ಗ್ರಾಪಂ ನೌಕರರಿಗೆ ವೇತನ ಇಲ್ಲ
ಗ್ರಾಮೀಣಾಭಿವೃದ್ಧಿ ಕೆಲಸಗಳು ಕುಂಠಿತ
ಟಿ ದಯಾಶಂಕರ ಮೈಲಿ
ಹಾಸನ: ಭಾರತ ಗ್ರಾಮೀಣ ಭಾರತ. ಹಳ್ಳಿಗಳು ದೇಶ ಬೆನ್ನುಲುಬು ಎಂದು ಹೇಳುತ್ತಲೇ ಹಳ್ಳಿಗಳ ಬೆನ್ನುಲುಬು ಮುರಿಯುವ ಕೆಲಸ ಸರ್ಕಾರಗಳಿಂದ ನಡೆಯುತ್ತಿದೆ.
ರಾಜ್ಯ ಸರ್ಕಾರ ರಾಜ್ಯಾದ್ಯಂತ ಇರುವ ಸಾವಿರಾರು ಗ್ರಾಪಂಗಳಲ್ಲಿ ಕೆಲಸ ಮಾಡುತ್ತಿರುವ ನೌಕರರಿಗೆ ಆರೇಳು ತಿಂಗಳಿಂದ ವೇತನ ನೀಡಿಲ್ಲ. ಇದರಿಂದ ನಿರೀಕ್ಷಿತ ಮಟ್ಟದಲ್ಲಿ ಗ್ರಾಮಾಂತರ ಪ್ರದೇಶದಲ್ಲಿ ಅಭಿವೃದ್ಧಿ ಕೆಲಸಗಳು ಚುರುಕಾಗಿ ನಡೆಯುತ್ತಿಲ್ಲ. ನಗರಕ್ಕೆ ಹೊಂದಿಕೊಂಡಿರುವ ಆದಾಯ ಹೆಚ್ಚಿರುವಬೆರಳಣಿಕೆಯಷ್ಟು ಗ್ರಾಪಂಗಳ ನೌಕರರಿಗೆ ವೇತನ ಆಗೋ ಈಗೋ ಸಿಗುತ್ತಿದೆ ಹೊರತು ಶೇ.90 ರಷ್ಟು ಗ್ರಾಪಂ ನೌಕರರಿಗೆ ವೇತನ 8 ರಿಂದ 11 ತಿಂಗಳಿಂದ ಅಲಭ್ಯ.
ರಾಜ್ಯದ 22 ಗ್ರಾಪಂಗಳನ್ನು ಬಿಟ್ಟರೆ ಉಳಿದ 5,606 ಗ್ರಾಪಂನ 60,225 ನೌಕರರಿಗೆ ವೇತನ ನೀಡುತ್ತಿಲ್ಲ. (ಒಟ್ಟು ಗ್ರಾಪಂಗಳ ಸಂಖ್ಯೆ 5,628) ಇದರಿಂದ ಗ್ರಾಮೀಣ ಭಾಗದಲ್ಲಿ ಕೆಲಸ ಮಾಡಲು ಉತ್ಸಾಹ ಕಳೆದುಕೊಂಡಿರುವ ಸಿಬ್ಬಂದಿ ಮೂಲಸೌಲಭ್ಯ ಒದಗಿಸುವ ಕಾರ್ಯವನ್ನು ಸಮರ್ಪಕವಾಗಿ ನಿರ್ವಹಿಸುತ್ತಿಲ್ಲ.
ಈಗ ಮಳೆ ಆಗದೆ ಬರ ಎದುರಾಗುವ ಲಕ್ಷಣಗಳು ಕಾಣುತ್ತಿವೆ, ಇಂಥಹ ಪರಿಸ್ಥಿತಿಯಲ್ಲಿ ಗ್ರಾಪಂಗಳಿಗೆ ಕುಡಿಯುವ ನೀರು ಒದಗಿಸುವುದು ಸವಾಲಾಗಿ ಪರಿಣಾಮಿಸಿದೆ. ಆದರೆ ಸರ್ಕಾರ ವೇತನ ನೀಡದೇ ಇನ್ನಷ್ಟು ತೊಂದರೆಗೆ ಸಿಲುಕಿಸುತ್ತಿದೆ ಎಂದು ವಿಷಾದ ವ್ಯಕ್ತಪಡಿಸುತ್ತಾರೆ ಗ್ರಾಪಂ ನೌಕರರ ಸಂಘದ ರಾಜ್ಯ ಉಪಾಧ್ಯಕ್ಷ ಧರ್ಮೇಶ್.
ರಾಜ್ಯ ಸರ್ಕಾರ ರೂಪಿಸಿದ ನಿಯಮಗಳ ಅನುಸಾರ ಗ್ರಾಪಂಗಳಲ್ಲಿ ಬಿಲ್ ಕಲೆಕ್ಟರ್, ಗುಮಾಸ್ತ, ವಾಟರ್ಮನ್, ಪಂಪ್ ಆಪರೇಟರ್, ಪೌರಕಾರ್ಮಿಕರು, ಅಟೆಂಡರ್ಗಳ ನೇಮಕ ಮಾಡಿಕೊಳ್ಳಲಾಗಿದ್ದು, ಅವರನ್ನು 2006 ರಿಂದ ಕನಿಷ್ಠ ವೇತನ ವಾಪ್ತಿಗೆ ತಂದು ಕಾರ್ಮಿಕ ಇಲಾಖೆ ಮಾರ್ಗಸೂಚಿ ಪ್ರಕಾರ ವೇತನ ನೀಡಲಾಗುತ್ತಿದೆ. ಆದರೆ 7 ರಿಂದ 8 ತಿಂಗಳಿಂದ ವೇತನ ನೀಡುತ್ತಿಲ್ಲ.
ವೇತನ ಹೇಗೆ: ರಾಜ್ಯ ಸರ್ಕಾರ ಪ್ರತಿ ಗ್ರಾಪಂಗೆ ವಾರ್ಷಿಕ 8 ಲಕ್ಷ ಅನುದಾನ ನೀಡುತ್ತದೆ. ಇದರಲ್ಲಿ ಶೇ.40 ರಷ್ಟು ಹಣ ನೌಕರರ ವೇತನ ನೀಡಬೇಕೆಂದು ನಿಯಮ ಇದೆ. ಆದರೆ ಅನುದಾನ ವಿದ್ಯುತ್ ಬಿಲ್ ಕಟ್ಟಲು ಸಾಧ್ಯವಿಲ್ಲ. ಗ್ರಾಪಂ ಮೂಲಕ ನೀಡುವ ವಿದ್ಯುತ್ಗೆ ಸರ್ಕಾರ ವಾಣಿಜ್ಯ ದರ ವಿಧಿಸಿದೆ. ಪರಿಣಾಮ ಅನುದಾನ ಲೈಟ್ ಬಿಲ್ ಕಟ್ಟಲು ಸಾಧ್ಯವಾಗುವುದಿಲ್ಲ. ವಿಚಿತ್ರ ಅಂದರೆ ಕರೆಂಟ್ ಬಿಲ್ ಅನುದಾನದಲ್ಲಿ ಹಿಡಿದು ಸರ್ಕಾರ ನೀಡುತ್ತದೆ. ಶೇ.70 ಕ್ಕೂ ಹೆಚ್ಚು ಹಣ ಕರೆಂಟ್ ವೆಚ್ಚವೇ ಇರುತ್ತದೆ. ಉಳಿದ ಶೇ.20 ರಷ್ಟು ಹಣದಲ್ಲಿ ಗ್ರಾಮೀಣಾಭಿವೃದ್ಧಿ ಮತ್ತು ವೇತನ ನೀಡಲು ಸಾಧ್ಯವೇ ಎಂಬ ಪ್ರಶ್ನೆಗೆ ಸರ್ಕಾರವೇ ಉತ್ತರಿಸಬೇಕು.
ಕೇರಳದಲ್ಲಿ ಪ್ರತಿ ಗ್ರಾಪಂಗೆ 1 ರಿಂದ 5 ಕೋಟಿ ರು. ವರೆಗೆ ಅನುದಾನವನ್ನು ಆಯಾ ಗ್ರಾಪಂ ಜನಸಂಖ್ಯೆಗೆ ಅನುಗುಣವಾಗಿ ನೀಡಲಾಗುತ್ತದೆ. ಅದರೆ ಇಲ್ಲಿ ಎಲ್ಲಾ ಬಗೆಯ ಗ್ರಾಪಂಗಳಿಗೆ ಒಂದೇ ರೀತಿಯ ಅನುದಾನ ನೀಡಲಾಗುತ್ತದೆ. ಇದರಿಂದ ವೇತನ ನೀಡಲು ಸಾಧ್ಯವಾಗುತ್ತಿಲ್ಲ ಎಂಬುದು ಗ್ರಾಪಂ ನೌಕರರೊಬ್ಬರ ವ್ಯಾಖ್ಯಾನ.
ದುಷ್ಪರಿಣಾಮಗಳೇನು: ವೇತನ ದೊರೆಯದ ಕಾರಣ ನೌಕರರು ಅನಿವಾರ್ಯವಾಗಿ ಬೇರೆ ಕಡೆ ಗಮನಹರಿಸುವ ಮೂಲಕ ಪಂಚಾಯ್ತಿಗಳತ್ತ ಗಮನಹರಿಸುವುದು ಕಡಿಮೆಯಾಗಿದೆ.
ನೌಕರರು ಮತ್ತು ಗ್ರಾಮೀಣ ಜನರ ನಡುವೆ ನಿರಂತರ ಸಂಘರ್ಷ, ಕಾರಣ ಪರಿಣಾಮ ಕುಡಿಯುವ ನೀರು, ರಸ್ತೆ ಮತ್ತಿತರ ಕೆಲಸ ಕಾರ್ಯಗಳು ನಡೆಯುತ್ತಿಲ್ಲ. ಮನೆ ಕಂದಾಯ, ನೀರಿನ ಕಂದಾಯ ವಸೂಲಿ ಕುಂಠಿತಗೊಂಡಿದೆ.