ಸಕಲೇಶಪುರ ತಾಪಂ ಅಧ್ಯಕ್ಷ ಚುನಾವಣೆ ಜೆಡಿಎಸ್‌ಗೆ ಮುಖಭಂಗ
ಕನ್ನಡಪ್ರಭ ವಾರ್ತೆ ಸಕಲೇಶಪುರ ಜು.1
ಜೆಡಿಎಸ್ ಹಿಡಿತದಲ್ಲಿದ್ದ ತಾಲೂಕು ಪಂಚಾಯ್ತಿ ಆಡಳಿತವನ್ನು ಕಾಂಗ್ರೆಸ್ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಯಶಸ್ವಿಯಾಗಿದ್ದಾರೆ.
12 ಸದಸ್ಯ ಬಲದ ತಾಲೂಕು ಪಂಚಾಯ್ತಿಯಲ್ಲಿ 11 ಸದಸ್ಯರು ಜೆಡಿಎಸ್‌ಗೆ ಸೇರಿದ್ದರೂ ತಾಪಂ ಆಡಳಿತವನ್ನು ಉಳಿಸಿಕೊಳ್ಳಲು ಸಾದ್ಯವಾಗದ ಬಗ್ಗೆ ಜೆಡಿಎಸ್ ಪಾಳೆಯದಲ್ಲಿ ಹತಾಶೆ ಮನೆ ಮಾಡಿದೆ.
ಕಳೆದ ಅವಧಿಯಲ್ಲಿ ಪರಿಶಿಷ್ಟಜಾತಿ ಮಹಿಳೆಗೆ ಅಧ್ಯಕ್ಷಸ್ಥಾನ ಮೀಸಲಾದ ಸಂದರ್ಭದಲ್ಲಿ ತಾಪಂ ಆಡಳಿತವನ್ನು ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ಕಸಿಯಲು ನಡೆಸಿದ ಪ್ರಯತ್ನ ವಿಫಲಗೊಂಡಿತ್ತು.
7 ಸದಸ್ಯರು ರಹಸ್ಯ ಸ್ಥಳಕ್ಕೆ: ಆದರೆ, ನೂತನ ಮೀಸಲಾತಿ ಜಾರಿಗೊಂಡು ಹಿಂದಿನ ಅಧ್ಯಕ್ಷರ ಅವಧಿ ಕಳೆದ 21 ರಂದು ಕೊನೇಗೊಂಡ ಕ್ಷಣದಿಂದಲೇ ಕಾರ್ಯತಂತ್ರ ಹೆಣೆದ ವಿಶ್ವನಾಥ್ ಮೈಸೂರಿನಲ್ಲಿ ಸರಕಾರ ಆಯೋಜಿಸಿದ್ದ ತರಬೇತಿ ಕಾರ್ಯಕ್ರಮಕ್ಕೆ ತೆರಳಿದ್ದ 7 ತಾಪಂ ಸದಸ್ಯರನ್ನು ಅಲ್ಲಿಂದಲೇ ರಹಸ್ಯ ಸ್ಥಳಕ್ಕೆ ಕರೆದೊಯ್ದಿದ್ದರು.
ಸೋಮವಾರ ಚುನಾವಣೆ ಸ್ಥಳಕ್ಕೆ ಮಾಜಿ ಶಾಸಕರೊಂದಿಗೆ ಬಂದ ತಾಪಂ ಸದಸ್ಯರಿಗೆ ಅಧ್ಯಕ್ಷ ಸ್ಥಾನಕ್ಕೆ ನಾಮಪತ್ರ ಸಲ್ಲಿಸಿದ್ದ ಮತ್ತೊಬ್ಬ ಸದಸ್ಯ ಗೋಪಾಲಸ್ವಾಮಿ ಪಕ್ಷದ ವತಿಯಿಂದ ವಿಪ್ ಜಾರಿಯಾಗಿರುವ ಪತ್ರವನ್ನು ಸದಸ್ಯರಿಗೆ ನೀಡಿದರು.
ಸಿದ್ದಯ್ಯ ನಾಮಪತ್ರ: ಆದರೆ ಈ ವಿಪ್ ಜಾರಿ ಪತ್ರಗಳನ್ನು ಅವರ ಎದುರೇ ಸದಸ್ಯರಿಂದ ವಾಪಸ್ ಪಡೆದ ಮಾಜಿ ಶಾಸಕ ಎಚ್.ಎಂ ವಿಶ್ವನಾಥ್ ತಮ್ಮ ಬೆಂಬಲಿಗರನ್ನು ಚುನಾವಣೆ ಕೊಠಡಿಗೆ ಕರೆದೊಯ್ಯವ ಮೂಲಕ ಸಾಮಾನ್ಯವರ್ಗಕ್ಕೆ ಮೀಸಲಾಗಿದ್ದ ಅಧ್ಯಕ್ಷ ಸ್ಥಾನಕ್ಕೆ ಎಸ್ಸಿ ಮೀಸಲು ಕ್ಷೇತ್ರದಿಂದ ಗೆಲುವು ಸಾಧಿಸಿದ್ದ ಬಿ.ಸಿದ್ದಯ್ಯ ಅವರಿಂದ ನಾಮಪತ್ರ ಸಲ್ಲಿಸುವ ಮೂಲಕ ಅಚ್ಚರಿಗೆ ಕಾರಣರಾಗಿದ್ದರು.
ನಂತರ ನಡೆದ ಚುನಾವಣೆಯಲ್ಲಿ ತಮ್ಮ ಪ್ರತಿಸ್ಪರ್ಧಿ ಗೋಪಾಲಸ್ವಾಮಿಯನ್ನು 2 ಮತಗಳ ಅಂತರದಲ್ಲಿ ಸೋಲಿಸುವ ಮೂಲಕ ಬಿ. ಸಿದ್ದಯ್ಯ ಅಧ್ಯಕ್ಷರಾಗಿ ಆಯ್ಕೆಯಾದರು.