ನಾನಾ ಸಂಘಟನೆಗಳಿಂದ ರಸ್ತೆ ಸುರಕ್ಷಾ ಸಪ್ತಾಹ
ಚನ್ನರಾಯಪಟ್ಟಣ: ಸಂಚಾರಿ ನಿಯಮಗಳನ್ನು ಪಾಲಿಸಿ ಅಪಘಾತಗಳನ್ನು ತಡೆಗಟ್ಟಿ ಎಂದು ತಹಸೀಲ್ದಾರ್ ಡಾ. ಹೆಚ್. ಎಲ್. ನಾಗರಾಜ್ ತಿಳಿಸಿದರು.
ಅವರು ಸಿವಿಕೆಎಲ್ ಸ್ವಯಂ ಸೇವಾ ಸಂಸ್ಥೆ, ವೀರಾಂಜನೇಯ ಯುವಕ ಸಂಘ, ಜಿಲ್ಲಾ ಪೊಲೀಸ್ ಇಲಾಖೆ, ಪಟ್ಟಣ ಪೊಲೀಸ್ ಇಲಾಖೆ ವತಿಯಿಂದ ಇತ್ತೀಚೆಗೆ ಆಯೋಜಿಸಿದ್ದ ರಸ್ತೆ ಸುರಕ್ಷಾ ಸಪ್ತಾಹ ಕಾರ್ಯಕ್ರಮದಲ್ಲಿ ಮಾತನಾಡಿದರು.
ಸಾರ್ವಜನಿಕರು ಸಹಕಾರಿಯಾಗಬೇಕು: ರಸ್ತೆಯ ಬಗ್ಗೆ ಜನ ಸಾಮಾನ್ಯರಿಗೆ ಅರಿವು ಮೂಡಿಸುವ ಸಲುವಾಗಿ ಕೇಂದ್ರ ಸರ್ಕಾರ ಜ. 1ರಿಂದ 31ರವರೆಗೆ ಎಲ್ಲಾ ರಾಜ್ಯದಲ್ಲೂ ಇಂತಹ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ.
ಇದರಲ್ಲಿ ವಾಹನ ಚಾಲಕರು ಹೆಚ್ಚು ವಿಷಯಗಳನ್ನು ತಿಳಿದುಕೊಳ್ಳಬೇಕು. ವಾಹನಗಳಿಗೆ ಕಡ್ಡಾಯವಾಗಿ ಪರವಾನಗಿ, ವಿಮೆ ಮಾಡಿಸಿ, ಸಂಚಾರಿ ನಿಯಮ ಪಾಲನೆ ಮಾಡಬೇಕು. ಹೆಚ್ಚುತ್ತಿರುವ ಅಪಘಾತಗಳನ್ನು ನಿಯಂತ್ರಿಸುವ ಸಲುವಾಗಿ ಸುರಕ್ಷಾ ಸಪ್ತಾಹ ಕಾರ್ಯಕ್ರಮಗಳನ್ನು ಹೆಚ್ಚು ಹೆಚ್ಚು ನಡೆಸಲು ಸಾರ್ವಜನಿಕರು ಸಹಕಾರಿಯಾಗಬೇಕು ಎಂದರು.
ಮಾಧ್ಯಮಿಕ ಶಾಲಾ ಆವರಣದಿಂದ ಹೊರಟ ಮೆರವಣಿಗೆ ಹೊಸ ಬಸ್ ನಿಲ್ದಾಣ, ಮೈಸೂರು ವೃತ್ತದ ಮಾರ್ಗವಾಗಿ ಸರ್ಕಾರಿ ಆಸ್ಪತ್ರೆ, ಕೆ. ಆರ್. ವೃತ್ತದವರೆಗೆ ನಡೆಸಿದರು.
ಕಾರ್ಯಕ್ರಮದಲ್ಲಿ ಐಎಎಸ್ ಅಧಿಕಾರಿ ಜಯಚಂದ್ರ, ವೃತ್ತ ನಿರೀಕ್ಷಕ ಶೈಲೇಂದ್ರಕುಮಾರ್, ಎಸ್.ಐ. ರಾಜು, ಪ್ರಾಂಶುಪಾಲ ಶಿವರಾಮೇಗೌಡ, ಸಂಘದ ಕಾರ್ಯದರ್ಶಿ ಲೋಹಿತ್ ಇದ್ದರು.