ತುಂಡು ಭೂಮಿಗೆ ಸೂಕ್ತ ಪರಿಹಾರ ನೀಡಲು ಮನವಿ
ಹಾಸನ: ಹಾಸನ ಕಸಬಾದ ಗುಡ್ಡೇನಹಳ್ಳಿ ಗ್ರಾಮದ ಜಮೀನುಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರ ಹೊಸ ರಸ್ತೆ ನಿರ್ಮಿಸುತ್ತಿದ್ದು, ಇರುವ ತುಂಡು ಭೂಮಿ ಪೂರ್ತಿಯಾಗಿ ರಸ್ತೆ ಹೋಗುತ್ತಿರುವುದರಿಂದ ಸೂಕ್ತ ಪರಿಹಾರ ಒದಗಿಸುವಂತೆ ಒತ್ತಾಯಿಸಿ ಜಿಲ್ಲಾಧಿಕಾರಿ ವಿ. ಅನ್ಬುಕುಮಾರ್ಗೆ ಶುಕ್ರವಾರ ಮನವಿ ನೀಡಿದರು.
ಕಸಬಾ ಗುಡ್ಡೇನಹಳ್ಳಿ ಗ್ರಾಮದಲ್ಲಿ ಸರ್ವೇ ನಂ. 303 ಹಾಗೂ ಇತರೆಗಳಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ವತಿಯಿಂದ ಹಾಸನ ನಗರದ ಹುಣಸೆಕೆರೆ ಬಡಾವಣೆಯಿಂದ ಬೇಲೂರು ರಸ್ತೆಗೆ ಸಂಪರ್ಕ ಕಲ್ಪಿಸುವಂತೆ ಹೊಸದಾಗಿ 40 ಅಡಿ ಅಗಲದ ರಸ್ತೆಯನ್ನು ನಿರ್ಮಿಸಲಾಗುತ್ತಿದೆ. ಈಗಾಗಲೇ ರಸ್ತೆ ನಿರ್ಮಾಣ ಕಾಮಗಾರಿ ಪ್ರಾರಂಭಿಸಿದ್ದು, ಅನೇಕ ರೈತರ ಜಮೀನುಗಳು ರಸ್ತೆಗೆ ಹೋಗಿದೆ. ಆದರೆ, ಸಿ.ಕೆ. ವಿಶಾಲಾಕ್ಷಿ ಎಂಬವರ ಗುಡ್ಡೇನಹಳ್ಳಿ ಗ್ರಾಮದಲ್ಲಿ 8 ಗುಂಟೆ ಜಮೀನು ಇದೆ. ಈ ಜಮೀನು ಪೂರ್ತಿಯಾಗಿ ಹೊಸ ರಸ್ತೆ ನಿರ್ಮಾಣಕ್ಕೆ ಹೋಗುತ್ತಿದೆ. ಆದರೆ ಪಕ್ಕದ ಜಮೀನಿನ ಮಾಲೀಕ ಶಾಂತೇಗೌಡ ರಸ್ತೆ ನಿರ್ಮಾಣಕ್ಕೆ ಸಹಕರಿಸದ ಕಾರಣ ನಮ್ಮ ಜಮೀನು ಪೂರ್ತಿಯಾಗಿ ರಸ್ತೆ ನಿರ್ಮಾಣಕ್ಕೆ ಹೋಗಿ, ಅನ್ಯಾಯವಾಗಿದೆ. 8 ಗುಂಟೆ ನಿವೇಶನದ ಬದಲಿಗೆ 8712 ಚದರಡಿ ನಿವೇಶನವನ್ನು ವಿಜಯನಗರ ಬಡಾವಣೆಯಲ್ಲಿ ನೀಡಬೇಕು ಎಂದು ಮನವಿ ಮಾಡಿದರು. ಈ ಸಂದರ್ಭದಲ್ಲಿ ಸಿ.ಕೆ. ವಿಶಾಲಾಕ್ಷಿ, ಮಂಜುನಾಥ್ ಇದ್ದರು.