ಕಾಡಾನೆ ದಾಳಿ: ಒಟ್ಟು 8 ಸಾವು
ಹಾಸನ: ಕಳೆದ ಎರಡು ವರ್ಷಗಳಲ್ಲಿ ಕಾಡಾನೆ ದಾಳಿಯಿಂದ ಜಿಲ್ಲೆಯಲ್ಲಿ ಒಟ್ಟು 8 ಜನರು ಮೃತಪಟ್ಟಿದ್ದಾರೆ ಎಂದು ಅರಣ್ಯ ಸಚಿವ ಬಿ. ರಮಾನಾಥ ರೈ ತಿಳಿಸಿದ್ದಾರೆ. 2012-13ನೇ ಸಾಲಿನಲ್ಲಿ 5 ಮತ್ತು 2013-14 ನೇ ಸಾಲಿನಲ್ಲಿ 4 ಜನ ಸಾವಿಗೀಡಾಗಿದ್ದಾರೆ ಎಂದು ಅವರು ತಿಳಿಸಿದರು.
ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ಕೇಳಿದ ಪ್ರಶ್ನೆಗೆ ಉತ್ತರಿಸಿದ ಸಚಿವರು, ಕಾಡಾನೆ ದಾಳಿಯಿಂದ 2013-14ನೇ ಸಾಲಿನಲ್ಲಿ 1 ಹೆಂಚಿನ ಮನೆಯನ್ನು ಜಖಂಗೊಳಿಸಿದ್ದು ಒಂದು ಜೀಪಿನ ಮೇಲೆ ಸಹ ದಾಳಿ ನಡೆಸಿದೆ ಎಂದರು.
ಕ್ರಮ ಕೈಗೊಳ್ಳಲಾಗುತ್ತಿದೆ: ಆಲೂರು ಮತ್ತು ಸಕಲೇಶಪುರ (ಆಲೂರು, ಸಕಲೇಶಪುರ, ಯಸಳೂರು ವಲಯ) ತಾಲ್ಲೂಕುಗಳಲ್ಲಿ ಕಾಡಾನೆಗಳ ಹಾವಳಿಯಿದ್ದು ಮಾನವರ ಮೇಲೆ ದಾಳಿ ಮಾಡುವ 25 ಕಾಡಾನೆಗಳನ್ನು ಗುರ್ತಿಸಿ ಅವುಗಳ ಪೈಕಿ 2 ಕಾಡಾನೆಗಳನ್ನು ಸೆರೆಹಿಡಿದು ಮತ್ತಿಗೋಡು ಅರಣ್ಯ ಶಿಬಿರಕ್ಕೆ ಸ್ಥಳಾಂತರಿಸಲಾಗಿದೆ. ಉಳಿದ 23 ಕಾಡಾನೆಗಳನ್ನು ಸೆರೆಹಿಡಿಯಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಸಚಿವರು ತಿಳಿಸಿದರು.
ಆನೆ ಕ್ಯಾಂಪ್: ಕಾಡಿನಿಂದ ಆಹಾರ ಹುಡುಕಿಕೊಂಡು ಕಾಡಾನೆಗಳು ಬರುವುದನ್ನು ತಡೆಯಲು ಅರಣ್ಯದಂಚಿನಲ್ಲಿ 9 ಕಿಮೀ ಆನೆ ತಡೆ ಕಂದಕವನ್ನು ನಿರ್ಮಿಸಲಾಗಿದೆ. ಅದೇ ರೀತಿ ಯಸಳೂರು ವಲಯದಲ್ಲಿ 9.50 ಕಿ.ಮೀ ಸೋಲಾರ್ ಫೆನ್ಸಿಂಗ್ ವ್ಯವಸ್ಥೆಯನ್ನು ಕಲ್ಪಿಸಲಾಗಿದೆ. 08 ಆನೆ ತಡೆ ಕ್ಯಾಂಪ್ಗಳನ್ನು ರಚಿಸಲಾಗಿದೆ ಎಂದರು.
ಶೀಘ್ರ ಕಾಡಾನೆಗಳ ಸೆರೆ: ಸಾರ್ವಜನಿಕರ ಆಸ್ತಿ- ಪಾಸ್ತಿ ಮತ್ತು ಪ್ರಾಣಹಾನಿಗೆ ಕಾರಣವಾಗಿರುವ ಆಲೂರು ವಲಯದಲ್ಲಿರುವ 23 ಕಾಡಾನೆಗಳನ್ನು ಸೆರೆಹಿಡಿಯುವ ಕಾರ್ಯಾಚರಣೆ ಪೂರ್ವಭಾವಿ ಸಿದ್ಧತೆಯನ್ನು ಮಾಡಿಕೊಳ್ಳಲಾಗುತ್ತಿದ್ದು, ಸದ್ಯದಲ್ಲಿಯೇ ಈ ಕಾಡಾನೆಗಳನ್ನು ಸೆರೆಹಿಡಿದು ಸ್ಥಳಾಂತರಿಟಲು ಕ್ರಮ ಕೈಗೊಳ್ಳಲಾಗುತ್ತಿದೆ ಎಂದು ಅರಣ್ಯ ಸಚಿವರು ಉತ್ತರಿಸಿದರು.