ಕಾನೂನು ಅರಿವಿನಿಂದ ಸುರಕ್ಷಿತ ಬದುಕು ಸಾಧ್ಯ: ನ್ಯಾ. ಶೀನಪ್ಪ
ಅರಕಲಗೂಡು: ನಾಗರೀಕ ಸಮಾಜದ ಪ್ರತಿಯೊಬ್ಬ ಪ್ರಜೆಯೂ ಕಾನೂನಿನ ಅರಿವು ಹೊಂದುವ ಮೂಲಕ ದೇಶದ ಸುಭದ್ರತೆ ಮತ್ತು ಅಭಿವೃದ್ಧಿಗೆ ಪೂರಕವಾಗಬೇಕು ಎಂದು ಇಲ್ಲಿನ ಜೆ.ಎಂ.ಎಫ್ಸಿ ನ್ಯಾಯಾಧೀಶ ಜಿ.ಎಂ. ಶೀನಪ್ಪ ತಿಳಿಸಿದ್ದಾರೆ. ಇಲ್ಲಿನ ನ್ಯಾಯಾಲಯದ ಆವಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಮತ್ತು ಕಟ್ಟಡ ಕಾರ್ಮಿಕರ ಸಂಘಗಳ ಸಹಯೋಗದೊಂದಿಗೆ ಕಟ್ಟಡ ಕಾರ್ಮಿಕರಿಗೆ ಕಾನೂನಿನ ಅರಿವು-ನೆರವು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ, ಕಟ್ಟಡ ಕಾರ್ಮಿಕರು ಸಂಘಟಿತರಾಗುವುದು ಮತ್ತು ಕಾನೂನಿನ ರೀತಿಯಲ್ಲಿ ದೊರಕುವ ಎಲ್ಲಾ ಸವಲತ್ತುಗಳನ್ನೂ ಪಡೆದು ಸ್ಥಿತಿವಂತ ಬದುಕು ಸಾಗಿಸಲು ಮುಂದಾಗಬೇಕು ಎಂದರು. ಅಧ್ಯಕ್ಷತೆ ವಕೀಲರ ಸಂಘದ ಅಧ್ಯಕ್ಷ ಎಸ್.ಆರ್. ಚಂದ್ರಪ್ಪ ವಹಿಸಿದ್ದರು. ಸಿವಿಲ್ ನ್ಯಾಯಾಧೀಶ ಬಿ.ಕೆ.ಗಿರೀಶ್, ಅಧಿಕ ಸಿವಿಲ್ ನ್ಯಾಯಾಧೀಶ ಕುರಣಿ ಕಾಂತ್, ವಕೀಲರ ಸಂಘದ ಕಾರ್ಯದರ್ಶಿ ಚಂದ್ರಶೇಖರ್, ಖಜಾಂಚಿ ಮಹೇಶ್ಕುಮಾರ್, ವಕೀಲ ವಿಜಯಕುಮಾರ್ ಇದ್ದರು.