಆಸ್ತಿ ರಕ್ಷಣೆ ಹಾಗೂ ಭ್ರಷ್ಟಾಚಾರ ರಹಿತ ಆಡಳಿತವನ್ನು ಮನಗಂಡ ರಾಜ್ಯ ಸರ್ಕಾರ ಇವರನ್ನು ಸವೋತ್ತಮ ಪ್ರಶಸ್ತಿಗೆ ಆಯ್ಕೆ ಮಾಡಿದೆ.
'ಮತದಾನದ ಹಕ್ಕು ಅಗತ್ಯ'
ಅರಕಲಗೂಡು: ಮತದಾನ ಮಾಡುವುದು ಈ ದೇಶದ ಪ್ರತಿ ಪ್ರಜೆಯ ಕರ್ತವ್ಯವಾಗಿದ್ದು, ಎಲ್ಲರೂ ಮತದಾನ ಮಾಡುವ ಮೂಲಕ ತಮ್ಮ ಹಕ್ಕುಗಳನ್ನು ಚಲಾಯಿಸಬೇಕು ಎಂದು ತಹಸೀಲ್ದಾರ್ ಚಿದಾನಂದ್ ತಿಳಿಸಿದ್ದಾರೆ. ಇಲ್ಲಿನ ತಾಲೂಕು ಕ:ಕೇರಿಯಲ್ಲಿ ಆಯೋಜಿಸಿದ್ದ ಮತದಾನ ದಿನಾಚರಣೆ ಸಮಾರಂಭದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು ಪ್ರಜಾಪ್ರಭುತ್ವದ ಉಳಿವು ಮತ್ತು ಉತ್ತಮ ಸಮಾಜದ ನಿರ್ಮಾಣಕ್ಕಾಗಿ ಪ್ರತಿಯೊಬ್ಬರೂ ಮತದಾನವನ್ನು ತಪ್ಪದೇ ಮಾಡಬೇಕು ಎಂದು ನುಡಿದರು.ಸಮಾರಂಭದ ಉದ್ಘಾಟನೆಯನ್ನು ಕ್ಷೇತ್ರ ಶಿಕ್ಷಣಾಧಿಕಾರಿ ಬಿ.ರೇವಣ್ಣ ಉದ್ಘಾಟಿಸಿದರು. ತಹಸೀಲ್ದಾರ್ (ಗ್ರೇಡ್-2), ಜಗದೀಶ್ ಉಪಸ್ಥಿತರಿದ್ದರು.
'ಮತದಾರರ ಜವಾಬ್ದಾರಿ'
ಚನ್ನರಾಯಪಟ್ಟಣ: ಪ್ರಜಾಪ್ರಭುತ್ವದಡಿಯಲ್ಲಿ ಸುಭದ್ರ ದೇಶ ಕಟ್ಟುವ ಜವಬ್ದಾರಿ ತಮ್ಮ ಮೇಲಿದ್ದು, ತಾವು ಸಮಾಜದಲ್ಲಿ ಉತ್ತಮ ವ್ಯಕ್ತಿಯಾಗಿ ಗುರುತಿಸಿಕೊಂಡು ದೇಶವನ್ನಾಳುವ ವ್ಯಕ್ತಿಗಳನ್ನು ಆಯ್ಕೆ ಮಾಡುವ ಸಂದರ್ಭದಲ್ಲಿ ತಾವು ಜವಾಬ್ದಾರಿಯುತವಾಗಿರಬೇಕಾಗುತ್ತದೆ ಎಂದು ಶ್ರೀ ಆದಿಚುಂಚನಗಿರಿ ಪ್ರಥಮ ದರ್ಜೆ ಕಾಲೇಜು ಪ್ರಾಂಶುಪಾಲ ಎನ್. ಸೋಮಸುಂದರ್ ತಿಳಿಸಿದರು.
ಪಟ್ಟಣದ ಮಿನಿ ವಿಧಾನಸೌಧದ ಮುಂಭಾಗದಲ್ಲಿ ಏರ್ಪಡಿಸಿದ್ದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಮಾತನಾಡಿ ಸುಭದ್ರ ದೇಶ ಕಟ್ಟುವ ಜವಬ್ದಾರಿಯನ್ನು ತಾವು ಜನಪ್ರತಿನಿಧಿಗಳಿಗೆ ನೀಡುವ ಮೊದಲು ತಾವು ಉತ್ತಮರಾಗಿ ಉತ್ತಮ ವ್ಯಕ್ತಿಯನ್ನು ಆಯ್ಕೆ ಮಾಡುವ ಜವಬ್ದಾರಿಯನ್ನು ಹೊರಬೇಕು ಎಂದು ತಿಳಿಸಿದರು.
ಇಂದಿನ ಯುವಕರಲ್ಲಿ ಅತ್ಯಂತ ಜವಬ್ದಾರಿಯಿದ್ದು, ಅವರು ಹಿರಿಯರ ಒಳ್ಳೆಯ ಮಾರ್ಗದರ್ಶನವನ್ನು ಪಡೆದು ದೇಶವನ್ನು ಪ್ರಗತಿಯತ್ತ ಕೊಂಡೊಯ್ಯಲು ಉತ್ತಮ ದಕ್ಷ ಹಾಗೂ ಪ್ರಾಮಾಣಿಕತೆಯಲ್ಲಿ ಕಾರ್ಯ ನಿರ್ವಹಿಸುವ ಜನಪ್ರತಿನಿಧಿಗಳನ್ನು ಆಯ್ಕೆ ಮಾಡಬೇಕು ಎಂದು ತಿಳಿಸಿದರು. ಪ್ರೊಬೇಷನರಿ ಐಎಎಸ್ ಅಧಿಕಾರಿ ರಾಮಚಂದ್ರನ್ ಮಾತನಾಡಿ, ವಿಶ್ವದಲ್ಲಿಯೇ ದೊಡ್ಡ ಸಂವಿಧಾನವನ್ನು ಹೊಂದಿರುವ ತಮ್ಮ ದೇಶ ತಮ್ಮದಾಗಿದ್ದು, ಎಲ್ಲರಿಗೂ ಸಮಾನತೆಯ ಹಕ್ಕನ್ನು ನೀಡಿದೆ. ಮತದಾನದಲ್ಲಿಯೂ ಯಾವುದೇ ಬೇದವಿಲ್ಲದೆ ಸಮಾನ ಹಕ್ಕು ನೀಡಿದೆ. ಇಂತಹ ವ್ಯವಸ್ಥೆಯನ್ನು ದುರುಪಯೋಗಪಡಿಸಿಕೊಳ್ಳದೆ ಯಾವುದೇ ಆಸೆ ಆಮಿಷಕ್ಕೊಳಗಾಗದೇ ಮತದಾನ ಮಾಡಿದಾಗ ಮಾತ್ರ ಸಂವಿಧಾನಕ್ಕೆ ಬೆಲೆ ಸಿಗುತ್ತದೆ ಎಂದು ತಿಳಿಸಿದರು.
ತಹಸೀಲ್ದಾರ್ ಡಾ.ಎಚ್.ಎಲ್. ನಾಗರಾಜು, ಸೋಮಶೇಖರ್, ಉಪನ್ಯಾಸಕ ಬೋರೇಗೌಡ ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement