ಬಗರ್ಹುಕುಂ ಸಕ್ರಮಕ್ಕೆ ಬಿಎಸ್ಪಿ ಪ್ರತಿಭಟನೆ
ಕ.ಪ್ರ.ವಾರ್ತೆ ಹಾಸನ ಜ. 30
ಬಗರ್ಹುಕುಂ ಸಾಗುವಳಿ ವಿಚಾರಕ್ಕೆ ಸಂಬಂಧಿಸಿದಂತೆ ನೇಮಿಸಲ್ಪಿಟ್ಟಿದ್ದ ವಿ. ಬಾಲಸುಬ್ರಮಣ್ಯನ್ ಸಮಿತಿ ಶಿಫಾರಸುಗಳಂತೆ, ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಿ ಭೂ ರಹಿತರಿಗೆ ಭೂಮಿ ಕೊಡುವಂತೆ ಆಗ್ರಹಿಸಿ ಬಹುಜನ ಸಮಾಜ ಪಾರ್ಟಿ (ಬಿ ಎಸ್ಪಿ) ಕಾರ್ಯಕರ್ತರು ಗುರುವಾರ ಪ್ರತಿಭಟನೆ ನಡೆಸಿದರು.
ಪ್ರತಿಭಟನಾಕಾರರು ನಗರದ ತಾಲೂಕು ಕಚೇರಿಗೆ ಮುಂದೆ ಕೆಲ ಸಮಯ ಧರಣಿ ನಡೆಸಿ ತಹಸೀಲ್ದಾರ್ಗೆ ಮನವಿ ನೀಡಿದರು.
2011ರಲ್ಲೇ ವರದಿ: ಬಗರ್ ಹುಕುಂ ಸಾಗುವಳಿ ಸಕ್ರಮಗೊಳಿಸಿ ಭೂ ರಹಿತರಿಗೆ ಭೂಮಿ ಕೊಡಿ ಎಂದು ಈಗಾಗಲೇ ಕಳೆದ ನವೆಂಬರ್ನಲ್ಲಿ 3 ದಿನಗಳ ಕಾಲ ಪ್ರತಿ ಜಿಲ್ಲಾ ಕೇಂದ್ರಗಳಲ್ಲಿ ಪ್ರತಿಭಟನೆ ನಡೆಸಲಾಗಿದೆ. ಆದರೂ ಕಾಂಗ್ರೆಸ್ ಸರ್ಕಾರ ಯಾವುದೇ ಕ್ರಮಗಳನ್ನು ಕೈಗೊಂಡಿಲ್ಲ. 2009ರಲ್ಲಿ ಸರ್ಕಾರಿ ಭೂಮಿಯನ್ನು ರಕ್ಷಣೆ ಮಾಡಲು ನಿವೃತ್ತ ಐಎಎಸ್ ಅಧಿಕಾರಿ ವಿ. ಬಾಲಸುಬ್ರಮಣ್ಯನ್ ಅವರ ಅಧ್ಯಕ್ಷತೆಯಲ್ಲಿ ಸರ್ಕಾರ ಒಂದು ಸಮಿತಿಯನ್ನು ಮಾಡಿತು. ಆ ಸಮಿತಿ, 2011ರಲ್ಲಿ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಿದೆ.
ಆ ವರದಿಯ ಪ್ರಕಾರ ರಾಜ್ಯಾದ್ಯಂತ ಸುಮಾರು 12 ರಿಂದ 15 ಲಕ್ಷ ಎಕರೆ ಸರ್ಕಾರಿ ಭೂಮಿ ಅನಧಿಕ-ತವಾಗಿ ಒತ್ತುವರಿಯಾಗಿದೆ. ಇದರಲ್ಲಿ ಬೆಂಗಳೂರು ನಗರ, ಗ್ರಾಮಾಂತರ, ಮೈಸೂರು, ಚಿಕ್ಕಮಗಳೂರು ಮುಂತಾದ ಕಡೆ ದೊಡ್ಡ ಪ್ಲಾಂಟರ್ಗಳು, ದೊಡ್ಡ ಭೂಮಾಲೀಕರು ಮತ್ತು ರಿಯಲ್ ಎಸ್ಟೇಟ್ ಭೂ ಮಾಫಿಯಾಗಳು ಲಕ್ಷಾಂತರ ಎಕರೆ ಭೂಮಿಯನ್ನು ಅಕ್ರಮವಾಗಿ ಹಿಡಿದಿಟ್ಟುಕೊಂಡಿದ್ದಾರೆ ಎಂದು ವರದಿಯಲ್ಲಿ ಪ್ರಸ್ತಾಪಿಸಿದ್ದು, ಈ ವರದಿಯನ್ನು ಜಾರಿಗೊಳಿಸಬೇಕು ಎಂದು ಒತ್ತಾಯಿಸಿದರು.
ಇದೇ ವರದಿಯನ್ನು ಸರ್ಕಾರ ಅನುಷ್ಠಾನಕ್ಕೆ ತರಬೇಕು ಎಂದು ಪ್ರತಿಭಟನಾಕಾರರು ಸರ್ಕಾರವನ್ನು ಒತ್ತಾಯಿಸಿದರು.
ವಿಧಾನಸೌಧ ಮುತ್ತಿಗೆ: ಈ ಪ್ರತಿಭಟನೆಗೆ ರಾಜ್ಯ ಸರ್ಕಾರ ಸ್ಪಂದಿಸದಿದ್ದರೆ, 1 ಲಕ್ಷಕ್ಕೂ ಹೆಚ್ಚು ಮಂದಿಯಿಂದ ವಿಧಾನ ಸೌಧ ಮುತ್ತಿಗೆ ಹಾಕಲಾಗುತ್ತದೆ ಎಂದು ಬಿಎಸ್ಪಿ ಕಾರ್ಯಕರ್ತರು ಎಚ್ಚರಿಕೆ ನೀಡಿದ್ದಾರೆ.
ಭೂ ರಹಿತರಿಗಾಗಿ ಹಾಗೂ ಕೃಷಿ ಕಾರ್ಮಿಕರಿಗಾಗಿ ಭೂಮಿ ಕೊಡಿಸಲು ಎಂಥ ಸ್ಥಿತಿಯನ್ನಾದರೂ ಎದುರಿಸಲು ಸಿದ್ಧರಿದ್ದೇವೆ ಎಂದ ಕಾರ್ಯಕರ್ತರು, ಎಸ್ಸಿ, ಎಸ್ಟಿ, ಒಬಿಸಿ ಗಳಿಗೆ ಖಾಲಿ ಇರುವ 3 ಲಕ್ಷ ಸರ್ಕಾರಿ ಬ್ಯಾಕ್ಲಾಕ್ ಹುದ್ದೆಗಳನ್ನು ಭರ್ತಿ ಮಾಡಬೇಕು. ಆರೋಗ್ಯ ಇಲಾಖೆ, ಶಿಕ್ಷಣ ಇಲಾಖೆ, ಸಮಾಜ ಕಲ್ಯಾಣ ಇಲಾಖೆಗಳಲ್ಲಿ ಗುತ್ತಿಗೆ ನೌಕರರನ್ನು ಕೂಡಲೇ ಖಾಯಂಗೊಳಿಸಬೇಕು. ಅಸ್ಪೃಶ್ಯತಾ ನಿವಾರಣಾ ಕಾಯ್ದೆಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಬೇಕು. ಎಲ್ಲಾ ಗ್ರಾಮ ಪಂಚಾಯ್ತಿಗಳಲ್ಲಿ ಎಸ್ಸಿ, ಎಸ್ಟಿ ಶೇ. 22ರಷ್ಟು ಅನುದಾನವನ್ನು ಸಮರ್ಪಕವಾಗಿ ಬಳಸಬೇಕು ಎಂದು ಅವರು ಆಗ್ರಹಿಸಿದರು.
ದಲಿತರ ಪಶ್ಚಾತ್ತಾಪ: ದಲಿತರು ಕಾಂಗ್ರೆಸ್ ಸರ್ಕಾರಕ್ಕೆ ಮತಹಾಕಿ ಪಶ್ಚಾತ್ತಾಪ ಪಡುತ್ತಿದ್ದಾರೆ. ಕಾಂಗ್ರೆಸ್ ಸರ್ಕಾರ ದಲಿತ ವಿರೋಧಿ ನೀತಿಯನ್ನು ಅನುಸರಿಸುತ್ತಿದ್ದು, ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಈ ಬಾರಿ ದಲಿತರು ಕಾಂಗ್ರೆಸ್ಗೆ ತಕ್ಕ ಪಾಠ ಕಲಿಸಲಿದ್ದಾರೆ. ಕಂದಾಯ ಇಲಾಖೆ, ಲೋಕೋಪಯೋಗಿ ಮತ್ತು ಸಮಾಜ ಕಲ್ಯಾಣ ಇಲಾಖೆಗಳಲ್ಲಿ ದಲಿತ ನಾಯಕರು ಇದ್ದರೂ ಸಹ ಅವರು ತಮ್ಮ ಕಾರ್ಯನಿರ್ವಹಿಸುವಲ್ಲಿ ವಿಫಲರಾಗಿದ್ದಾರೆ ಎಂದು ಆರೋಪಿಸಿದರು.
ಹಳ್ಳಿಗಳಿಂದ ಬಂದು ಅಧಿಕಾರದ ಗದ್ದುಗೆ ಹಿಡಿದಿರುವ ದಲಿತ ಮಂತ್ರಿಗಳು ಹಾಸ್ಟೆಲ್ಗಳ ಕಷ್ಟವನ್ನು ಅರಿತ್ತಿದ್ದರೂ ಹಾಸ್ಟೆಲ್ ವಿದ್ಯಾರ್ಥಿಗಳಿಗೆ ದಿನಕ್ಕೆ ರು. 33ಗಳನ್ನು ನೀಡುತ್ತಿದ್ದಾರೆ. ಅದೇ ಅಪರಾಧ ಎಸಗಿ ಜೈಲಿನಲ್ಲಿ ಇರುವಂತಹ ಖೈದಿಗಳಿಗೆ ದಿನಕ್ಕೆ ರು. 72 ಸರ್ಕಾರ ನೀಡುತ್ತಿದೆ. ಸುಬ್ರಮಣ್ಯ ವರದಿಯನ್ನು ಜಾರಿ ಮಾಡಿ ಬಗರು ಹುಕುಂ ಸಾಗುವಳಿ ಸಕ್ರಮಗೊಳಿಸಿ ಭೂರಹಿತರಿಗೆ ಭೂಮಿ ನೀಡಬೇಕು ಎಂದು ಕಾರ್ಯಕರ್ತರು ಪಟ್ಟು ಹಿಡಿದರು. ಈ ಸಂದರ್ಭದಲ್ಲಿ ಜಿಲ್ಲಾ ಸಂಯೋಜಕರಾದ ಎ.ಪಿ.ಅಹಮ್ಮದ್, ಕುಮಾರ್ ಗೌರವ್ ಹಾಗೂ ದೇವರಾಜ್, ಉಪಾಧ್ಯಕ್ಷ ರಾಜು ಅರೇಹಳ್ಳಿ, ಪ್ರಧಾನ ಕಾರ್ಯದರ್ಶಿ ಹರೀಶ್, ಖಜಾಂಚಿ ಶಿವಮ್ಮ, ಸ್ವೀವನ್ ಪ್ರಕಾಶ್, ರವಿಕುಮಾರ್, ಕೆ.ವೈ. ಜಗದೀಶ್, ಮುಖ್ತೇರ್ ಪಾಷ, ಶಾಖೀರ್, ಸೈಯದ್ ಇರ್ಷಾದ್, ಮಲ್ಲಿಕ್, ಹಸೀಬ್, ಮಂಜುನಾಥ್, ಸಗೀರ್ ಅಹಮದ್, ಕುಮಾರ್ ಹಾಗೂ ಇದ್ದರು.