ಯಗಚಿ ಕಾಮಗಾರಿ: ಜಿಲ್ಲಾಧಿಕಾರಿ ಪರಿಶೀಲನೆ
ಬೇಲೂರು: ತಾಲೂಕಿನ ಹಳೇಬೀಡು - ಮಾದೀಹಳ್ಳಿ ಹೋಬಳಿಗಳ ಕೆರೆಗಳಿಗೆ ಯಗಚಿ ಜಲಾಶಯದಿಂದ ನೀರು ಹರಿಸಲು ಏತನೀರಾವರಿ ಯೋಜನೆ ಕಾಮಾಗಾರಿ ತ್ವರಿತಗತಿಯಲ್ಲಿ ಸಾಗಿದ್ದು, ಮುಂದಿನ ಮಾರ್ಚ್ ಅಂತ್ಯಕ್ಕೆ ನೀರು ಹರಿಸಲಾಗುತ್ತದೆ ಎಂದು ಜಿಲ್ಲಾಧಿಕಾರಿ ಅನ್ಬುಕುಮಾರ್ ಭರವಸೆ ನೀಡಿದರು.
ತಾಲೂಕಿನ ಮಾದಿಹಳ್ಳಿ ಹೋಬಳಿ, ಅಡಗೂರು, ಗೌಡಗೆರೆ ಹಾಲ್ತೂರೆ ಹಳೆಹಗರೆಗಳಲ್ಲಿ ನಡೆಯುತ್ತಿರುವ ಕಾಮಗಾರಿ ವೀಕ್ಷಿಸಿದ ನಂತರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಇತೀಚೆಗೆ, ರೈತ ಸಂಘ ಪ್ರತಿಭಟನೆ ನಡೆಸಿ, ಯಗಚಿ ಏತನೀರಾವರಿ ವಿಳಂಬ ನೀತಿಗೆ ಆಕ್ರೋಶ ವ್ಯಕ್ತಪಡಿಸಿದ್ದರು.
ಮಾಹಿತಿ ಪಡೆಯಲಾಗಿದೆ: ಈ ಹಿನ್ನೆಲೆಯಲ್ಲಿ, ರೈತ ಮುಖಂಡರೊಂದಿಗೆ ಚರ್ಚೆ ನಡೆಸಿದ ಬಳಿಕ ಪ್ರತಿಭಟನೆ ಹಿಂದಕ್ಕೆ ಪಡೆಯಲಾಗಿತ್ತು. ಕಾಮಗಾರಿ ಖುದ್ದು ಸ್ಥಳ ಪರಿಶೀಲನೆ ನಡೆಸಿ ಕಾಮಗಾರಿ ವಿಳಂಬದ ಬಗ್ಗೆ ಮಾಹಿತಿ ತಿಳಿಯಲಾಗಿದೆ ಎಂದರು.
ದಾಖಲೆ ಪತ್ರಗಳು ರವಾನೆ: ಅರಣ್ಯ ಇಲಾಖೆ ರೈತರಿಂದ ಯಾವ ಅಡೆ- ತಡೆ ಇಲ್ಲ. ಆದರೆ, ವಿದ್ಯುತ್ ಇಲಾಖೆಯಿಂದ ಕೆಲಸ ವಿಳಂಬವಾಗಿರುವ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ನಾನು ಮಾತನಾಡಿದ್ದೇನೆ, ಇನ್ನು ಅರಣ್ಯ ಇಲಾಖೆಯಲ್ಲಿ 2 ಹೆಕ್ಟರ್ಗಿಂತ ಹೆಚ್ಚು ಭೂಮಿ ನೀಡುವ ಅಧಿಕಾರ ನಮ್ಮ ವ್ಯಾಪ್ತಿಗೆ ಬಾರದ ಹಿನ್ನೆಲೆಯಲ್ಲಿ ದಾಖಲೆ ಪತ್ರಗಳನ್ನು ಸರ್ಕಾರಕ್ಕೆ ರವಾನೆ ಮಾಡಲಾಗಿದೆ ಎಂದು ತಿಳಿಸಿದರು.
65 ದಿನದಲ್ಲಿ ಕಾಮಗಾರಿ: ಯಗಚಿ ಜಲಾಶಯದಲ್ಲಿ 2.03 ಟಿಎಂಸಿ ನೀರು ಇದ್ದು, ಏತನೀರಾವರಿಗೆ ಕೇವಲ 0.27 ಕ್ಯೂಸೆಕ್ಸ್ ನೀರು ಬೇಕು. ಈ ನಿಟ್ಟಿನಲ್ಲಿ ಕುಡಿಯುವ ನೀರಿಗೆ ಯಾವ ಅಂತಕವಿಲ್ಲ. ಇನ್ನು 65 ದಿನದೊಳಗೆ ಕಾಮಾಗಾರಿ ಕೆಲಸ ಮುಕ್ತಾಯ ಮಾಡುವಂತೆ ಎಲ್ಲಾ ಅಧಿಕಾರಿಗಳಿಗೆ ಗೂಚನೆ ನೀಡಲಾಗಿದೆ ಎಂದು ಹೇಳಿದರು.
ಬೇಲೂರು ರಸ್ತೆ ಅಗಲೀಕರಣಕ್ಕೆ ಮುಂದಿನ ವಾರದೊಳಗೆ ಸಾರ್ವಜನಿಕರ ಸಭೆ ಕರೆಯಲಾಗುವುದು ಎಂದ ಅವರು, ಸೋಮವಾರ ಪುರಸಭೆಯಲ್ಲಿ ವಿವಿಧ ಕಾಮಗಾರಿಗಳಿಗೆ ಶಂಕುಸ್ಥಾಪನೆ ಉದ್ಘಟಾನೆ ರದ್ದು ಮಾಡಿರುವ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಮಾಧ್ಯಮಗಳಿಂದ ವಿಷಯ ತಿಳಿದಿದ್ದು, ಸಂಬಂಧಪಟ್ಟ ಅಧಿಕಾರಿಗಳೊಂದಿಗೆ ಮಾತನಾಡುವುದಾಗಿ ತಿಳಿಸಿದರು.
ಈ ಸಂದರ್ಭದಲ್ಲಿ ತಹಸೀಲ್ದಾರ್ಬಿ.ಎನ್. ಜಗದೀಶ್, ಇಂಜಿನೀಯರ್ ಮಹೇಶ್, ರೈತ ಮುಖಂಡರಾದ ಕೆ.ಪಿ. ಕುಮಾರ್, ಪದ್ಮಪ್ರಭು ಇದ್ದರು.