ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಪೊಲೀಸ್ ಪೇದೆ ಮೇಲೆ ಮತ್ತೆ ಹಲ್ಲೆ

Rashmi Kasaragodu
Updated On : 30 Jan 2014, 1:27 am

ಅರಸೀಕೆರೆ: ಪೊಲೀಸ್ ಸಬ್ ಇನ್ಸ್ಪೆಕ್ಟರ್ ಮಲ್ಲಿಕಾರ್ಜುನ ಬಂಡೆ ಸಾವಿನ ಪ್ರಕರಣ ಮಾಸುವ ಮುನ್ನ  ಹಾಗೂ ಚನ್ನರಾಯಪಟ್ಟಣ ತಾಲೂಕು ನುಗ್ಗೆಹಳ್ಳಿ ಠಾಣೆಯಲ್ಲಿ ದಾಂಧಲೆ ನಡೆಸಿದ ಘಟನೆ ನಡೆದ ಕೆಲದಿನಗಳಲ್ಲಿಯೇ ಪಟ್ಟಣದ ಹಾಸನ ರಸ್ತೆಯಲ್ಲಿ ಕರ್ತವ್ಯ ನಿರತರಾಗಿದ್ದ ಪೊಲೀಸ್ ಪೇದೆಯೊಬ್ಬರ ಮೇಲೆ ಹಲ್ಲೆ ನಡೆಸಿದ್ದಾರೆ ಎಂಬ ಗಾಳಿ ಸುದ್ದಿ ಹಬ್ಬಿದ ಹಿನ್ನೆಲೆಯಲ್ಲಿ ಕೆಲ ಕಾಲ ಪ್ರಕ್ಷುಬ್ದ ವಾತಾವರಣ ನಿರ್ಮಾಣಗೊಂಡು ಪಟ್ಟನದ ಜನರನ್ನು ಕ್ಷಣಕಾಲ ಭಯಭೀತರನ್ನಾಗಿಸಿತ್ತು.
ಸಾರ್ವಜನಿಕರಿಗೆ ರಕ್ಷಣೆ ನೀಡುವ ಜವಾಬ್ದಾರಿ ಹೊತ್ತಿರುವ ಪೊಲೀಸ್ ಇಲಾಖೆಯ ಅಧಿಕಾರಿಗಳ ಅದಕ್ಷ ಆಡಳಿತದಿಂದ ರಾಜಕಾರಣಿಗಳ ಮರ್ಜಿಗೆ ಒಳಗಾಗಿ ಆರೋಪಿಗಳ ವಿರುದ್ಧ ದೂರು ದಾಖಲಿಸದೆ ಕೈತೊಳೆದುಕೊಂಡ ಪ್ರಸಂಗವೀಗ ವ್ಯಾಪಕ ಚರ್ಚೆಗೆ ಕಾರಣವಾಗಿದೆ.
ಸೋಮವಾರ ಸಂಜೆ ಹಾಸನ ವೃತ್ತದಲ್ಲಿ ಕಾರ್ಯೋನ್ಮುಖರಾಗಿದ್ದ ಪೇದೆ ರವಿ ಎಂಬುವವರು ನೋ ಪಾರ್ಕಿಂಗ್ನಲ್ಲಿ ನಿಲುಗಡೆ ಮಾಡಿದ ದ್ವಿಚಕ್ರ ವಾಹನವೊಂದರ ಗಾಳಿ ತೆಗೆದಿದ್ದಾರೆ. ಇದನ್ನೇ ನೆಪ ಮಾಡಿಕೊಂಡ ವಾಹನ ಮಾಲೀಕರು ಪೇದೆಯೊಂದಿಗೆ ವಾಗ್ವಾದಕ್ಕಿಳಿದಾಗ ಮಾತಿಗೆ ಮಾತು ಬೆಳೆದು, ಸಮೀಪದಲ್ಲಿದ್ದ ವಾಹನ ಮಾಲೀಕರ ಬೆಂಬಲಿಗರು ದುಂಡಾವರ್ತನೆ ಪ್ರದರ್ಶಿಸಿದ್ದಲ್ಲದೆ ಪೊಲೀಸ್ ಸಿಬ್ಬಂದಿಯನ್ನು ಮನ ಬಂದತೆ ಥಳಿಸಿದ್ದಾರೆ ಎಂಬ ವದಂತಿ ಕ್ಷಣಕಾಲದಲ್ಲಿ ಪಟ್ಟಣವನ್ನು ವ್ಯಾಪಿಸಿದ್ದರಿಂದ ಜನತೆ ಆತಂಕದ ಕ್ಷಣಗಳನ್ನು ಎದುರಿಸುವಂತಾಗಿತ್ತು.
ಯಾರ ಗಮನಕ್ಕೂ ಬಾರಲಿಲ್ಲ: ಘಟನೆ ಸಂಜೆ 5.45ರ ವೇಳೆಗೆ ಜರುಗಿದ್ದರೂ ತಡರಾತ್ರಿವರೆಗೂ ನಗರಠಾಣೆಯಲ್ಲಿ ಯಾವುದೇ ಪ್ರಕರಣ ದಾಖಲಾಗದಿರುವುದು ಅಚ್ಚರಿಗೆ ಕಾರಣವಾಯಿತು. ಘಟನೆಯ ಸಂಬಂದ ಉನ್ನತಾಧಿಕಾರಿಗಳ ನೇತೃತ್ವದಲ್ಲಿ ಸರಣಿ ಸಭೆಗಳು ನಡೆದರೂ ವಾಸ್ತವ ಅಂಶ ಮಾತ್ರ ಯಾರ ಗಮನಕ್ಕೂ ಬಂದಂತೆ ಕಾಣಲಿಲ್ಲ.
ಹಾಸನ ವೃತ್ತದ ವಿದ್ಯುತ್ ಕಂಬವೊಂದರಲ್ಲಿ ಅಳವಡಿಸಲಾಗಿರುವ ಸಿಸಿ ಕ್ಯಾಮೆರಾಗಳಲ್ಲಿ ಸೆರೆಯಾಗಿರುವ ದೃಶ್ಯ ವೀಕ್ಷಿಸಿ ತಪ್ಪಿತಸ್ಥರ ವಿರುದ್ಧ ದೂರು ದಾಖಲಿಸಲು ಮೀನಾಮೇಷ ಎಣಿಸಿದ್ದು ವಿಷಾದನೀಯ ಎಂಬ ಅಭಿಪ್ರಾಯ ನಾಗರಿಕರಲ್ಲಿ ಬಲವಾಗಿ ಕೇಳಿಬರುತ್ತಿದೆ.
ಅಲ್ಲದೆ, ಪೊಲೀಸ್ ಅಧಿಕಾರಿಗಳ ನಡವಳಿಕೆಯ ಬಗ್ಗೆಯೂ ವ್ಯಾಪಕ ಟೀಕೆಗಳು ವ್ಯಕ್ತವಾಗತೊಡಗಿವೆ. ಸಮಸ್ಯೆಯನ್ನು ಸಮರ್ಥವಾಗಿ ನಿಬಾಯಿಸಬೇಕಾದ ವೃತ್ತ ನಿರೀಕ್ಷಕರು ಸಿನಿಮಾ ಜೋಕುಗಳ ಮೂಲಕ ಹಾಸ್ಯಾಸ್ಪದವಾಗಿ ಮಾತನಾಡಿ, ಪ್ರಕರಣ ನಡದೇ ಇಲ್ಲ ಎಂಬಂತೆ ವರ್ತಿಸಿದ್ದು ಅವರ ಅಜ್ಞಾನಕ್ಕೆ ಹಿಡಿದ ಕೈಗನ್ನಡಿ ಎಂಬ ಮಾತು ನಾಗರಿಕರಿಂದ ಕೇಳಿಬರುತ್ತಿದೆ.     

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement