ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸುದ್ದಿ ಸಂಕ್ಷೇಪ

Mainashree
Updated On : 31 Jan 2014, 10:28 am

ಫೆ. 3ರಿಂದ ಸಹಾಯ ಹಸ್ತ ಕಾರ್ಯಕ್ರಮ
ಅರಕಲಗೂಡು: ಸೋಮವಾರದಿಂದ ಕೇದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಯೋಜನೆಗಳಲ್ಲಿ ಒಂದಾದ ಮಕ್ಕಳ ಹಕ್ಕು ಕಾಯ್ದೆಯನ್ನು ಸಂಪೂರ್ಣ ಪ್ರಮಾಣದಲ್ಲಿ ಅನುಷ್ಠಾನಗೊಳಿಸುವ ನಿಟ್ಟಿನಲ್ಲಿ ಜನಜಾಗೃತಿಗಾಗಿ ಸಹಾಯಹಸ್ತ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಾಲೂಕು ಯುವ ಕಾಂಗ್ರೆಸ್ ಅಧ್ಯಕ್ಷ ಬಾಣದಹಳ್ಳಿ ಗಣೇಶ್ ತಿಳಿಸಿದ್ದಾರೆ.
ಜಾಗೃತಿ ಕಾರ್ಯಕ್ರಮ: ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು ಶಿಕ್ಷಣ ಹಕ್ಕು ಕಾಯ್ದೆಯನ್ವಯ ಖಾಸಗಿ ಅನುದಾನ ರಹಿತ ಶಾಲೆಗಳಲ್ಲಿ ಪೂರ್ವ ಪ್ರಾಥಮಿಕ ಮತ್ತು ಪ್ರಾಥಮಿಕ ಶಾಲೆಗಳಿಗೆ ಮಕ್ಕಳನ್ನು ಉಚಿತವಾಗಿ ಸೇರಿಸಿಕೊಳ್ಳುವ ನಿಟ್ಟಿನಲ್ಲಿ ಈಗಾಗಲೇ ಸೀಟುಗಳ ಹಂಚಿಕೆಯಾಗಿದೆ. ಆದರೆ ಕಳೆದ ವರ್ಷಗಳಲ್ಲಿ ಬೇರೆ ಬೇರೆ ಕಾರಣಗಳಿಗಾಗಿ ಹಲವು ಸೀಟುಗಳು ಭರ್ತಿಯಾಗದೇ ಹಾಗೆಯೇ ಉಳಿದಿದ್ದು, ಇದಕ್ಕೆ ಪೋಷಕರಲ್ಲಿ ಅರಿವಿನ ಕೊರತೆ ಉಂಟಾಗಿದ್ದೂ ಒಂದು ಕಾರಣವಾಗಿತ್ತು. ಈಗ ಹಾಗಾಗಬಾರದು ಎಂಬ ಕಾರಣಕ್ಕಾಗಿ ಯುವ ಕಾಂಗ್ರೆಸ್ ವತಿಯಿಂದ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದು, ಪ್ರತಿದಿನ ಬೆಳಿಗ್ಗೆಯಿಂದ ಸಂಜೆಯವರೆಗೆ ಶನಿವಾರದವರೆಗೆ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿ ಎದುರು ಯುವ ಕಾಂಗ್ರೆಸ್ ಕಾರ್ಯಕರ್ತರು ಪೋಷಕರಿಗೆ ಅರ್ಜಿಗಳನ್ನು ವಿತರಿಸಿ ಅರಿವು ಮೂಡಿಸಲಾಗುವುದು ಎಂದು ನುಡಿದರು. ಗೋಷ್ಠಿಯಲ್ಲಿ ತಾಲೂಕು ಯುವ ಕಾಂಗ್ರೆಸ್ ಉಪಾಧ್ಯಕ್ಷ ಮಹಮದ್ ಶಾಬಾದ್, ಪ್ರಧಾನ ಕಾರ್ಯದರ್ಶಿ ಎ.ಎಂ. ರಘು, ತಾಲೂಕು ಪಂಚಾಯಿತಿ ಸದಸ್ಯ ಹೆಚ್.ಎಂ. ನಿರಂಜನ್, ಯುವ ಕಾಂಗ್ರೆಸ್ ಮುಖಂಡ ಎ.ಸಿ. ಮಧು, ಬ್ಲಾಕ್ ಕಾಂಗ್ರೆಸ್ ಕಾರ್ಯದರ್ಶಿ ಮಂಜುನಾಥ ಹಾಗೂ ಇತರರು ಉಪಸ್ಥಿತರಿದ್ದರು.
ಇಂದು ಆಧ್ಯಾತ್ಮಿಕ ನಿಯಮ ಶಿಬಿರ
ಹಾಸನ: ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರ ವತಿಯಿಂದ ಆಧ್ಯಾತ್ಮಿಕ ನಿಯಮಗಳ ಕುರಿತು ಫೆ.1ರಂದು 10.30ಕ್ಕೆ ವಿಶೇಷ ಜಾಗೃತಿ ಶಿಬಿರ ಹಮ್ಮಿಕೊಳ್ಳಲಾಗಿದೆ. ಕಾರ್ಯಕ್ರಮವನ್ನು ಶ್ರೀ ಸತ್ಯ ಸಾಯಿ ಸೇವಾ ಸಂಸ್ಥೆ ರಾಜ್ಯ ಸಂಯೋಜಕ ಕೆ. ಉಮೇಶ್ವರ ರಾವ್ ಉದ್ಘಾಟಿಸಲಿದ್ದಾರೆ. ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರ ಜಿಲ್ಲಾ ಅಧ್ಯಕ್ಷ ಕಾಳೇಗೌಡ ಅಧ್ಯಕ್ಷತೆ ವಹಿಸಲಿದ್ದಾರೆ. ಸಂಸ್ಥೆಯ ಸಹ ರಾಜ್ಯ ಸಂಯೋಜಕ ಬಿ. ಚೀಲೂರಪ್ಪ ಉಪನ್ಯಾಸ ನೀಡಲಿದ್ದಾರೆ. ಮುಖ್ಯ ಅತಿಥಿಯಾಗಿ ಸಂಸ್ಥೆಯ ಸಂಯೋಜಕಿ ಸುಚರಿತ ಚಂದ್ರಶೇಖರ್ ಭಾಗವಹಿಸಲಿದ್ದು, ಸದಸ್ಯರಾದ ಗೀತಾ ವಿಶ್ವನಾಥ್, ಎಸ್.ಉಮಾದೇವಿ, ಗೀತಾನಾಯ್‌ಡು, ದೇವೇಂದ್ರಪ್ಪ ವಿಶೇಷ ಆಹ್ವಾನಿತರಾಗಿ ಭಾಗವಹಿಸಲಿದ್ದಾರೆ. ಬೆಂಗಳೂರು ಗ್ರಾಮಾಂತರು ಜಿಲ್ಲಾಧಕ್ಷ ದಿನೇಶ್ ಸ್ವಾಗತಿಸಲಿದ್ದಾರೆ ಎಂದು ಶ್ರೀ ಸತ್ಯ ಸಾಯಿ ಸೇವಾ ಕ್ಷೇತ್ರದ ಜಿಲ್ಲಾ ಕಾರ್ಯಕಾರಿ ಸಂಚಾಲಕ ಬಿ.ಎನ್. ಶ್ರೀಕಂಠಯ್ಯ ತಿಳಿಸಿದ್ದಾರೆ.
ರಸ್ತೆ ಅಗಲೀಕರಣ ಇಲ್ಲ: ಸಚಿವ ಮಹದೇವಪ್ಪ
ಹಾಸನ: ನಗರದ ಸಹ್ಯಾದ್ರಿ ವೃತ್ತದಿಂದ ದಾಸರಕೊಪ್ಪಲು ಮುಖಾಂತರ ಹಳೇಬೀಡಿಗೆ ಸೇರುವ ರಸ್ತೆಯು ರಾಜ್ಯ ಹೆದ್ದಾರಿ- 21ರ ಸರಪಳಿ 0.00ದಿಂದ 28.45 ಕಿ.ಮೀ ವರೆಗೆ (ಹಳೇಬೀಡಿನಿಂದ ಹಾಸನದ ಸರಸ್ವತಿ ವಿಗ್ರಹ ವೃತ್ತದವರೆಗೆ) ಮತ್ತು ರಾಜ್ಯ ಹೆದ್ದಾರಿ- 71ರ ಹೆಚ್ಚುವರಿ ಭಾಗದ 0.50 ಕಿ.ಮೀ ಉದ್ದ ಇದ್ದು, ರಸ್ತೆ ಅಗಲೀಕರಣದ ಪ್ರಸ್ತಾವನೆ ಸದ್ಯಕ್ಕಿಲ್ಲ ಎಂದು ಲೋಕೋಪಯೋಗಿ ಸಚಿವ ಡಾ. ಎಚ್.ಸಿ. ಮಹದೇವಪ್ಪ ತಿಳಿಸಿದ್ದಾರೆ. ವಿಧಾನ ಪರಿಷತ್ ಸದಸ್ಯ ಪಟೇಲ್ ಶಿವರಾಂ ವಿಧಾನಪರಿಷತ್ತಿನಲ್ಲಿ ಕೇಳಿದ ಪ್ರಶ್ನೆಗೆ ಸಚಿವರು ಉತ್ತರಿಸಿದರು. ಹಾಸನ ನಗರದ ಸಹ್ಯಾದ್ರಿ ವೃತ್ತದಿಂದ ಸರಸ್ವತಿ ವಿಗ್ರಹ ವೃತ್ತದ ವರೆಗಿನ ರಸ್ತೆಯು ಹಾಲಿ ದ್ವಿಪಥ ರಸ್ತೆ ಆಗಿರುವುದರಿಂದ ಸದ್ಯಕ್ಕೆ ಅಗಲೀಕರಣ ಅವಶ್ಯಕತೆ ಇಲ್ಲ ಎಂದು ಸಚಿವರು ಸ್ಪಷ್ಟನೆ ನೀಡಿದ್ದಾರೆ.  
ಇದರಲ್ಲಿ ರಾಜ್ಯ ಹೆದ್ದಾರಿ- 21ರ ಸರಪಳಿ 0.00 ದಿಂ 12.90 ಕಿ.ಮೀವರೆಗೆ (ಬೇಲೂರು ತಾಲೂಕು ವ್ಯಾಪ್ತಿಯಲ್ಲಿ) ಅಗಲೀಕರಣ ಮತ್ತು ಅಭಿವೃದ್ಧಿಗೆ ರು. 13 ಕೋಟಿ ರು. ಹಾಗೂ ಸರಪಳಿ 12.90 ರಿಂದ 40-00 ಕಿ.ಮೀ ವರೆಗೆ (ಸರಪಳಿ 12.90 ರಿಂದ 28.45 ಕಿ.ಮೀ. ಒಳಗೊಂಡಂತೆ) ಅಗಲೀಕರಣ ಮತ್ತು ಅಭಿವೃದ್ಧಿಪಡಿಸಲು  24 ಕೋಟಿ ರು. ಸೇರಿದಂತೆ ಒಟ್ಟು 37 ಕೋಟಿ ರು. ಪ್ರಸ್ತಾವನೆಯು 2013-14 ನೇ ಸಾಲಿನ ಅಪೆಂಡಿಕ್ಸ್- ಇ ನಲ್ಲಿ ಸೇರ್ಪಡೆಗೊಳಿಸಲು ಪರಿಶೀಲನೆಯಲ್ಲಿದೆ ಎಂದು  ಸಚಿವರು ತಿಳಿಸಿದ್ದಾರೆ.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement