ರಸಪ್ರಶ್ನೆ ಸ್ಪರ್ಧೆಯಲ್ಲಿ ಪವನ್ ಗೌಡಗೆ ಬಹುಮಾನ
ಅರಸೀಕೆರೆ: ಗ್ರಾಮೀಣ ಭಾಗದ ಪ್ರತಿಭೆಯೊಂದು ರಾಜ್ಯಾದ್ಯಂತ ಪ್ರಶಸ್ತಿ ಬಾಚಿಕೊಳ್ಳುವುದರಲ್ಲಿ ನಾನೊಬ್ಬ ಯಾವುದೇ ಕ್ರೀಡಾ ಸಾಧಕರಿಗೆ ಕಡಿಮೆಯಿಲ್ಲ ಎನ್ನುವಂತೆ ರಸಪ್ರಶ್ನೆ ಸ್ಪರ್ಧೆಯಲ್ಲಿ ಸಾಧನೆ ಮೆರೆದಿದ್ದಾನೆ. ತಾಲೂಕಿನ ಕಲ್ಯಾಡಿ ಗ್ರಾಮದ ಪಕ್ಕದಲ್ಲಿರುವ ಎಂ.ಕೊಪ್ಪಲು ಗ್ರಾಮದ ಯತೀಶ್ ಮಂಜುಳ ದಂಪತಿಗಳ ಪುತ್ರ ಎಂ. ವೈ, ಪವನ್ ಗೌಡ ಅವರು ತಾಲೂಕು, ಜಿಲ್ಲಾ ಹಾಗೂ ರಾಜ್ಯ ಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದಲ್ಲಿ ಜರುಗಿದ್ದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಂಡು ಪ್ರಶಸ್ತಿಗಳನ್ನು ಬಾಚಿಕೊಳ್ಳುವ ಮೂಲಕ ರಾಷ್ಟ್ರಾದ್ಯಂತ ಪ್ರಶಂಸೆಗೆ ಪಾತ್ರನಾಗಿದ್ದಾನೆ.
2008ರಲ್ಲಿ ನಡೆದ ಸಾರ್ವಜನಿಕ ಶಿಕ್ಷಣ ಇಲಾಖೆ ಹಾಸನದಲ್ಲಿ ಆಯೋಜಿಸಲಾಗಿದ್ದ ಜಿಲ್ಲಾ ಮಟ್ಟದ ಪ್ರಾಥಮಿಕ ಶಾಲಾ ಹಂತದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ ಪವನ್ ಗೌಡ ಪ್ರಥಮ ಸ್ಥಾನ ಗಳಿಸಿದರೆ, 2009ರಲ್ಲಿ ಮೈಸೂರಿನಲ್ಲಿ ನಡೆದ ವಿಭಾಗ ಮಟ್ಟದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ ಗಿಟ್ಟಿಸುವಲ್ಲಿ ಯಶಸ್ವಿಯಾಗಿದ್ದಾನೆ. ಸಾರ್ವಜನಿಕ ಶಿಕ್ಷಣ ಇಲಾಖೆ ಮಂಡ್ಯದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಪ್ರಾಥಮಿಕ ಹಾಗೂ ಪ್ರೌಢಶಾಲಾ ಹಂತದ ರಸಪ್ರಶ್ನೆ ಸ್ಪರ್ಧೆಯಲ್ಲಿ ಪಾಲ್ಗೊಂಡಿದ್ದ 2012 ಹಾಗೂ 2011ರಲ್ಲಿ ಮೈಸೂರು ವಿಭಾಗಮಟ್ಟದ ಪ್ರಥಮಸ್ಥಾನ ಪಡೆದಿದ್ದಾನೆ.
2013ರಲ್ಲಿ ನಡೆದ ರಾಜ್ಯ ಒಲಂಪಿಯಾಡ್ ಪರೀಕ್ಷೆಯಲ್ಲಿ ರಾಷ್ಟ್ರಮಟ್ಟಕ್ಕೆ ಆಯ್ಕೆಯಾಗಿರುವುದು ಸಂತಸವನ್ನು ಉಂಟುಮಾಡಿದೆ. ಕಲ್ಯಾಡಿ ಸರ್ಕಾರಿ ಪ್ರೌಢಶಾಲೆಯಲ್ಲಿ ಪ್ರಸ್ತುತ 9ನೇ ತರಗತಿಯಲ್ಲಿ ಈತ ವ್ಯಾಸಂಗ ಮಾಡುತ್ತಿದ್ದಾನೆ.