ಕಟ್ಟಡ ಕಾರ್ಮಿಕರಿಗೆ ಕಾನೂನು ನೆರವು
ರು. 25 ಪಾವತಿಸಿ ಸದಸ್ಯತ್ವ ಪಡೆಯಲು ಕಾರ್ಮಿಕ ಇಲಾಖೆ ಮನವಿ
ಕ.ಪ್ರ.ವಾರ್ತೆ ಸಕಲೇಶಪುರ ಜು.3
ಕಟ್ಟಡ ಕಾರ್ಮಿಕರು ಉಚಿತವಾಗಿ ತಾಲೂಕು ಕಾನೂನು ಸೇವಾಸಮಿತಿ ಮೂಲಕ ಕಾನೂನು ನೆರವು ಪಡೆಯಬಹುದು ಎಂದು ಹಿರಿಯ ಸಿವಿಲ್ ನ್ಯಾಯಾಧೀಶ ಎನ್. ಕೃಷ್ಣಯ್ಯ ತಿಳಿಸಿದರು.
ಪಟ್ಟಣದ ನ್ಯಾಯಾಲಯದ ಆವರಣದಲ್ಲಿ ತಾಲೂಕು ಕಾನೂನು ಸೇವಾ ಸಮಿತಿ, ವಕೀಲರ ಸಂಘ, ಕಾರ್ಮಿಕ ಇಲಾಖೆ, ಮಲೆನಾಡು ಕಟ್ಟಡ ಕಾರ್ಮಿಕರ ಸಂಘ, ಕೂಲಿ ಕಾರ್ಮಿಕರ ಸಂಘ ಮತ್ತು ಕಂದಾಯ ಇಲಾಖೆ ಆಶ್ರಯದಲ್ಲಿ ಇತ್ತೀಚೆಗೆ ಆಯೋಜಿಸಿದ್ದ ಕಟ್ಟಡ ಕಾರ್ಮಿಕರಿಗೆ ಕಾನೂನು ಅರಿವು ನೆರವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದ ಅವರು,ಕಟ್ಟಡ ಕಾರ್ಮಿಕರಿಗೆ ಸರ್ಕಾರ ಅನೇಕ ಸೌಲಭ್ಯವನ್ನು ನೀಡುತ್ತಿದೆ ಎಂದು ವಿವರಿಸಿದರು.
ಉಚಿತ ಕಾನೂನು ಸೇವೆ: ನ್ಯಾಯಾಲದಲ್ಲಿ ಪರಿಹಾರದ ವ್ಯಾಜ್ಯಗಳನ್ನು ಯಾವುದೇ ಶುಲ್ಕವಿಲ್ಲದೆ ಕಟ್ಟಡ ಕಾರ್ಮಿಕರು ಕಾನೂನು ಸೇವಾ ಸಮಿತಿ ಮೂಲಕ ಪಡೆದುಕೊಳ್ಳಬಹುದಾಗಿದೆ ಎಂದು ಹೇಳಿದರು
ಕಾರ್ಮಿಕ ಇಲಾಖೆಯ ಹಿರಿಯ ನಿರೀಕ್ಷಕ ಎಂ.ಎಂ. ಶಿವಶಂಕರಪ್ಪ ಮಾತನಾಡಿ, ಕಟ್ಟಡ ಕಾರ್ಮಿಕರಿಗೆ ಸರ್ಕಾರ ನೀಡುವ ಸೌಲಭ್ಯ ಪಡೆಯಲು 25 ರು ಸಂದಾಯಿಸಿ ಸದಸ್ಯತ್ವ ಪಡೆದುಕೊಳ್ಳಬೇಕು ಎಂದರು.
ಕಾರ್ಯಕ್ರಮದಲ್ಲಿ ನ್ಯಾ. ಶಿಲ್ಪ, ವಕೀಲರ ಸಂಘದ ಅಧ್ಯಕ್ಷ ಟಿ ಎಂ ಆನಂದ್,ಕಾರ್ಯದರ್ಶಿ ಶಿವಕುಮಾರ್, ಸಹಾಯಕ ಸರಕಾರ ಅಭಿಯೋಜಕ ಮಧುಸೂದನ್, ಮಲೆನಾಡು ಕಟ್ಟಡ ಕಾರ್ಮಿಕರ ಸಂಘದ ಅಧ್ಯಕ್ಷ ವಿಶ್ವನಾಥ್ ಇದ್ದರು.