ನಗರಸಭೆ ಆಯವ್ಯಯ: ಅಭಿಪ್ರಾಯ ಸ್ವೀಕಾರ
ಹಾಸನ: ನಗರಸಭೆಯ ಪ್ರಸಕ್ತ ಸಾಲಿನ ಆಯವ್ಯಯ ಅಂದಾಜು ಪಟ್ಟಿಯನ್ನು ತಯಾರಿಸುವ ನಿಟ್ಟಿನಲ್ಲಿ ಶುಕ್ರವಾರ ಸಾರ್ವಜನಿಕ ಸಮಾಲೋಚನೆ ಸಭೆ ನಡೆಸಿ ಸಾರ್ವಜನಿಕರ ಅಭಿಪ್ರಾಯವನ್ನು ಪಡೆಯಲಾಯಿತು.
ನಗರದ ಅಂಬೇಡ್ಕರ್ ಭವನದಲ್ಲಿ ನಗರಸಭೆ ಅಧ್ಯಕ್ಷೆ ಶ್ರೀವಿದ್ಯಾ ಅವರು ಅಧ್ಯಕ್ಷತೆಯಲ್ಲಿ ನಡೆಯಿತು. ಸಾರ್ವಜನಿಕರ ಸಮಾಲೋಚನೆ ಸಭೆಯಲ್ಲಿ ನಗರಸಭೆ ನಿರ್ವಹಿಸುತ್ತಿರುವ ಕಾರ್ಯವೈಖರಿ ವಿರುದ್ಧ ಸಾರ್ವಜನಿಕರು ಆಕ್ರೋಶ ವ್ಯಕ್ತಪಡಿಸಿದಲ್ಲದೇ ಕೆಲ ಸಲಹೆ ನೀಡಿದರು.
ಸಲಹೆ: ನಿವೃತ್ತ ಶಿಕ್ಷಕ ರಾಮಸ್ವಾಮಿ ಸಭೆಯಲ್ಲಿ ಮಾತನಾಡಿ, ನಗರದ ಪ್ರತಿ ಬಡಾವಣೆಗೆ ನಾಮಫಲಕ ಹಾಕಬೇಕು. ಇದರಿಂದ ಹೊರಗಿನಿಂದ ವಿಳಾಸ ಹುಡುಕಿಕೊಂಡು ಬಂದವರಿಗೆ ಅನುಕೂಲವಾಗಲಿದೆ. ಮಹಾಮುನಿ ರಸ್ತೆಯಲ್ಲಿ ಇರುವ ಉದ್ಯಾನವನದಲ್ಲಿ ಮಕ್ಕಳು ಆಡುವ ಆಟೋಟ ವಸ್ತುಗಳನ್ನು ಹಾಕಬೇಕು. ದೇವಿಗೆರೆ ನೀರಿನಲ್ಲಿ ಬಹಾಲ ಗಲೀಜು ಇರುವುದರಿಂದ ಸ್ವಚ್ಛತೆಗೆ ನಗರಸಭೆ ಮುಂದಾಗಬೇಕಾಗಿದೆ. ಕಟ್ಟಿನಕೆರೆ ಮಾರುಕಟ್ಟೆ ನೈರ್ಮಲ್ಯವನ್ನು ಕಾಪಾಡಬೇಕು. ನಗರದ ಅನೇಕ ಕಡೆ ರಸ್ತೆ ಹಾಳಾಗಿರುವುದರಿಂದ ಶೀಘ್ರವೇ ದುರಸ್ತಿ ಕಾರ್ಯ ಕೈಗೊಳ್ಳುವಂತೆ ಸಲಹೆ ನೀಡಿದರು.
ಅಪಾಯ ತಪ್ಪಿದ್ದಲ್ಲ: ನಂತರ ಭಾಗವಹಿಸಿದ್ದ ಇತರರೂ ಕೂಡ ತಮ್ಮ ಅನಿಸಿಕೆ ಮತ್ತು ಅಭಿಪ್ರಾಯದ ಸಲಹೆ ನೀಡಿದರು. ನಗರಸಭೆ ಯಾವುದೇ ಕಾಮಗಾರಿ ಪ್ರಾರಂಭಿಸಿದರು. ರಸ್ತೆಯಲ್ಲಿ ಗುಂಡಿ ತೆಗೆದಾಗ ಕೆಲಸವನ್ನು ಶೀಘ್ರ ಮುಗಿಸಿ ಮುಚ್ಚಬೇಕು. ಅದೇ ರೀತಿ ಅನೇಕ ಕಡೆ ಯುಜಿಡಿ ತೆರೆದು ಮುಚ್ಚಲಾಗಿಲ್ಲ. ಇಂಥ ಬೇಜವಾಬ್ದಾರಿ ಕೆಲಸದಿಂದ ಆ ಭಾಗದಲ್ಲಿ ಚಲಿಸುವ ವಾಹನ ಹಾಗೂ ಪಾದಚಾರಿಗಳಿಗೆ ಅಪಾಯ ತಪ್ಪಿದ್ದಲ್ಲ ಎಂದರು.
ನಗರದ ಅನೇಕ ಜನ ನಿವಾಸಿಗಳು ರಸ್ತೆಯನ್ನು ಆಕ್ರಮಿಸಿ ಮನೆ ನಿರ್ಮಿಸುತ್ತಿದ್ದಾರೆ. ಅಧಿಕಾರಿಗಳು ಎಚ್ಚರ ವಹಿಸಿ ಅಂತವರ ಮೇಲೆ ಕ್ರಮ ಜರುಗಿಸಬೇಕಾಗಿದೆ. ವೈಜ್ಞಾನಿಕ ಕಾಮಗಾರಿಯಿಂದ ಚರಂಡಿ ನೀರು ಸೇರಿದಂತೆ ಇತರೆ ನೀರು ಸರಿಯಾಗಿ ಹರಿಯುತ್ತಿಲ್ಲ. ಸಾರ್ವಜನಿಕರ ಉಪಯೋಗಕ್ಕಾಗಿ ನಗರದ ನಾನಾ ಭಾಗಗಳಲ್ಲಿ ಶೌಚಾಲಯದ ಅಗತ್ಯತೆ ಹೆಚ್ಚು ಇದೆ ಎಂದರು.
ಗಮನ ನೀಡಬೇಕು: ಪ್ರತಿವರ್ಷ ಸ್ವಚ್ಛತೆಗೆ ನಗರಸಭೆ ಕೋಟ್ಯಾಂತರ ರು.ಗಳನ್ನು ವ್ಯಯ ಮಾಡುತ್ತಿದ್ದರೂ ನಿರ್ವಹಣೆ ಸಮರ್ಪಕವಾಗಿ ಇಲ್ಲದೆ ಹಣ ಪೋಲು ಹಾಗುತ್ತಿದೆ. ನಗರದ ಸ್ವಚ್ಛಗೊಳಿಸಲು ಬೆಳಿಗ್ಗೆ ಕಾರ್ಮಿಕರು ಸಹಿ ಹಾಕಿ ಬರುತ್ತಾರೆ ಅಷ್ಟೆ ಆಮೇಲೆ ಸರಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆಯೇ ಎಂಬುದರ ಬಗ್ಗೆ ಗಮನ ನೀಡಬೇಕು ಎಂದರು.
ಸಭೆಯಲ್ಲಿ ಆಯುಕ್ತ ಕೃಷ್ಣಮೂರ್ತಿ, ಸದಸ್ಯ ಸಿ. ಶುಭಾ ಹಾಗೂ ಇತರರು ಇದ್ದರು.