ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ನಕ್ಸಲರ ಪ್ರದೇಶದಲ್ಲಿ ಕೂಂಬಿಂಗ್

Rashmi Kasaragodu
Updated On : 30 Jan 2014, 1:26 am

 ಪಿ. ರವಿಕುಮಾರ್
ಕ.ಪ್ರ ವಾರ್ತೆ ಟಿ ಹಾಸನ ಟಿ ಜ. 29
ಮಲೆನಾಡಿನ ನಕ್ಸಲರ ಚಲನವಲನ ಇರುವ ಪ್ರದೇಶದಲ್ಲಿ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ನಕ್ಸಲ್ ನಿಗ್ರಹ ದಳದವರು ಕೂಂಬಿಂಗ್ ಕಾರ್ಯಾಚರಣೆ ಮಾಡುವ ಮೂಲಕ ಈ ಭಾಗದ ಜನರಲ್ಲಿ ವಿಶ್ವಾಸ ಹಾಗೂ ಧೈರ್ಯ ತುಂಬುವ ಕಾರ್ಯಕ್ಕೆ ಮುಂದಾಗಿದೆ.
ಮೊದಲೇ ಕಾಡಾನೆ ಕಾಟದಿಂದ ನಲುಗಿರುವ ಮಲೆನಾಡ ಜನರಿಗೆ ಈಗ ನಕ್ಸಲರ ಪ್ರವೇಶ ಜೀವ ಭಯ ಹುಟ್ಟಿಸಿದೆ. ದಟ್ಟ ಪರಿಸರದ ನಡುವೆ ಬದುಕುತ್ತಿರುವ ಜನರನ್ನು ನಕ್ಸಲರ ಸದ್ದು ಬೆಚ್ಚಿ ಬೀಳಿಸಿರುವುದರಿಂದ ಆ ಭಾಗದ ಜನರಲ್ಲಿ ವಿಶ್ವಾಸ ಹಾಗೂ ಧೈರ್ಯ ತುಂಬುವಂತಹ ಹಾಗೂ ಈ ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಕಾರ್ಯಕ್ಕೆ ಜಿಲ್ಲಾ ಪೊಲೀಸ್ ಇಲಾಖೆ ಹಾಗೂ ನಕ್ಸಲ್ ನಿಗ್ರಹ ದಳ ಕೂಂಬಿಂಗ್ ಕಾರ್ಯಾಚರಣೆ ಕೈಗೊಂಡಿದ್ದಾರೆ.
ಬೆಳ್ತಂಗಡಿ, ಸುಬ್ರಹ್ಮಣ್ಯ, ಚಿಕ್ಕಮಗಳೂರು, ಶಿವಮೊಗ್ಗ ಮೊದಲಾದ ಜಿಲ್ಲೆಗಳಲ್ಲಿ ಬೀಡು ಬಿಟ್ಟಿದ್ದ ನಕ್ಸಲರು ಹಾಸನ ಜಿಲ್ಲೆಗೆ ಆಗಮಿಸಿ ಈ ಭಾಗದ ಜನರಲ್ಲಿ ಆತಂಕ ಹುಟ್ಟಿಸಿದ್ದರು. ಮಲೆನಾಡು ಭಾಗದ ಜನ ಶಾಂತಿಪ್ರಿಯರು. ಆಗಾಗ ಕಾಡಾನೆ ನೀಡುವ ಉಪಟಳದಿಂದ ಹಲವಾರು ಮಂದಿ ಪ್ರಾಣ ಕಳೆದುಕೊಂಡು ಬೆಳೆ ಕೂಡ ನಾಶವಾಗುತ್ತಿದೆ. ಇದೆಲ್ಲವನ್ನೂ ಲೆಕ್ಕಿಸಿದೆ ತಮ್ಮ ಪಾಡಿಗೆ ತಾವು ಕಾಡಿನೊಂದಿಗೆ ಹೊಂದಿಕೊಂಡು ಜೀವನ ಸಾಗಿಸುತ್ತಿದ್ದವರ ಮನೆಗಳಿಗೆ ಕೆಂಪುಉಗ್ರರು ಭೇಟಿ ನೀಡುವ ಮೂಲಕ ಈ ಭಾಗದ ಜನರನ್ನು ಬೆಚ್ಚಿ ಬೀಳಿಸಿದ್ದಾರೆ.
ಮುಂಜಾಗ್ರತೆ ಕ್ರಮ: ಕೆಲವು ತಿಂಗಳ ಹಿಂದಷ್ಟೇ ಸಿಂಗೇರಿ, ಕಾಗಿನಹರೆ, ಮಾವಿನೂರು, ಹಡ್ಲಗದ್ದೆ, ಬಿಸ್ಲೆ, ಜಗಾಟ ಮತ್ತು ಸುತ್ತಮುತ್ತಲ ಜನ ಶಸ್ತ್ರಾಸ್ತ್ರ ಹೊಂದಿರುವ ನಕ್ಸಲರನ್ನು ಕಣ್ಣಾರೆ ಕಂಡು ಜೀವಭಯದಲ್ಲೇ ಕಾಲ ಕಳೆಯುವಂತಾಗಿತ್ತು. ಇದರಿಂದ ಮತ್ತೆ ನಕ್ಸಲರು ಈ ಭಾಗದಲ್ಲಿ ಚಲನವಲನ ನಡೆಸದಂತೆ ಜಿಲ್ಲಾ ಪೊಲೀಸ್ ಇಲಾಖೆ ತನ್ನ ನಿಯಂತ್ರಣಕ್ಕೆ ಈ ಪ್ರದೇಶವನ್ನು ತೆಗೆದುಕೊಳ್ಳಲು ಮುಂಜಾಗ್ರತೆಯಿಂದ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದೆ.
ಕೂಂಬಿಂಗ್ ಕಾರ್ಯಾಚರಣೆ ಮೂಲಕ ಈ ಭಾಗದ ಜನರಲ್ಲಿ ಆತ್ಮವಿಶ್ವಾಸ ಮೂಡಿಸುತ್ತಿರುವುದರಿಂದ ಜನರು ಸ್ವಲ್ಪ ಧೈರ್ಯದಿಂದ ಜೀವನ ನಡೆಸುತ್ತಿದ್ದಾರೆ ಎನ್ನಲಾಗಿದೆ. ಜೊತೆಗೆ ನಕ್ಸಲರ ಚಲನವಲನ ಕಂಡು ಬಂದಲ್ಲಿ ಆ ಕೂಡಲೇ ಮಾಹಿತಿ ನೀಡುವಂತೆಯೂ ಸಹ ಈ ಭಾಗದ ಜನರಿಗೆ ತಿಳಿಸಿದ್ದು, ಅದರಂತೆ ಮುಂಜಾಗೃತರಾಗಿರುವ ಇಲಾಖೆ ಸಿಬ್ಬಂದಿ ನಕ್ಸಲರು ಈ ಭಾಗಕ್ಕೆ ಬರದಂತೆ ಕ್ರಮಕೈಗೊಂಡಿದ್ದಾರೆ.
ಜೊತೆಗೆ ಜಿಲ್ಲಾ ವ್ಯಾಪ್ತಿಗೆ ಬರುವಂತಹ ಪ್ರದೇಶಗಳು ಎಷ್ಟಿದೆ ಹಾಗೂ ಯಾವ ಪ್ರದೇಶಗಳನ್ನು ಗುರುತಿಗೆ ಇಟ್ಟಿಕೊಳ್ಳಬೇಕು ಎಂಬುದರ ಬಗ್ಗೆ ಸಂಪೂರ್ಣ ಮಾಹಿತಿ ಕಲೆ ಹಾಕುತ್ತಿದ್ದು, ನಕ್ಸಲರು ಇತ್ತ ಧಾವಿಸಿದರೆ, ತಕ್ಷಣದಲ್ಲೇ ಯಾವ ಕ್ರಮಕೈಗೊಳ್ಳಬೇಕು ಎಂಬುದರ ಬಗ್ಗೆಯೂ ಜಿಲ್ಲಾ ಪೊಲೀಸ್ ಇಲಾಖೆ ಕಾರ್ಯಾಚರಣೆ ನಡೆಸುತ್ತಿದೆ. ಸಕಲೇಶಪುರ ತಾಲೂಕಿನ ಯಸಳೂರು ವ್ಯಾಪ್ತಿಯಲ್ಲಿ ಕೂಂಬಿಂಗ್ ಕಾರ್ಯಾಚರಣೆ ನಡೆಸುತ್ತಿದ್ದು, ನಕ್ಸಲರು ಇತ್ತ ಸುಳಿಯದಂತೆ ಮುನ್ನೆಚ್ಚರಿಕೆಯಾಗಿ ಎಲ್ಲಾ ರೀತಿಯ ಕ್ರಮವನ್ನು ಪೊಲೀಸರು ಮತ್ತು ನಕ್ಸಲ್ ನಿಗ್ರಹ ದಳ ಕೈಗೊಂಡಿದೆ.
ನಕ್ಸಲರ ಭೇಟಿ: ಇತ್ತೀಚೆಗಷ್ಟೇ, ಹೊನ್ನಾಟ್ಲು ಗ್ರಾಮದ ಪ್ರಕಾಶ್ ಎಂಬುವರ ಮನೆಗೆ ಮೂವರು ನಕ್ಸಲರು ಭೇಟಿ ನೀಡಿದ್ದ ವೇಳೆ 2 ಬಾರಿ ಟೀ ಕುಡಿದು, ಊಟ ಮಾಡಿ ಪಾರ್ಸಲ್ ಮಾಡಿಸಿಕೊಂಡಿದ್ದಲ್ಲದೇ, 30 ಕೆಜಿ ಅಕ್ಕಿ, ಬೇಳೆ, ಕಾರದಪುಡಿ, ಉಪ್ಪು, ಅಡುಗೆ ಪಾತ್ರೆ ಪಡೆದು ರು. 200 ಹಣ ಕೊಟ್ಟು ಹೋಗಿದ್ದರು. ಇದಲ್ಲದೆ ಆನೆ ಕಾರಿಡಾರ್ ಹೆಸರು ಪ್ರಸ್ತಾಪಿಸಿ, ಸರ್ಕಾರ ಮತ್ತು ಜಿಲ್ಲಾಡಳಿತದ ವಿರುದ್ಧ ಮಲೆನಾಡು ಭಾಗದ ಜನರು ಸಿಡಿದೇಳುವ ರೀತಿಯಲ್ಲಿ ಪ್ರಚೋದನೆ ನೀಡಿ ಹೋಗಿದ್ದರು.
ಪರಿಕರಗಳು ವಶ: ಸಕಲೇಶಪುರ ತಾಲೂಕಿನ ಬಿಸಿಲೆ ಅರಣ್ಯ ವ್ಯಾಪ್ತಿಯಲ್ಲಿ ಮೂವರು ನಕ್ಸಲರು ಕಾಣಿಸಿಕೊಂಡಿದ್ದರು. ಆಗ ಎಎನ್ಎಫ್ ಮುಖ್ಯಸ್ಥರಾಗಿದ್ದ ಅಲೋಕ್ ಕುಮಾರ್ ಅವರೇ ಕೂಂಬಿಂಗ್ ನೇತೃತ್ವ ವಹಿಸಿ ಒಟ್ಟು 4 ತಂಡಗಳಲ್ಲಿ ಕೆಂಪು ಉಗ್ರರ ಬೆನ್ನು ಹತ್ತಿದ್ದರು. ಕೂಂಬಿಂಗ್ವೇಳೆ ನಕ್ಸಲರಿಗೆ ಸೇರಿದ ವೆಬ್ ಕ್ಯಾಮೆರಾ ಸೇರಿದಂತೆ ಕೆಲ ಪ್ರಮುಖ ವಸ್ತುಗಳು ಪತ್ತೆಯಾಗಿದ್ದು, ಈ ಭಾಗದಲ್ಲೇ ನಕ್ಸಲರು ಅಡಗಿರುವ ಮಾಹಿತಿ ನಿಗ್ರಹ ಪಡೆಗೆ ಲಭ್ಯವಾಗಿತ್ತು.  
ಈ ಹಿನ್ನೆಲೆಯಲ್ಲಿ, ಬಿಸಿಲೆಯಿಂದ ನಾಲ್ಕೈದು ಕಿಮೀ ಸುತ್ತಳತೆಯ ದಟ್ಟಡವಿಯನ್ನು ಸುತ್ತುವರೆದು ವಿಶೇಷ ಕಾರ್ಯತಂತ್ರದ ಮೂಲಕ ಕೆಂಪು ಉಗ್ರರ ಬೇಟೆಗಾಗಿ ಬಲೆ ಬೀಸಿದ್ದರಿಂದ ನಕ್ಸಲರು ಈ ಪ್ರದೇಶದಿಂದ ಪಾಲಾಯನ ಮಾಡಿದ್ದರು. ಈ ಹಿನ್ನೆಲೆಯಲ್ಲಿ ನಕ್ಸರು ಯಾವ ಸಂದರ್ಭದಲ್ಲಾದರೂ ಈ ಭಾಗಕ್ಕೆ ಬರಬಹುದು ಎಂಬ ಕಾರಣಕ್ಕೆ ಹಾಗೂ ಮುಂಜಾಗ್ರತೆಗಾಗಿ ನಕ್ಸಲ್ ಕಾರ್ಯಾಚರಣೆಯನ್ನು ಬಿಗಿಗೊಳಿಸಲಾಗಿದ್ದು, ಜಿಲ್ಲಾ ಪೊಲೀಸ್ ಎಎನ್ಎಫ್ಗೆ ಸಾಥ್ ನೀಡಿದೆ.

ಮಲೆನಾಡು ಪ್ರದೇಶದಲ್ಲಿ ನಕ್ಸಲರ ಭಯ ಇರುವುದರಿಂದ ಈ ಪ್ರದೇಶದಲ್ಲಿ ವಾಸವಾಗಿರುವ ಜನರಲ್ಲಿ ವಿಶ್ವಾಸ ಮತ್ತು ಧೈರ್ಯ ತುಂಬಲು ಕೂಂಬಿಂಗ್ ಕಾರ್ಯಾಚರಣೆ ಪ್ರಾರಂಭಿಸಲಾಗಿದೆ. ಆದರೆ ಈವರೆಗೂ ನಕ್ಸಲರು ಪ್ರತ್ಯಕ್ಷವಾಗಿಲ್ಲ. ಜತೆಗೆ ಈ ಪ್ರದೇಶವನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳಲು ಈ ಕಾರ್ಯಾಚರಣೆ ನಡೆಸಲಾಗುತ್ತಿದೆ.
ಟಿ ರವಿ ಡಿ. ಚನ್ನಣ್ಣನವರ್, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement