ಅರಕಲಗೂಡಲ್ಲೂ ಪ್ರತಿಭಟನೆ
ಅರಕಲಗೂಡು: ಬಗುರ್ ಹುಕುಂ ಸಾಗುವಳಿಯನ್ನು ಸಕ್ರಮಗೊಳಿಸುವಂತೆ ಒತ್ತಾಯಿಸಿ ಬಹುಜನ ಸಮಾಜ ಪಕ್ಷದ ಕಾರ್ಯಕರ್ತರು ಪ್ರತಿಭಟನಾ ಮೆರವಣಿಗೆ ನಡೆಸಿದರು. ಇಲ್ಲಿನ ಪ್ರವಾಸಿ ಮಂದಿರದ ಬಳಿಯಿಂದ ಪಟ್ಟಣದ ಮುಖ್ಯ ರಸ್ತೆಗಳಲ್ಲಿ ಮೆರವಣಿಗೆ ನಡೆಸಿದ ಅವರು ತಾಲೂಕು ಕಚೇರಿ ಎದುರು ಕೆಲ ಕಾಲ ಧರಣಿ ನಡೆಸಿದರು. ಹಲವು ಬೇಡಿಕೆಗಳನ್ನು ಈಡೇರಿಸುವಂತೆ ಇದೇ ವೇಳೆ ಒತ್ತಾಯಿಸಲಾಯಿತು. ಪ್ರತಿಭಟನೆಯ ನೇತೃತ್ವವನ್ನು ಬಿ.ಎಸ್.ಪಿ ಜಿಲ್ಲಾಧ್ಯಕ್ಷ ಬಿ.ಸಿ. ರಾಜೇಶ್, ತಾಲೂಕು ಸಂಯೋಜಕ ಚಿನ್ನಸ್ವಾಮಿ,ಜಿಲ್ಲಾ ಪ್ರಧಾನ ಕಾರ್ಯದರ್ಶಿ ಎ.ಪಿ. ಹರೀಶ್ ಸೇರಿದಂತೆ ಹಲವು ಮುಖಂಡರು ವಹಿಸಿದ್ದರು.
ಬೇಡಿಕೆಗಳು ಏನೇನು ?
ಸರ್ಕಾರ ತಕ್ಷಣ ಕಾರ್ಯೋನ್ಮುಖವಾಗಿ ಬಾಲಸುಬ್ರಮಣ್ಯನ್ರವರ ಸಮಿತಿಯ ವರದಿಯನ್ನು ಒಪ್ಪಿಕೊಳ್ಳಬೇಕು. ಇದರಲ್ಲಿ ಎಸ್ಸಿ, ಎಸ್ಟಿ, ಹಿಂದುಳಿದ ಜಾತಿಗಳು, ಅಲ್ಪಸಂಖ್ಯಾತರು ಮತ್ತು ಭೂ ರಹಿತರು ರಾಜ್ಯಾದ್ಯಂತ ಅಕ್ರಮವಾಗಿ ಸಾಗುವಳಿ ಮಾಡಿಕೊಂಡು ನಮೂನೆ 50 ಮತ್ತು 53ರ ಪ್ರಕಾರ ಅರ್ಜಿ ಸಲ್ಲಿಸಿರುವ ಭೂಮಿಯನ್ನು ಸಕ್ರಮಗೊಳಿಸಲು ತಕ್ಷಣ ಕ್ರಮಕೈಗೊಂಡು ಅವರಿಗೆ ಸಾಗುವಳಿ ಪತ್ರ ನೀಡಬೇಕು.
ದೊಡ್ಡ ಭೂಮಾಲೀಕರು, ದೊಡ್ಡ ಪ್ಲಾಂಟರ್ಗಳು ಮತ್ತು ರಿಯಲ್ ಎಸ್ಟೇಟ್ ಭೂಮಾಫಿಯಾಗಳು ರಾಜ್ಯಾದ್ಯಂತ ಅಕ್ರಮವಾಗಿ ಕಬಳಿಸಿರುವ ಭೂಮಿಯನ್ನು ಸರ್ಕಾರ ತಕ್ಷಣ ವಶಪಡಿಸಿಕೊಂಡು ಭೂ ರಹಿತ ಕುಟುಂಬಗಳಿಗೆ ಹಂಚಿಕೆ ಮಾಡಬೇಕು.
1991 ಮತ್ತು 1999ರ ಅವಧಿಯಲ್ಲಿ ನಿಗಧಿತ ನಮೂನೆಯಲ್ಲಿ ಅರ್ಜಿ ಸಲ್ಲಿಸಲು ಸಾಧ್ಯವಾಗದ ಮತ್ತು ನಂತರ ದಿನಗಳಲ್ಲಿ ಬಗರ್ಹುಕುಂ ಸಾಗುವಳಿ ಮಾಡುತ್ತಿರುವ ಭೂ ರಹಿತರು, ಸಣ್ಣ ಹಿಡುವಳಿದಾರರಿಗೆ ಮತ್ತೊಮ್ಮೆ ಅರ್ಜಿ ಸಲ್ಲಿಸಲು ಒಂದು ಕಾಲಾವಕಾಶವನ್ನು ನೀಡಬೇಕು.
ಸರ್ಕಾರದ ಸೀಲಿಂಗ್ ಲಿಮಿಟ್ಗಿಂತ ಹೆಚ್ಚುವರಿ ಭೂಮಿಯನ್ನು ಹೊಂದಿರುವ ಭೂ ಮಾಲೀಕರಿಂದ ಭೂಮಿಯನ್ನು ಸರ್ಕಾರ ವಶಪಡಿಸಿಕೊಂಡು ಭೂರಹಿತರಿಗೆ ಹಂಚಿಕೆ ಮಾಡಬೇಕು. ಈ ಕಾರ್ಯಗಳನ್ನು ನಿರ್ವಹಿಸಲು ಸರ್ಕಾರ ತಕ್ಷಣ ಭೂನ್ಯಾಯ ಮಂಡಳಿಗಳನ್ನು ರಚನೆ ಮಾಡಬೇಕು.
ರಾಜ್ಯದ ಶೇ. 80ರಷ್ಟು ಹಳ್ಳಿಗಳಲ್ಲಿ ಸ್ಮಶಾನ ಭೂಮಿ ಇಲ್ಲದಿರುವುದರಿಂದ ಸರ್ಕಾರ ತಕ್ಷಣ ಎಲ್ಲಾ ಹಳ್ಳಿ ಮತ್ತು ನಗರ ಪ್ರದೇಶಗಳು ಒಂದು ಕಾಲಮಿತಿಯಲ್ಲಿ ಸ್ಮಶಾನ ಭೂಮಿಯನ್ನು ಒದಗಿಸಿಕೊಡಬೇಕು.
ಹಾಸನ ನಗರದ ಪೆನ್ಷನ್ ಮೊಹಲ್ಲಾ, ಚಿಕ್ಕನಾಳು ಮೆಹಬೂಬ್ ನಗರ, ಟಿಪ್ಪುನಗರ, ಅಂಬೇಡ್ಕರ್ ನಗರ, ಸಿದ್ದಯ್ಯನಗರ, ಜೈಲ್ ಖಾನೆ ಮತ್ತು ಶ್ರೀನಗರದಲ್ಲಿ ವಾಸಿಸುತ್ತಿರುವ ನಿವಾಸಿಗಳಿಗೆ ನಿವೇಶನ ಮತ್ತು ಮನೆಗಳ ಹಕ್ಕು ಪತ್ರ ವಿತರಿಸಬೇಕು.
ತಾಲೂಕಿನ ಶೇ. 80ರಷ್ಟು ಮೀಸಲು ಸ್ಮಶಾನ ಭೂಮಿ ಇಲ್ಲದಿರುವುದರಿಂದ ಸರ್ಕಾರ ಕೂಡಲೇ ಎಲ್ಲಾ ಹಳ್ಳಿ ಮತ್ತು ನಗರ ಪ್ರದೇಶಗಳಿಗೂ ನಿರ್ದಿಷ್ಟ ಕಾಲಮಿತಿಯಲ್ಲಿ ಸ್ಮಶಾನ ಭೂಮಿ ಒದಗಿಸಿಕೊಡಬೇಕು.
ನಗರಸಭೆ ಮತ್ತು ಪುರಸಭೆಗಳಲ್ಲಿ ಗುತ್ತಿಗೆ ಆಧಾರದ ಮೇಲೆ ಕೆಲಸ ಮಾಡುತ್ತಿರುವವರನ್ನು ಕೂಡಲೇ ಖಾಯಂಗೊಳಿಸಬೇಕು.
ಹಾಸನ ನಗರದಲ್ಲಿ 5 ಗುಂಟೆ ಮೇಲ್ಪಟ್ಟ ಜಮೀನು ಮಾರಾಟಕ್ಕೆ ನಕಾಶೆ ತಯಾರಿಸುತ್ತಾರೆ. ಆದರೆ ಆದರಲ್ಲಿ ವಿಭಾಗಿಸಲ್ಪಟ್ಟ 1-2 ಗುಂಟೆ ಜಾಗವನ್ನು ಮಾರಲು ಸರ್ವೇ ನಕಾಶೆಯನ್ನು ಮಾಡಿ ಕೊಡುತ್ತಿಲ್ಲ. ತಹಸೀಲ್ದಾರ್ ಅವರು ಈ ಬಗ್ಗೆ ಗಮನ ಹರಿಸಿ 1-2 ಗುಂಟೆಗೂ ಸಹ ನಕಾಶೆ ತಯಾರಿಸಿ ಜಮೀನು ಮಾರಾಟ ಮಾಡಲು ಮುಕ್ತ ಅವಕಾಶ ಮಾಡಿಕೊಡಬೇಕು.
ಸರ್ವೇ ಸ್ಕೆಚ್ ಶುಲ್ಕವನ್ನು ರು. 600ರಿಂದ ರು. 2500ಗೆ ಹೆಚ್ಚಿಸಿದ್ದು, ಹೊಸ ದರವನ್ನು ರದ್ದುಗೊಳಿಸಿ, ಹಳೆಯ ದರವನ್ನು ಯಥಾವತ್ತಾಗಿ ಮುಂದುವರಿಸಬೇಕು.