ಲಾಬಿ ಮಾಡಿ ಪ್ರಶಸ್ತಿ ಪಡೆಯುವುದು ದುರಂತ
ಬೇಲೂರು: ಉತ್ತಮ ಪ್ರತಿಭೆಯುಳ್ಳ ಕಲಾವಿದರಿಗೆ ಸರ್ಕಾರದಿಂದ ಯಾವ ಮಾನ್ಯತೆ ಇಲ್ಲವಾಗಿದೆ, ಲಾಬಿಯಿಂದ ಪ್ರಶಸ್ತಿಗಳನ್ನು ಪಡೆಯುವದು ನಿಜಕ್ಕೂ ದುರಂತದ ವಿಷಯವಾಗಿದೆ ಎಂದು ಶತ ನಾಟಕ ಸಾರ್ವಭೌಮ ಸಾಹಿತಿ ಬೇಲೂರು ಕೃಷ್ಣಮೂರ್ತಿ ತಿಳಿಸಿದರು.
ಪುರಸ್ಕಾರ ನೀಡಲಿ: ಪಟ್ಟಣದ ಸೀತಾ ರಾಮಾಂಜನೇಯ ಸ್ವಾಮಿ ದೇವಾಲಯದ ಅವರಣದಲ್ಲಿ ಇತ್ತೀಚೆಗೆ ತಾಲೂಕು ಕಲಾವಿದರ ಸಂಘದ ವತಿಯಿಂದ ಪುರಂದರದಾಸರು, ಕನಕದಾಸರು, ವೈಕುಂಠದಾಸರು ಹಾಗೂ ತ್ಯಾಗರಾಜು ಇವರ ಜಯಂತ್ಯುತ್ಸವ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು, ಕಲಾವಿದನ ಬದುಕು ಬಡತನದಿಂದ ಕೂಡಿದ್ದು, ಕಲೆಗೆ ಮಾತ್ರ ಬಡತನವಿಲ್ಲವಾಗಿದೆ, ಅದರೆ ಇಂತಹ ಕಲಾವಿದನು ಅತ್ಯತ್ತಮ ಪ್ರತಿಭೆಯನ್ನು ಪ್ರದರ್ಶನ ಮಾಡಲು ಉತ್ತಮ ವೇದಿಕೆ ಇಲ್ಲದೆ ಕಲಾವಿದ ಎಲೆ ಮರೆಕಾಯಿಯಂತೆ ಇದ್ದಾರೆ ಎಂದ ಅವರು ಪ್ರತಿಭೆ ತಕ್ಕ ಪುರಸ್ಕಾರ ನೀಡಲಿ ಎಂದು ತಿಳಿಸಿದರು.
ವಿಶೇಷ ಅಧ್ಯಯನ: ವೈಡಿಡಿ ಪ್ರಥಮ ದರ್ಜೆ ಕಾಲೇಜು ಪ್ರೊ. ಜಯಣ್ಣಗೌಡ ಮಾತನಾಡಿ, ದಾಸರಲ್ಲಿ ಶ್ರೇಷ್ಠರಾದ ವೈಕುಂಠದಾಸರು ಬೇಲೂರಿನಲ್ಲಿ ಶ್ರೀಚನ್ನಕೇಶವಸ್ವಾಮಿ ಸೇವೆ ಮಾಡಿಕೊಂಡು ಕಾಲ ಕಳೆದಿದ್ದಾರೆ, ಕನಕದಾಸರು ಹಾಗೂ ಪುರಂದರದಾಸರು ಅವರ ಮನೆಗೆ ಬಂದು ಹೊಗಿದ್ದಾರೆ, ಅದರೆ ಅವರ ಕೀರ್ತನೆಗಳನ್ನು ಕೆಲವರು ಬೇರೆ ಹೆಸರಿನಲ್ಲಿ ಪ್ರಕಟ ಮಾಡಿಕೊಂಡು ವೈಕಂಠದಾಸರ ಕೀರ್ತನೆಗಳನ್ನು ಮಾಯ ಮಾಡಿದ್ದಾರೆ. ಈ ಹಿನ್ನಲೆಯಲ್ಲಿ ಸಾಹಿತಿ ಬೇಲೂರು ಕೃಷ್ಣಮೂರ್ತಿ ನೇತೃತ್ವದಲ್ಲಿ ವೈಕುಂಠದಾಸರ ಬಗ್ಗೆ ವಿಶೇಷ ಅಧ್ಯಯನ ನಡೆಸಲಾಗುತ್ತದೆ ಎಂದು ಅವರು ತಿಳಿಸಿದರು.
ಸೇವೆಯಲ್ಲಿ ತೊಡಗಿದೆ: ತಾಲೂಕು ಕಲಾವಿದರ ಅಧ್ಯಕ್ಷ ಕೆಂಚೇಗೌಡ ಮಾತನಾಡಿ, ಗ್ರಾಮೀಣ ಪ್ರದೇಶದಲ್ಲಿ ಇರುವ ಕಲಾವಿದರು ಉತ್ತಮ ಪ್ರತಿಭೆ ಹೊಂದಿದ್ದು, ಅವರಿಗೆ ವೇದಿಕೆ ಹಾಗೂ ಪ್ರೋತ್ಸಾಹವಿಲ್ಲವಾಗಿದೆ, ಈ ದಿಸೆಯಲ್ಲಿ ತಾಲ್ಲೂಕು ಕಲಾವಿದರ ಸಂಘದ ಅವರ ಕಲೆಗೆ ಮನ್ನಣೆ ನೀಡಲಾಗುತ್ತದೆ, ಸರ್ಕಾರ ಹಾಗೂ ಸ್ಥಳೀಯ ಸಂಸ್ಥೆಗಳು ಇಂತಹ ಕಲಾವಿದರಿಗೆ ಸೂಕ್ತ ವೇದಿಕೆ ಕಲ್ಪಿಸಬೇಕು. ಅಲ್ಲದೇ, ತಾಲೂಕು ಕಲಾವಿದರ ಸಂಘದ ಜನಪರ ಮತ್ತು ಸಮಾಜಮುಖಿ ಸೇವೆಯಲ್ಲಿ ತೊಡಗಿದೆ ಎಂದು ತಿಳಿಸಿದರು.
ಉತ್ತಮ ಅಭಿವೃದ್ಧಿ: ಸೀತಾರಾಮ ದೇವಾಸ್ಥಾನದ ಅಧ್ಯಕ್ಷ ರಘುಪತಿ ಹತ್ವಾರ್ ಮಾತನಾಡಿ, ನಮ್ಮ ತಂದೆಯವರು ಭಜನೆ ಮಾಡಿಕೊಂಡು ಊರುಗಳಲ್ಲಿ ತಿರುಗಿ ಬಂದ ಹಣವನ್ನು ತಿರುಪತಿ ಅನ್ನದಾಸೋಹಕ್ಕೆ ನೀಡುತ್ತಿದ್ದರು. ಈ ದಿಸೆಯಲ್ಲಿ ಅವರ ಕಾಲದಲ್ಲಿ ನಿರ್ಮಾಣಗೊಂಡ ಈ ಸಭಾಂಗಣ ಕಲೆ, ಸಾಹಿತ್ಯದ ಸಾಂಸ್ಕತಿಕ ಕೇಂದ್ರವಾಗಿದೆ. ಮುಂದಿನ ದಿನಗಳಲ್ಲಿ ಉತ್ತಮ ಮಟ್ಟದಲ್ಲಿ ಅಭಿವೃದ್ಧಿ ಮಾಡಲಾಗುತ್ತದೆ ಎಂದರು.
ತಹಸೀಲ್ದಾರ್ ಅಣ್ಣೇಗೌಡ, ತಾಲೂಕು ಪಂಚಾಯ್ತಿ ಅಧ್ಯಕ್ಷೆ ಶಾಂತಮ್ಮ, ಗೌರವಾಧ್ಯಕ್ಷ ಮ. ಶಿವಮೂರ್ತಿ, ಸೀತಾರಾಮ ದೇವಾಸ್ಥಾನದ ಅಧ್ಯಕ್ಷ ರಘುಪತಿ ಹತ್ವಾರ್, ಆಡಿಟರ್ ಕೃಷ್ಣಮೂರ್ತಿ, ವೈ,ಎಸ್. ಸಿದ್ದೇಗೌಡ, ಅಕ್ಷರ ದಾಸೋಹ ಸಹಾಯಕ ಅಧಿಕಾರಿ ಹೇಮಂತರಾಜು, ಐ.ಡಿ. ಧರ್ಮಪ್ಪ, ತಬಲ ಯೋಗೀಶ್, ತಬಲರಂಗಸ್ವಾಮಿ, ಓಂಕಾರ್ ಪಟೇಲ್, ಯಮಸಂಧಿ ಪಾಪಣ್ಣ, ಗಮಕ ಕಲಾವಿದೆ ಇಂದಿರಮ್ಮ, ತಾಲೂಕು ಪಂಚಾಯ್ತಿ ಸದಸ್ಯೆ ಸುಮಿತ್ರರುದ್ರಯ್ಯ ಇತರರು ಇದ್ದರು.