ಜಾವಗಲ್ನಲ್ಲಿ ಕಪ್ಪೆಗಳ ಮದುವೆ
ಜಾವಗಲ್: ಬರಗಾಲದಿಂದ ತತ್ತರಿಸುತ್ತಿರುವ ಜಾವಗಲ್ನಲ್ಲಿ ಮಳೆಗಾಗಿ ಕಪ್ಪೆಗಳಿಗೆ ಮದುವೆ ಮಾಡಲಾಯಿತು. ಜಾವಗಲ್ ಕೋಟೆಬೀದಿಯಲ್ಲಿರುವ ಸೊಪ್ಪಿನಹಳ್ಳಿ ಬೀರಲಿಂಗೇಶ್ವರ ದೇವಾಲಯದಲ್ಲಿ ಕಳೆದ 1 ವಾರದಿಂದ ಪ್ರತಿನಿತ್ಯ ರಾತ್ರಿ ಮಹಿಳೆಯರು ಪುರುಷರು ಕಳಸ ಸ್ಥಾಪಿಸಿ, ಪುರುಷರು ಕೋಲಾಟದ ಮೂಲಕ ಭಗವಂತನನ್ನು ಪ್ರಾರ್ಥಿಸಿದರು. ಸೋಮವಾರ ಬೆಳಗ್ಗೆ ಗ್ರಾಮದೇವತೆಗಳಾದ ಕರಿಯಮ್ಮ, ಪ್ಲೇಗನಮ್ಮ ದೇವಿಯವರನ್ನು ದೇಗುಲಕ್ಕೆ ಕರೆತಂದು ಗಂಗಾಪೂಜೆ ಮಾಡಿ ಸುಮಂಗಲಿಯರು ಕಳಸಗಳನ್ನು ಹೊತ್ತು ನೂರಾರು ಗ್ರಾಮಸ್ಥರೊಂದಿಗೆ ಡೊಡ್ಡ ಕೆರೆ ಅಂಗಳಕ್ಕೆ ಹೋಗಿ ದೇವತೆಗಳು, ಕಳಸಗಳನ್ನು ಗದ್ದುಗೆ ಮಾಡಿ, ಗಣಪತಿ ಗಂಗಮ್ಮನ ಪೂಜೆ ಮಾಡಲಾಯಿತು. ಚಿಗಲಿ, ತಂಬಿಟ್ಟು, ಪಾನ ಕೋಸಂಬರಿ, ತಳಿಗೆ, ರಸಾಯನ, ಪೊಂಗಲು ಹಣ್ಣು-ಹಂಪಲು ತೆಂಗಿನಕಾಯಿಗಳನ್ನು ನೈವೇದ್ಯ ಮಾಡಲಾಯಿತು. ಕಪ್ಪೆಗಳನ್ನು ಕೆರೆಯಲ್ಲಿ ಇದ್ದ ಅಲ್ಪಸ್ವಲ್ಪ ನೀರಿಗೆ ಬಿಟ್ಟು ಕಳಸಗಳನ್ನು ವಿಸರ್ಜನೆ ಮಾಡಲಾಯಿತು. ಕಾರ್ಯಕ್ರಮ ಮುಗಿಸಿ ಮನೆಗೆ ಹೋದ ಹತ್ತು ನಿಮಿಷಗಳ ಕಾಲ ಮಳೆಬಂದಿದ್ದು ವಿಶೇಷವಾಗಿತ್ತು.