ಬಳಕೆಯಾಗದ ಟ್ಯಾಂಕ್: ಶಿವಣ್ಣ ಆಕ್ಷೇಪ
ಹೊಳೆನರಸೀಪುರ: ತಾಲೂಕಿನ ಹಳ್ಳಿಮೈಸೂರು ಹೋಬಳಿಗೆ ಸೇರಿರುವ ಶ್ರವಣೂರು ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿನ ದೇವರಮುದ್ದನಹಳ್ಳಿ ಗ್ರಾಮದ ದಲಿತರ ಕಾಲೋನಿಯಲ್ಲಿ ನಿರ್ಮಿಸಲಾಗಿರುವ ಕಿರು ನೀರು ಸರಬರಾಜು ಕಾಮಗಾರಿಯು ಪೂರ್ಣಗೊಂಡು ವರ್ಷ ಕಳೆದರೂ ಸಂಬಂಧಿಸಿದ ಇಲಾಖೆಯ ಅಧಿಕಾರಿಗಳ ನಿರ್ಲಕ್ಷ್ಯದಿಂದಾಗಿ ನೀರಿನ ಸಂಪರ್ಕವೇ ಇಲ್ಲದೇ, ಕಾಲೋನಿಯಲ್ಲಿನ ಜನರು ಕುಡಿಯುವ ನೀರಿಗಾಗಿ ಪರದಾಡುವ ಪರಿಸ್ಥಿತಿ ಇದೆ ಎಂದು ಅರಕಲಗೂಡು ಕ್ಷೇತ್ರದ ಬಿಜೆಪಿ ಕಾರ್ಯದರ್ಶಿಯಾದ ಶಿವಣ್ಣ ದೂರಿದ್ದಾರೆ.
ದೂರು: ದಲಿತರ ಕೇರಿಗೆ ಸುಮಾರು ರು. 5 ಲಕ್ಷ ವೆಚ್ಚದಲ್ಲಿ 2012-13ನೇ ಸಾಲಿನಲ್ಲಿ ಕಿರು ನೀರು ಸರಬರಾಜು ಟ್ಯಾಂಕನ್ನು ನಿರ್ಮಿಸಿರುವುದನ್ನು ಬಿಟ್ಟರೆ, ಕಾಮಗಾರಿ ಮುಗಿದು ಒಂದು ವರ್ಷ ಕಳೆದರೂ ಇದುವರೆವಿಗೂ ಈ ಟ್ಯಾಂಕಿನಿಂದ ನೀರಿನ ಸಂಪರ್ಕವನ್ನು ನೀಡದೇ ಇರುವ ಕಾರಣದಿಂದಾಗಿ, ಬೇಸಿಗೆಯ ದಿನಗಳಾದ್ದರಿಂದ ನೀರಿಗೆ ತೊಂದರೆಯಾಗಿದೆ ಎಂದು ಅವರು ದೂರಿದ್ದಾರೆ ಎಂದರು.
ಎಚ್ಚರಿಕೆ: ಈ ವಿಷಯವನ್ನು ಸಂಬಂಧಿಸಿದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಪ್ರಯೋಜನವಾಗಿಲ್ಲ ಎಂದು ದೂರಿರುವ ಶಿವಣ್ಣ, ಬಿಜೆಪಿ ಜಿಲ್ಲಾ ಕಾರ್ಯದರ್ಶಿ ಮೈಲಾರಯ್ಯ, ಹಾಗೂ ತಾಲೂಕು ಬಿಜೆಪಿ ಅಧ್ಯಕ್ಷ ಎಂ.ಎನ್. ರಾಜು, ಕೂಡಲೇ ಗ್ರಾಮದಲ್ಲಿನ ಈ ಅವ್ಯವಸ್ಥೆಯನ್ನು ಸರಿಪಡಿಸದಿದ್ದಲ್ಲಿ ಕಚೇರಿಯ ಎದುರು ಪ್ರತಿಭಟನೆ ನಡೆಸಬೇಕಾಗುತ್ತದೆ ಎಂದು ಎಚ್ಚರಿಸಿದ್ದಾರೆ.