ಬೇಲೂರಿಗೆ ಇಂದು ಲೋಕಾಯುಕ್ತ ಎಸ್ಪಿ ಭೇಟಿ
ಹಾಸನ: ಕರ್ನಾಟಕ ಲೋಕಾಯುಕ್ತ ಜಿಲ್ಲಾ ಎಸ್ಪಿ ಡಾ ಸಿ.ಬಿ. ವೇದಮೂರ್ತಿ ಹಾಗೂ ಹೆಚ್ಚುವರಿ ಎಸ್ಪಿ, ಇನ್ಸ್ಪೆಕ್ಟರ್ ಮತ್ತು ಸಿಬ್ಬಂದಿ ಜ. 31 ರಂದು ಬೇಲೂರು ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ಬೆಳಿಗ್ಗೆ 10 ರಿಂದ ಮಧ್ಯಾಹ್ನ 1.30ರವರೆಗೆ ನಂತರ ಹಾಸನ ತಾಲ್ಲೂಕಿನ ಪ್ರವಾಸಿ ಮಂದಿರದಲ್ಲಿ ಮಧ್ಯಾಹ 2ರಿಂದ ಸಂಜೆ 05.30 ರವರೆಗೆ ಭೇಟಿ ನೀಡಲಿದ್ದು, ಆ ಸಮಯದಲ್ಲಿ ಸಾರ್ವಜನಿಕರಿಂದ ಅಹವಾಲು ಸ್ವೀಕರಿಸಲಿದ್ದು, ಸಾರ್ವಜನಿಕರು ತಮ್ಮ ಅಹವಾಲುಗಳನ್ನು ಸಲ್ಲಿಸಬಹುದಾಗಿದೆ.
ರು. 1800 ಬೆಂಬಲ ಬೆಲೆಗೆ ರಾಗಿ ಖರೀದಿ
ಹಾಸನ: ಮುಕ್ತ ಮಾರುಕಟ್ಟೆಯಲ್ಲಿ ರಾಗಿಯ ಬೆಲೆ ಕುಸಿದಿದ್ದು, ಸರ್ಕಾರದ ಆದೇಶದಂತೆ ಬೆಂಬಲ ಬೆಲೆಯಲ್ಲಿ ಪ್ರತಿ ಕ್ವಿಂಟಾಲ್ಗೆ ರು. 1800 ದರದಲ್ಲಿ ಖರೀದಿಸಲು ರಾಗಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿರುತ್ತದೆ.
ಹಾಸನ ಎಪಿಎಂಸಿ ಯಾರ್ಡ್, ಹೊಳೆನರಸೀಪುರ ಎಪಿಎಂಸಿ ಯಾರ್ಡ್, ಚನ್ನರಾಯಪಟ್ಟಣ ಎಪಿಎಂಸಿ ಯಾರ್ಡ್, ಅರಸೀಕೆರೆ ತಾಲ್ಲೂಕಿನಲ್ಲಿ ಗಂಡಸಿ ಎಪಿಎಂಸಿ ಯಾರ್ಡ್ ಮತ್ತು ಜಾವಗಲ್ ಎಪಿಎಂಸಿ ಯಾರ್ಡ್ನಲ್ಲಿ ಖರೀದಿ ಕೇಂದ್ರಗಳನ್ನು ತೆರೆಯಲಾಗಿದೆ.
ಮೇಲಿನ ಖರೀದಿ ಕೇಂದ್ರಗಳಲ್ಲಿ ರೈತರಿಂದ ಮಾತ್ರ ರಾಗಿ ಖರೀದಿಸಲು ಕ್ರಮ ಕೈಗೊಳ್ಳ ಲಾಗಿರುವುದರಿಂದ ರೈತರು ಖರೀದಿ ಕೇಂದ್ರಗಳಿಗೆ ರಾಗಿ ಮಾರಾಟ ಮಾಡಲು ತಾವು ರೈತರು ಎಂಬುದಕ್ಕೆ ಸಂಬಂಧಿಸಿದ ತಹಸೀಲ್ದಾರರಿಂದ ದೃಢೀಕೃತ ಪಹಣಿಯನ್ನು ಹಾಜರುಪಡಿಸಲು ತಿಳಿಸಿದೆ.
ಈ ಬಗ್ಗೆ ಯಾವುದೇ ವಿಚಾರಣೆಗಳಿದ್ದಲ್ಲಿ ಸಂಬಂಧಿಸಿದ ತಾಲ್ಲೂಕಿನ ತಹಸೀಲ್ದಾರ್ ಹಾಗೂ ಜಿಲ್ಲಾ ವ್ಯವಸ್ಥಾಪಕರು ಕೆಎಫ್ಸಿಎಸ್ಸಿ ಹಾಸನ ಜಿಲ್ಲೆ ಹಾಸನ ಇವರನ್ನು ಸಂಪರ್ಕಿಸಲು ಕೋರಿದೆ.
ಅಂಗನವಾಡಿ ಹುದ್ದೆಗೆ ಅರ್ಜಿ ಆಹ್ವಾನ
ಹಾಸನ: ಅರಸೀಕೆರೆ ಪುರಸಭಾ ವ್ಯಾಪ್ತಿಯ ಸುಭಾಷ್ ನಗರ ವಾರ್ಡ್ ಸಂಖ್ಯೆ 14 ಅಂಗನವಾಡಿ ಕೇಂದ್ರಕ್ಕೆ ಅಂಗನವಾಡಿ ಕಾರ್ಯಕರ್ತೆ ಹುದ್ದೆಗೆ ಅರ್ಜಿ ಆಹ್ವಾನಿಸಲಾಗಿದೆ. ಅರ್ಜಿ ಸಲ್ಲಿಸಲು ಫೆ. 20 ಕಡೇ ದಿನ. ಹೆಚ್ಚಿನ ಮಹಿತಿಗಾಗಿ ಶಿಶು ಅಭಿವೃದ್ಧಿ ಯೋಜನಾಧಿಕಾರಿಯವರ ಕಚೇರಿ ಸಂಪರ್ಕಿಸಿ ಪಡೆಯಬಹುದು.
ಭೂ ಸೇನೆ ರ್ಯಾಲಿ
ಹಾಸನ: ಭಾರತಿಯ ಭೂಸೇನಾ ಪಡೆಯಲ್ಲಿ ಸೋಲ್ಜರ್ ಜನರಲ್ ಡ್ಯೂಟಿ, ಟೆಕ್ನಿಕಲ್, ಕ್ಲರಿಕಲ್, ಎಸ್ಕೆಟಿ, ನರ್ಸಿಂಗ್ ಅಸಿಸ್ಟೆಂಟ್, ಟ್ರೇಡ್ಮೆನ್ ಹಾಗೂ ಡಿಎಸ್ಸಿ ಹುದ್ದೆಗಳ ಭರ್ತಿ ರ್ಯಾಲಿಯನ್ನು ಫೆ. 10ರಿಂದ 17ರವರೆಗೆ ಕಾರವಾರದ ಮಾಲಾದೇವಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ. ಆಸಕ್ತ ಅವಿವಾಹಿತ ಯುವಕರು ರ್ಯಾಲಿಯಲ್ಲಿ ಭಾಗವಹಿಸಬಹುದು.
ಅರ್ಹತೆಗಳು: ವಯಸ್ಸು - 17. 1.2 ರಿಂದ 23 ವರ್ಷಗಳು ಡಿಎಸ್ಸಿಯವರಿಗೆ 48 ವರ್ಷ, ವಿದ್ಯಾರ್ಹತೆ - ನಾನಾ ಹುದ್ದೆಗಳಿಗೆ ಅನುಗುಣವಾಗಿ ಎಸ್ಸೆಸ್ಸೆಲ್ಸಿ, ದ್ವಿತೀಯ ಪಿಯುಸಿಯಲ್ಲಿ ಕನಿಷ್ಠ 40ರಿಂದ 50ರಷ್ಟು ಅಂಕಗಳನ್ನು ಪಡೆದು ಪಾಸಾಗಿರಬೇಕು ಹಾಗೂ ಟ್ರೇಡ್ಮನ್ ಹುದ್ದೆ 8ನೇ ತರಗತಿ ಪಾಸಾಗಿರಬೇಕು. ಎತ್ತರ: ಕನಿಷ್ಟ 162ರಿಂದ 166 ಸೆಂ.ಮೀ, ತೂಕ - 50 ಕೆ.ಜಿ., ಎದೆ ಅಳತೆ- 77ರಿಂದ 82 ಸೆಂ.ಮೀ ಹೊಂದಿರಬೇಕು.
ತರಬೇಕಾದ ದಾಖಲೆಗಳು: ಎಸ್ಸೆಸ್ಸೆಲ್ಸಿ, ಪಿಯುಸಿ ಹಾಗೂ ತಾಂತ್ರಿಕ ವಿದ್ಯಾರ್ಹತೆಯ ಮಾರ್ಕ್ಸ್ಕಾರ್ಡ್ ಹಾಗೂ ಎರಡೆರಡು ದೃಢೀಕೃತ ಜೆರಾಕ್ಸ್ ಪ್ರತಿ, 15 ಪಾಸ್ಪಾರ್ಟ್ ಸೈಜಿನ ಫೊಟೋ ಕ್ಯಾಮೆರಾ ಪೋಟೋ (ಕಂಪ್ಯೂಟರ್ ಫೋಟೋ ಆಗುವುದಿಲ್ಲ).
ತಹಸೀಲ್ದಾರರಿಂದ ಪಡೆದ ವಾಸ ಸ್ಥಳದ ದೃಢೀಕರಣದ ಪತ್ರ ಹಾಗೂ ನಡತೆ ಪ್ರಮಾಣ ಪತ್ರ ಆಂಗ್ಲ ಭಾಷೆಯಲ್ಲಿರಬೇಕು, ಸ್ಟೋರ್ಟ್ಸ್ ಹಾಗೂ ಎನ್ಸಿಸಿ ಪ್ರಮಾಣ ಪತ್ರಗಳು ಇರಬೇಕು. ಅಭ್ಯರ್ಥಿಗೆ 21 ವರ್ಷದ ಒಳಗೆ ಮದುವೆಯಾಗಿರಬಾರದು.
ಅಭ್ಯರ್ಥಿಗಳು ರ್ಯಾಲಿಯ ಒಂದು ದಿವಸ ಮುಂಚಿತವಾಗಿ ತಮ್ಮ ದಾಖಲೆಗಳನ್ನು ಮಿಲಿಟರಿ ಅಧಿಕಾರಿಗಳಿಗೆ ತೋರಿಸಿ ಟೋಕನ್ ಪಡೆಯುವಂತೆ ಸೂಚಿಸಿದೆ, ಆಸಕ್ತ ಯುವಕರು ರ್ಯಾಲಿಯ ಸದುಪಯೋಗ ಪಡೆಯುವಂತೆ ಹಾಸನ ಸೈನಿಕ ಕಲ್ಯಾಣ ಮತ್ತು ಪುನರ್ವಸತಿ ಇಲಾಖೆ ಉಪನಿರ್ದೇಶಕರು ತಿಳಿಸಿದ್ದಾರೆ.