ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸರ್ಕಾರದ ಸವಲತ್ತು ಪಡೆಯಲು ಸಂಘಟಿತರಾಗಿ

Rashmi Kasaragodu
Updated On : 2 Jul 2014, 12:53 pm

ಕನ್ನಡಪ್ರಭ ವಾರ್ತೆ    ಅರಸೀಕೆರೆ    ಜು.1
ಯಾವುದೇ ಸಮಾಜ ಆರ್ಥಿಕವಾಗಿ, ಸಾಮಾಜಿಕವಾಗಿ, ಶೈಕ್ಷಣಿಕವಾಗಿ, ಪ್ರಗತಿ ಹೊಂದಲು ಹಾಗೂ ಸರ್ಕಾರದ ಸವಲತ್ತುಗಳನ್ನು  ಪಡೆಯಲು ಸಂಘಟನೆ ಅಗತ್ಯ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ತಿಳಿಸಿದರು.
ಪಟ್ಟಣದ ಪಿ.ಎಸ್.ಆರ್. ಬಡಾವಣೆಯಲ್ಲಿ ವಿಶ್ವಕರ್ಮ ಸಮಾಜ ಏರ್ಪಡಿಸಿದ್ದ ವಿಶ್ವಕರ್ಮ ಸಮುದಾಯ ಭವನ ಮತ್ತು ವಿದ್ಯಾರ್ಥಿ ನಿಲಯದ ಶಂಕುಸ್ಥಾಪನಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದ ಅವರು,  ಯಾವುದೇ ಸಮಾಜ ಅಭಿವೃದ್ಧಿಯಾಗಬೇಕಾದರೆ ಆ ಸಮಾಜದ ವ್ಯಕ್ತಿ ರಾಜಕೀಯವಾಗಿ ಬೆಳೆಯುವ ಅವಶ್ಯಕತೆಯಿದೆ ಎಂದರು.
ಆರ್ಥಿಕ ನೆರವು: ತಾಲೂಕಿನಲ್ಲಿ ಸರ್ವಧರ್ಮಗಳನ್ನು ಒಂದೆಡೆ ತಂದು ಎಲ್ಲಾ ಸಮಾಜಗಳಿಗೆ ಸವಲತ್ತುಗಳನ್ನು ನೀಡುವ ಕಾರ್ಯವನ್ನು ಮಾಡುತ್ತಿದ್ದು ಸಣ್ಣಪುಟ್ಟ ಸಮಾಜಗಳಿಗೆ ಸಾಮಾಜಿಕ, ಮತ್ತು ಆರ್ಥಿಕ ಭದ್ರತೆ ಶಾಶ್ವತ ನೆಲೆ ಕಲ್ಪಿಸಬೇಕೆಂಬ ಹಠದಿಂದ ಸಣ್ಣಪುಟ್ಟ ಸಮಾಜಗಳಾದ ಮರಾಠ, ಮಡಿವಾಳ, ಕೊರಚ, ಛಲವಾದಿ ಸಮೂಹಗಳಿಗೆ ನಿವೇಶನ ನೀಡಿ ಸಮುದಾಯ ಭವನಗಳ ನಿರ್ಮಾಣಕ್ಕೆ ಸಹಕಾರ ನೀಡಿರುವುದಾಗಿ ತಮ್ಮ ಸಮಾಜಕ್ಕೂ ಉತ್ತಮ ಸಮುದಾಯ ಭವನಕ್ಕೆ ಎಷ್ಟೇ ಖರ್ಚಾದರೂ ಯಾವುದಾದರೂ ಮೂಲದಿಂದ ಹಣ ದೊರಕಿಸಿಕೊಡುವ ಭರವಸೆ ನೀಡಿದರು.
ವಿಶ್ವಕರ್ಮ ಸಮಾಜದ ರಾಜ್ಯಾಧ್ಯಕ್ಷ ಬಿ.ಉಮೇಶ್ ಮಾತನಾಡಿ, ರಾಜ್ಯದಲ್ಲಿ 35 ಲಕ್ಷದಷ್ಟು ಜನಸಂಖ್ಯೆ ಹೊಂದಿರುವ ವಿಶ್ವಕರ್ಮ ಸಮಾಜಕ್ಕೆ ಶಾಸನಸಭೆಯಲ್ಲಾಗಲಿ, ವಿಧಾನ ಪರಿಷತ್‌ನಲ್ಲಾಗಲಿ ಪ್ರತಿನಿಧಿಸುವ ಶಾಸಕರಿಲ್ಲ. 224 ಶಾಸಕರ ಪೈಕಿ ಶಿವಲಿಂಗೇಗೌಡರಂತಹ ಕೆಲವೇ ಶಾಸಕರು ನಮ್ಮ ಸಮಾಜವನ್ನು ಆರ್ಥಿಕವಾಗಿ, ಶೈಕ್ಷಣಿಕವಾಗಿ ಮೇಲೆತ್ತುವ ಕಾರ್ಯದಲ್ಲಿ ತೊಡಗಿದ್ದಾರೆ ಎಂದು ಶ್ಲಾಘಿಸಿದರು.
ಒಗ್ಗಟ್ಟು ಅಗತ್ಯ: ಅರಕಲಗೂಡು ತಾಲೂಕು ಅರೇಮಾದನಹಳ್ಳಿ ಪೀಠದ ಶ್ರೀ ಶಿವಸುಜ್ಞಾನತೀರ್ಥ ಶ್ರೀಗಳು ಆಶೀರ್ವಚನ ನೀಡಿ,  ನಾಡಿನ ಗುಡಿಗೋಪುರಗಳನ್ನು ನಿರ್ಮಿಸುವಲ್ಲಿ ವಿಶ್ವಕರ್ಮ ಸಮಾಜ ಮುಂಚೂಣಿಯಲ್ಲಿದೆ. ರಾಜ್ಯದಲ್ಲಿ 40 ಲಕ್ಷಕ್ಕೂ ಹೆಚ್ಚು ಜನಸಂಖ್ಯೆ ಹೊಂದಿರುವ ಸಮಾಜ ಒಳಪಂಗಡಗಳನ್ನು ಮರೆತು ಒಂದಾಗಿ ರಾಜಕೀಯವಾಗಿ ಶಕ್ತಿ ಬೆಳೆಸಿಕೊಳ್ಳಲು ಒಗ್ಗಟ್ಟಿನಿಂದ ಸಮಾಜ ಕಟ್ಟುವ ಕಾಯಕದಲ್ಲಿ ನಿರತರಾಗಬೇಕೆಂದು ಕಿವಿ ಮಾತು ಹೇಳಿದರು.
ಸಮಾರಂಭದಲ್ಲಿ ಮುಂದಾನೆಗುಂದಿ ಮಹಾಸಂಸ್ಥಾನದ ಝೂಡೇಂದ್ರ ಮಹಾಸ್ವಾಮಿಗಳು ಆಶೀರ್ವಚನ ನೀಡಿದರು. ಜಿಪಂ ಉಪಾಧ್ಯಕ್ಷ ಬಿಳಿ ಚೌಡಯ್ಯ, ಪುರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಸಮೀವುಲ್ಲಾ, ತಾಲೂಕು ವಿಶ್ವಕರ್ಮ ಸಮಾಜದ ಬಿ.ಕೆ.ಯೋಗೀಶಾಚಾರ್, ಗೌರವಾಧ್ಯಕ್ಷ ಶಂಕರಾಚಾರ್, ಉಪಾಧ್ಯಕ್ಷ ಜಯಣ್ಣಾಚಾರ್, ಹಾಸನ ತಾಲೂಕು ಅಧ್ಯಕ್ಷ ವಾಸುದೇವ್, ಗೌರವಾಧ್ಯಕ್ಷ ಶಿವಶಂಕರ್, ತಾಲೂಕು ಮಹಿಳಾ ಅಧ್ಯಕ್ಷೆ ಪಾರ್ವತಮ್ಮ, ಡಿ.ಕೆ. ತಿಮ್ಮಾಚಾರ್ ಇತರರು ಇದ್ದರು.
ವಿಶ್ವಕರ್ಮ ಸಮಾಜದ ಕಾರ್ಯದರ್ಶಿ ಕಲ್ಲೇಶಾಚಾರ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಶಿಕ್ಷಕ ಗಿರೀಶ್ ಸ್ವಾಗತಿಸಿದರು.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement