ಬೆಳೆ ವಿಮೆ ಪಾವತಿಗಾಗಿ ಪಹಣಿ ಪಡೆಯಲು ಮುಗಿಬಿದ್ದ ಅರಸೀಕೆರೆ ರೈತರು
ಅರಸೀಕೆರೆ: ಮುಂಗಾರು ಮಳೆ ಬಹುತೇಕ ಕೈಕೊಟ್ಟಿದೆ. ಆರಂಭದಲ್ಲಿ ಬಂದ ಸಾಧಾರಣ ಮಳೆಯಿಂದ ಬಿತ್ತನೆ ಕಾರ್ಯ ಕೈಗೊಂಡು ಆನೇಕ ರೈತರ ಫಸಲು ಮೊಳಕೆ ಬಾರದೆ ಕಂಗಾಲಾಗಿದ್ದಾರೆ. ಇದನ್ನು ಮನಗಂಡ ಸರ್ಕಾರ ಬೆಳೆ ವಿಮೆ ಮಾಡಿಸಿಕೊಳ್ಳಬೇಕು ಎಂದು ರೈತರಿಗೆ ಸಲಹೆ ನೀಡಿದೆ. ಇತ್ತ ಬೆಳೆ ವಿಮೆ ಪಾವತಿಸಲು ಪಹಣಿಗಾಗಿ ಡಿ.ಎಂ. ಕುರ್ಕೆ ಹಾಗೂ ಕಣಕಟ್ಟೆ ಅಟಲ್ಜೀ ಸ್ನೇಹ ಕೇಂದ್ರಕ್ಕೆ ಮುಗಿ ಬಿದ್ದಿದ್ದಾರೆ. ಆದರೆ ಇಂತಹ ಸಂದರ್ಭದಲ್ಲಿ ಒಂದೇ ಕೌಂಟರ್ ತೆರೆದು ಪಹಣಿ ನೀಡುತ್ತಿದ್ದು, ರೈತರು ದಿನಗಟ್ಟಲೆ ಕಾಯಬೇಕಿದೆ. ಕಳೆದ ಒಂದು ವಾರದಿಂದಲೂ ರೈತರು ಪಹಣಿ ಪಡೆಯಲು ಬೆಳಗಿನಿಂದ ಸಂಜೆಯವರೆವಿಗೂ ಸುಡುಬಿಸಿಲಿನಲ್ಲಿ ಸರತಿ ಸಾಲಿನಲ್ಲಿ ನಿಲ್ಲುವ ಪರಿಸ್ಥಿತಿ ನಿರ್ಮಾಣವಾಗಿದೆ.
ಸರತಿ: ಬೆಳೆ ವಿಮೆ ಹಣ ಪಾವತಿಸಲು ಸೋಮವಾರ ಕಡೆಯ ದಿನವಾಗಿದ್ದು, ಪಹಣಿ ಪಡೆಯುವುದು ಅನಿವಾರ್ಯವಾಗಿದೆ. ಕೆಲವು ರೈತರು ಭಾನುವಾರವೂ ಪಹಣಿ ನೀಡುವ ಕೇಂದ್ರದ ಮುಂದೆ ವಾಸ್ತವ್ಯ ಹೂಡಿದ್ದರು. ಬೆಳಿಗ್ಗೆ ಆರಂಭವಾದ ರೈತರ ಕ್ಯೂ ಸಂಜೆಯಾದರೂ ಕರಗಿರಲಿಲ್ಲ.
ರಿಯಾಯತಿ: ಎಲ್ಲದಕ್ಕೂ ಪಹಣಿ ಬೇಕು. ರೈತರ ಎಲ್ಲ ವ್ಯವಹಾರಗಳಿಗೂ ಪಹಣಿ ಮೂಲ ದಾಖಲೆಯಾಗಿದೆ. ಬೆಳೆ ವಿಮೆ, ಬ್ಯಾಂಕ್ ಸಾಲ, ಆಸ್ತಿ ವಿಭಾಗ, ಅಡಮಾನ ಕೃಷಿ ಹಾಗೂ ತೋಟಗಾರಿಕೆ ಇಲಾಖೆಗಳಲ್ಲಿ ರಿಯಾಯತಿ ಬಿತ್ತನೆ ಬೀಜ ಹಾಗೂ ರಸ ಗೊಬ್ಬರ ಖರೀದಿಸಲು, ಖಾಸಗಿ ಕಂಪನಿಗಳಲ್ಲಿ ಸಾಲ ಸೌಲಭ್ಯ ಸೇರಿದಂತೆ ಏನೇ ಮಾಡಬೇಕಾದರೂ ಪಹಣಿ ಬೇಕೇ ಬೇಕು. ಕಣಕಟ್ಟೆ ಹೋಬಳಿಯಲ್ಲಿ 100ಕ್ಕೂ ಹೆಚ್ಚು ಹಳ್ಳಿಗಳಿದ್ದು ಕೇವಲ ಒಂದು ಕೌಂಟರ್ ತೆರೆದು ದಿನಕ್ಕೆ 10ರಿಂದ 20ಮಂದಿಗೆ ಪಹಣಿ ಮಾತ್ರ ವಿತರಿಸಲಗುತ್ತಿದೆ. ಅಲ್ಲದೆ ಕೇಂದ್ರದ ನೌಕರರ ಉದಸೀನ ಮನೋಭಾವವೋ ಅಥವಾ ನಿರ್ಲಕ್ಷ್ಯವೋ. ಇನ್ನು ಕೊಡುತ್ತಿದ್ದಂತೆ ಸರ್ವರ್ ತೊಂದರೆ ಎಂದು ಪಹಣಿ ನೀಡುವುದನ್ನು ನಿಲ್ಲಿಸಿ ಬಾಗಿಲು ಮುಚ್ಚುತ್ತಾರೆ ಎಂದು ಬಹಳಷ್ಟು ರೈತರು ಆಕ್ರೋಶ ವ್ಯಕ್ತಪಡಿಸುತ್ತಾರೆ.