ನಾನಾ ಬೇಡಿಕೆಗಳ ಈಡೇರಿಕೆಗೆ ಒತ್ತಾಯ
ಬೇಲೂರು: ಅಕ್ಷರ ದಾಸೋಹ ನೌಕರರಿಗೆ ಕನಿಷ್ಠ ಕೂಲಿ ಹಾಗೂ ಭಾರತ ರಾಷ್ಟ್ರೀಯ ಕಾರ್ಮಿಕ ಸಮ್ಮೇಳನ(ಐಎಲ್‌ಸಿ) ಶಿಫಾರಸ್ಸಿನ ಜಾರಿಗೆ ಒತ್ತಾಯಿಸಿ ಸಿಐಟಿಯು ನೇತೃತ್ವದಲ್ಲಿ ಅಕ್ಷರ ದಾಸೋಹ ನೌಕರರ ಸಂಘದಿಂದ ತಾಲೂಕು ಪಂಚಾಯ್ತಿ ಕಚೇರಿ ಎದುರು ಮಂಗಳವಾರ ಪ್ರತಿಭಟನೆ ನಡೆಸಲಾಯಿತು.
ಕೇಂದ್ರದ ಯೋಜನೆಗಳಾದ ಮಧ್ಯಾಹ್ನದ ಬಿಸಿಯೂಟ ಪ್ರಸಿದ್ಧವಾಗಿದೆ. ಯೋಜನೆ ಅಭಿವೃದ್ಧಿಗಾಗಿ ಕಳೆದ 11 ವರ್ಷಗಳಿಂದ ಹಗಲಿರುಳು ದುಡಿಯುತ್ತಿರುವ ಅಕ್ಷರ ದಾಸೋಹ ಮಹಿಳೆಯರ ಬೇಡಿಕೆಗಳಿಗೆ ಸರ್ಕಾರ ಸ್ಪಂದಿಸಬೇಕಾಗಿದೆ ಎಂದರು.
ರಾಜ್ಯದಲ್ಲಿ ಸರ್ಕಾರದ ಅಧೀನದಲ್ಲಿ ಬರುವ ಬೇಡಿಕೆಗಳ ಬಗ್ಗೆ ಹಲವು ಸುತ್ತಿನ ಮಾತುಕತೆ ವಿಫಲವಾದಾಗ ಅಂದು ಅನಿರ್ದಿಷ್ಟಾವಧಿ ಹೋರಾಟ ಬೆಂಗಳೂರಿನಲ್ಲಿ ಕೈಗೊಂಡ ಪರಿಣಾಮ ಚಳವಳಿಗೆ ಮಣಿದ ಸರ್ಕಾರ ಶಿಕ್ಷಣ ಮಂತ್ರಿಗಳು ಡಿಸೆಂಬರ್ 5 ರಂದು ಬೆಳಗಾವಿ ವಿಧಾನಸಭಾ ಅಧಿವೇಶನದಲ್ಲಿ 500 ರು. ಹೆಚ್ಚಳದ ಹೇಳಿಕೆ ನೀಡಿ, ಏಪ್ರಿಲ್‌ನಿಂದ ಜಾರಿ ಮಾಡುವುದಾಗಿ ಆದೇಶ ಮಾಡಿ ಈಗ ಮಾತು ತಪ್ಪಿದ್ದಾರೆ ಎಂದು ದೂರಿದರು. ಕೇಂದ್ರ ಸರ್ಕಾರ 1 ಸಾವಿರ ರು.ಗಳನ್ನು ಹೆಚ್ಚಿಸಿರುವುದಾಗಿ ಕೇಂದ್ರ ಮಂತ್ರಿಗಳು ಹೇಳಿದ್ದರೂ ಇದುವರೆಗೂ ಜಾರಿಯಾಗಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಆಮ್ ಆದ್ಮಿ ಬೀಮಾ ಯೋಜನೆಯಲ್ಲಿ ಜನಶ್ರೀ ಬಿಮಾ ಯೋಜನೆ ವಿಲೀನಗೊಳಿಸಿದ್ದು, ಇದರಲ್ಲಿ ಬಿಪಿಎಲ್ ಕಾರ್ಡ್ ಇದ್ದವರಿಗೆ ಮಾತ್ರ ಎಂಬ ಷರತ್ತನ್ನು ತಿದ್ದುಪಡಿ ಮಾಡಲು ಹೇಳಿದ್ದರೂ ಇದುವರೆಗೂ ಕಾರ್ಯಗತವಾಗಿಲ್ಲ ಎಂದು ಆರೋಪಿಸಿದರು.
ಪ್ರತಿಭಟನೆಯಲ್ಲಿ ಕರ್ನಾಟಕ ರಾಜ್ಯ ಅಕ್ಷರ ದಾಸೋಹ ನೌಕರರ ತಾಲೂಕು ಸಂಘದ ಅಧ್ಯಕ್ಷೆ ಸುಮ, ಖಜಾಂಚಿ ಮಮತ, ಪ್ರಧಾನ ಕಾರ್ಯದರ್ಶಿ ರಾಧಾ ಪ್ರತಿಭಟನೆಯ ನೇತೃತ್ವ ವಹಿಸಿದ್ದರು.