ಸಂಸ್ಕಾರಯುತ ಸಮಾಜಕ್ಕೆ ಎಲ್ಲರೂ ಬದ್ಧರಾಗಬೇಕು: ಕಾಂಚನ ಮಾಲಾ
ಕನ್ನಡಪ್ರಭ ವಾರ್ತೆ ಹಾಸನ ಜ. 29
ದೈನಂದಿನ ಬದುಕಿನಲ್ಲಿ ಉದಾತ್ತವಾದ ಚಿಂತನೆಗಳು ಸದ್ವಿಚಾರಗಳನ್ನು ಸ್ಮರಿಸಿಕೊಂಡು, ಸಂಸ್ಕಾರಯುತ ಸಮಾಜದ ನಿರ್ಮಾಣಕ್ಕೆ ನಾವೆಲ್ಲರೂ ಬದ್ಧರಾಗಬೇಕೆಂದು ಭಾರತ ಸ್ಕೌಟ್ಸ್ ಅಂಡ್ ಗೈಡ್ಸ್ ಜಿಲ್ಲಾ ತರಬೇತಿ ಆಯುಕ್ತೆ ಕಾಂಚನ ಮಾಲಾ ಸಲಹೆ ನೀಡಿದರು.
ಎಲ್ಲರ ಸಹಕಾರ ಅಗತ್ಯ: ನೆಹರು ಯುವ ಕೇಂದ್ರ ಹಾಗೂ ಕೆಂಚಟ್ಟಹಳ್ಳಿಯ ಸಂಧ್ಯಾರಾಣಿ ಮಹಿಳಾ ಸಮಾಜದ ಆಶ್ರಯದಲ್ಲಿ ಇತ್ತೀಚೆಗೆ ಏರ್ಪಡಿಸಿದ್ದ ವಿಷಯಾಧಾರಿತ ಅರಿವು ಮೂಡಿಸುವ ಶಿಕ್ಷಣ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿ, ನಮ್ಮ ಜೀವನ ಒತ್ತಡ ಹಾಗೂ ಆತಂಕಗಳಿಂದ ಮುಕ್ತವಾಗಬೇಕಾಗಿದೆ. ಹಿರಿಯರಾದ ನಾವು ಕಿರಿಯ ಮಕ್ಕಳಿಗೆ ಬದುಕಿನಲ್ಲಿ ಬರುವ ಕಷ್ಟಗಳನ್ನು ಸಹನೆಯಿಂದ ಸ್ವೀಕರಿಸಿ, ನ್ಯಾಯ, ಸತ್ಯವಾದ ಮಾರ್ಗದಲ್ಲಿ ನಡೆಯುವಂತ ನಾಗರಿಕ ಶಿಕ್ಷಣ ನೀಡಬೇಕಾಗಿದೆ. ಅಲ್ಲದೆ ಭವ್ಯ ಭಾರತವನ್ನು ಎಲ್ಲ ಕಲ್ಮಷಗಳಿಂದ ಬಿಡುಗಡೆಗೊಳಿಸಲು ಎಲ್ಲರ ಸಹಕಾರ ಅಗತ್ಯವಾಗಿದೆ ಎಂದರು.
ಸಮಸ್ಯೆ ಬಗೆಹರಿಸುವ ಸಾಧ್ಯತೆ: ಎನ್.ವೈ.ಕೆ. ಸಲಹಾ ಸಮಿತಿ ಸದಸ್ಯ ಮಹೇಶ್ ಮಾತನಾಡಿ, ಯುವಜನತೆ ಎಚ್ಚೆತ್ತುಕೊಂಡು ಪರಿಸರ ಸಂರಕ್ಷಣೆಗೆ ಕಾರ್ಯ ಪ್ರವೃತ್ತರಾಗಬೇಕು. ಬಡವರ ಊಟಿ ಎಂದು ಹೆಸರಾಗಿದ್ದ ಹಾಸನಕ್ಕೀಗ ಹತ್ತಾರು ಸಮಸ್ಯೆಗಳು ಕಾಡುತ್ತಿವೆ. ನಗರ ಸುತ್ತಲೂ ಇದ್ದ ಜಲ ಮೂಲಗಳಾದ ಚನ್ನಪಟ್ಟಣ ಕೆರೆ, ಬೀರನಹಳ್ಳಿ ಕೆರೆ, ಸತ್ಯಮಂಗಲದ ಕೆರೆ ಮುಂತಾದ ಕೆರೆಗಳು ಅಭಿವೃದ್ಧಿ ಹೆಸರಿನಲ್ಲಿ ಮುಚ್ಚಿ ಅಂತರ್ಜಲವೇ ಕುಸಿದುಹೋಗಿದೆ. ಇಂತಹ ಪರಿಸ್ಥಿತಿಯಲ್ಲಿ ಯುವಜನರು ಸಾಮಾಜದ ಬಗ್ಗೆ ಚಿಂತಿಸಿ ಸಮಸ್ಯೆಗಳ ಪರಿಹರಿಸುವ ನಿಟ್ಟಿನಲ್ಲಿ ದುಡಿದಾಗ ಮಾತ್ರ ಈ ಸಮಸ್ಯೆಗಳನ್ನು ಬಗೆ ಹರಿಸಲು ಸಾಧ್ಯತೆ ಇದೆ ಎಂದರು.
ಬೆಳವಣಿಗೆ ಸಾಧ್ಯತೆ: ಎನ್.ವೈ.ಕೆ. ಲೆಕ್ಕಾಧಿಕಾರಿ ಮಂಜುನಾಥ್ ಮಾತನಾಡಿ, ಯುವ ಸಂಘಗಳನ್ನು ರಚಿಸಿ ಅವುಗಳ ಮೂಲಕ ಗ್ರಾಮಾಭಿವೃದ್ಧಿಯಲ್ಲಿ ಶ್ರಮಿಸುವಂತೆ ಉತ್ತೇಜಿಸುವ ನಿಟ್ಟಿನಲ್ಲಿ ಸರ್ಕಾರ ಹಲವು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಯುವ ಜನರು ತಮ್ಮ ಗ್ರಾಮದ ಬೆಳವಣಿಗೆಗೆ ನಿಸ್ವಾರ್ಥವಾಗಿ ಪ್ರೀತಿಯಿಂದ ದುಡಿದಾಗ ಗಾಂಧೀಜಿಯವರ ಆಶಯದಂತೆ ಹಳ್ಳಿಗಳು ಅಭಿವೃದ್ಧಿಯಾದರೆ ದೇಶದ ಬೆಳವಣಿಗೆ ಸಾಧ್ಯತೆ ಇದೆ ಎಂದರು.
ಶ್ಲಾಘನೀಯ: ಆಕಾಶವಾಣಿಯ ಕಾರ್ಯಕ್ರಮ ನಿರ್ವಾಹಕ ಎಚ್. ಶ್ರೀನಿವಾಸ್ ಮಾತನಾಡಿ, ಮಹಿಳೆಯು ವಿಶಿಷ್ಟ ಸಾಧನೆ ಮೂಲಕ ನಾನಾ ಕ್ಷೇತ್ರಗಳಲ್ಲಿ ಸಾಧನೆಯ ಹಾದಿಯಲ್ಲಿ ಸಾಗುತ್ತಿದ್ದಾಳೆ. ಕುಟುಂಬದ ನಿರ್ವಹಣೆಯ ಜೊತೆಗೆ ಗ್ರಾಮೀಣ ಪ್ರದೇಶಗಳಲ್ಲಿ ಯುವ ಸಂಘ, ಮಹಿಳಾ ಸಮಾಜಗಳನ್ನು ರಚಿಸಿ, ಹತ್ತಾರು ಜನರ ಸ್ವಾವಲಂಬನೆ ಬದುಕಿಗೆ ತರಬೇತಿ ನೀಡುತ್ತಾ ಶ್ರಮಿಸುತ್ತಿರುವುದು ಶ್ಲಾಘನೀಯವಾದುದು ಎಂದರು.
ಸುಶೀಲಮ್ಮ ಅಧ್ಯಕ್ಷತೆ ವಹಿಸಿದ್ದರು. ಸರಸ್ವತಿ ಮಹಿಳಾ ಕಲಾ ಸಮಾಜದ ಸುಧಾ ರವಿಕುಮಾರ್ ಇದ್ದರು. ವೇದ ಶಿವಕುಮಾರ್ ಪ್ರಾರ್ಥಿಸಿ, ಬಿ.ಎಸ್ಸಿ ವಿದ್ಯಾರ್ಥಿನಿ ಮಾನಸ ನಿರೂಪಿಸಿ ಆರ್.ಜಿ. ಗಿರೀಶ್ ವಂದಿಸಿದರು.