ರು. 1.21 ಕೋಟಿಗೂ ಹೆಚ್ಚು ಮೆಕ್ಕೆಜೋಳ ಖರೀದಿ
ಜಾವಗಲ್: ಜಾವಗಲ್ ಕೃಷಿ ಉಪಮಾರುಕಟ್ಟೆಯಲ್ಲಿ ಇದುವರೆಗೆ ರು. 1.21 ಕೋಟಿಗೂ ಹೆಚ್ಚು ಮೆಕ್ಕೆಜೋಳವನ್ನು ರೈತರಿಂದ ಖರೀದಿಸಲಾಗಿದೆ ಎಂದು ಎಪಿಎಂಸಿ ನಿರ್ದೇಶಕ ಕಲ್ಲಹಳ್ಳಿ ನಾಗರಾಜು ತಿಳಿಸಿದರು.
ಉಪಮಾರುಕಟ್ಟೆಯಲ್ಲಿ ತೆರೆಯಲಾಗಿರುವ ಬೆಂಬಲ ಬೆಲೆಯ ರಾಗಿ ಮತ್ತು ಮೆಕ್ಕೆಜೋಳ ಖರೀದಿ ಕೇಂದ್ರದಲ್ಲಿ ಜ. 25ರವರೆಗೆ ಒಟ್ಟು 168 ರೈತರಿಂದ 9,283 ಕ್ವಿಂಟಾಲ್ ಮೆಕ್ಕೆಜೋಳವನ್ನು ಖರೀದಿಸಲಾಗಿದ್ದು, ಒಟ್ಟು ಮೊತ್ತ ರು. 1,21,60,730ಗಳಾಗಿದೆ. ಈ ಪೈಕಿ 114 ರೈತರ ಬ್ಯಾಂಕ್ ಖಾತೆಗೆ ನೇರವಾಗಿ ರು. 86,63,035 ಜಮೆ ಆಗಿದೆ ಎಂದರು.
ಬೆಂಬಲ ಬೆಲೆಯ ಖರೀದಿ ಕೇಂದ್ರಕ್ಕೆ ಕೃಷಿಕರಿಂದ ಉತ್ತಮ ಪ್ರತಿಕ್ರಿಯೆ ಕಂಡುಬರುತ್ತಿದೆ ಎಂದರು. ಜಾವಗಲ್ ರೈತ ಸಂಪರ್ಕ ಕೇಂದ್ರದ ಕೃಷಿ ಅಧಿಕಾರಿ ಡಿ.ಎಸ್. ಕುಮಾರಸ್ವಾಮಿ ಮಾತನಾಡಿ, ರಾಗಿ ಖರೀದಿ ಪ್ರಕ್ರಿಯೆ ಪ್ರಾರಂಭವಾಗಿದೆ. ಮೆಕ್ಕೆಜೋಳದ ಖರೀದಿ ಹೆಚ್ಚಾಗುತ್ತಿರುವುದರಿಂದ ಮತ್ತೊಬ್ಬ ಗ್ರೇಡರ್ ಅವಶ್ಯಕತೆ ಇದ್ದು, ಕೂಡಲೇ ಗ್ರೇಡರ್ ವ್ಯವಸ್ಥೆ ಮಾಡಿಸಿಕೊಡುವಂತೆ ತಿಳಿಸಿದರು.
ಜಾವಗಲ್ ಕೃಷಿ ಉತ್ಪನ್ನ ಉಪ ಮಾರುಕಟ್ಟೆ ಮೇಲ್ವಿಚಾರಕ ಡಿ.ಎಲ್.ಮಹೇಂದ್ರ ಮಾತನಾಡಿ, ಇದುವರೆಗೆ ಮೆಕ್ಕೆಜೋಳ ಮಾರಾಟಮಾಡಿರುವ ರೈತರ ಪೈಕಿ ಉಳಿದಿರುವ 54ರೈತರಿಗೆ ರು. 34,97,695 ಪಾವತಿ ಮಾಡಬೇಕಾಗಿದೆ. ರೈತರು ಈಗಾಗಲೇ ನೀಡಿರುವ ದಾಖಲೆಗಳನ್ನು ಪರಿಶೀಲಿಸಿ 3-4ದಿನಗಳಲ್ಲಿ ರೈತರ ಬ್ಯಾಂಕ್ ಖಾತೆಗಳಿಗೆ ನೇರವಾಗಿ ಹಣಪಾವತಿ ಮಾಡಲಾಗುತ್ತದೆ ಎಂದರು.
ಕರ್ನಾಟಕ ರಾಜ್ಯ ಸಹಕಾರ ಮಾರಾಟ ಮಹಾಮಂಡಳಿ ನಿ. ಹಾಸನದ ಡಿ.ಬಿ. ಜಗದೀಶ ಹಾಗೂ ಕೃಷಿಕರು ಇದ್ದರು