ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಸಾವಿನಲ್ಲೂ ಅಂಧರ ಪಾಲಿಗೆ ಬೆಳಕಾದ ಪವಿತ್ರ

Rashmi Kasaragodu
Updated On : 4 Jul 2014, 1:24 am

ಹಾಸನ: ಕೆಲವರು ಬದುಕಿದ್ದಾಗ ಇತರರ ಬಾಳಿಗೆ ಬೆಳಕಾಗುತ್ತಾರೆ. ಇನ್ನು ಕೆಲವರು ಸತ್ತ ಮೇಲೂ ಬೇರೆಯವರ ಬಾಳು ಬೆಳಗುತ್ತಾರೆ. ಹೀಗೆ ತನ್ನ ಸಾವಿನಲ್ಲೂ ಅಂಧರ ಪಾಲಿಗೆ ಬೆಳಗಾದವರು ಸಕಲೇಶಪುರ ತಾಲೂಕಿನ ಈಚಲಬೀಡು ಗ್ರಾಮದ ಪವಿತ್ರ.
ಪವಿತ್ರ ಚೊಚ್ಚಲ ಹೆರಿಗೆಗೆ ಬಂದವಳು. ಕಳೆದ 12 ದಿನಗಳ ಹಿಂದೆ ಹಾಸನದ ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಯಲ್ಲಿ ಹೆಣ್ಣು ಮಗುವಿಗೆ ಜನ್ಮ ನೀಡಿದಳು. ಇದು ಶಸ್ತ್ರ ಚಿಕಿತ್ಸೆಯ ಹೆರಿಗೆ. ಬಂದ ಕಂದನ ಕಂಡು ಹಾಲುಣಿಸಿ ಆ ನೋವನ್ನು ಮರೆತವಳು. ಗಂಡ, ಬಂಧುಗಳ ಪ್ರೀತಿ ಆರೈಕೆಗೆ ಮನಸೋತು ಅಭಿಮಾನದಿಂದ  ನಕ್ಕಳು. ಬಹುಶ ಅದೇ ಅವಳ ಕಡೇ ನಗು.
ಜೂ. 21ರಂದು ಸರ್ಕಾರಿ ವೈದ್ಯಕೀಯ ಕಾಲೇಜು ಆಸ್ಪತ್ರೆಯಲ್ಲಿ ಹೆಣ್ಣುಮಗುವಿಗೆ ಜನ್ಮ ನೀಡಿದ ಪವಿತ್ರಾಳಿಗೆ ಶಸ್ತ್ರ ಚಿಕಿತ್ಸೆ ಮೂಲಕ ಹೆರಿಗೆಯಾಗಿ 5ನೇ ದಿನಕ್ಕೆ ಆಸ್ಪತ್ರೆಯಿಂದ ಬಿಡುಗಡೆಯಾಗಿ ತವರು ಸೇರಿದಳು. ಅದೇ ದಿನ ಹೊಟ್ಟೆ ಊತ, ನೋವು ಪ್ರಾರಂಭವಾಗಿ ಮತ್ತೆ ಎರಡೇ ದಿನಕ್ಕೆ ಅಂದರೆ ಜೂ.27ರಂದು ಸರ್ಕಾರಿ ವೈದ್ಯಕೀಯ ಕಾಲೇಜಿನ ಆಸ್ಪತ್ರೆಗೆ ಆಗಮಿಸಿದಾಗ ಮರು ತಪಾಸಣೆ ನಡೆಸಿದ ವೈದ್ಯರು ಕರುಳಿನಲ್ಲಿ ರಂದ್ರ ಉಂಟಾಗಿದೆ. ಮತ್ತೊಂದು ಶಸ್ತ್ರ ಚಿಕಿತ್ಸೆ ಮಾಡಬೇಕು ಎಂದರು.
ವೈದ್ಯರ ಸಲಹೆ ಮೇರೆಗೆ ಶಸ್ತ್ರ ಚಿಕಿತ್ಸೆ ನಡೆಯಿತು. ಎರಡು ಮೂರು ದಿನಗಳ ಕಾಲ ಅದೇ ಆಸ್ಪತ್ರೆಯಲ್ಲಿ ಕಳೆದ ಪವಿತ್ರ ಅವರ ಆರೋಗ್ಯ ಮತ್ತಷ್ಟು ಬಿಗಡಾಯಿಸಿತು. ಇದರಿಂದ ಬೆಂಗಳೂರಿನ ಆಸ್ಪತ್ರೆಗೆ ಕರೆದೊಯ್ಯುವಂತೆ ವೈದ್ಯರು ಸಲಹೆ ನೀಡಿದ್ದಾರೆ. ವೈದ್ಯರ ಸಲಹೆಯಂತೆ ಆಸ್ಪತ್ರೆಯಿಂದ ಹೊರಟ ಕೇವಲ 1 ಗಂಟೆಯಲ್ಲೇ. ಪವಿತ್ರ ಇನ್ನಿಲ್ಲ. ಕೇವಲ ದೇಹ ಮಾತ್ರವಾಗಿ ಮರಳಿ ಸರ್ಕಾರಿ ಆಸ್ಪತ್ರೆಗೆ ಬಂದಳು. ಆದರೆ ತಾನು ಶಾಶ್ವತವಾಗಿ ಕಣ್ಣು ಮುಚ್ಚಿದರೂ ಕತ್ತಲಾದ ಅಂಧರ ಬದುಕಿಗೆ ಹೊಸ ಬೆಳಕಾದಳು.
ಪತ್ನಿ ಪವಿತ್ರ ಮೇಲೆ ಅಪಾರ ಪ್ರೀತಿ ಹೊಂದಿದ್ದ ಆಕೆಯ ಪತಿ ಶ್ರೀನಿವಾಸ್ ನೋವಿನ ನಡುವೆಯೂ ತನ್ನ ಮಡದಿ ಪರೋಕ್ಷವಾಗಿ ಬದುಕಿರಬೇಕೆಂದು ಅಪೇಕ್ಷೆ ಪಟ್ಟರು. ಆಕೆಯ ಕಣ್ಣುಗಳನ್ನು ದಾನ ಮಾಡುವ ಮೂಲಕ ದೃಷ್ಟಿ ಹೀನರ ಪಾಲಿನ ಬೆಳಕಾಗಿ ಉಳಿಯುವಂತೆ ಮಾಡಿದರು. ಶ್ರೀನಿವಾಸ್ ಬಯಕೆಗೆ ಸಹೋದರರಾದ ದಯಾನಂದ, ಲಿಂಗರಾಜು, ದಿನೇಶ್, ಮತ್ತು ಸೋಮಣ್ಣ ಬೆಂಬಲವಾಗಿ ನಿಂತು ಸಮ್ಮತಿಸಿದರು. ಜಿಲ್ಲಾ ಶಸ್ತ್ರಚಿಕಿತ್ಸಕ ಡಾ. ಶಂಕರ್ರನ್ನು ಕೆಲವು ಅಧಿಕಾರಿಗಳ ಮೂಲಕ ಸಂಪರ್ಕಿಸಿದಾಗ ಶ್ರೀನಿವಾಸ್ ಆಸೆಗೆ ಸ್ಪಂದನೆ ದೊರೆಯಿತು.
ಸಿಎಸ್ಐ ಆಸ್ಪತ್ರೆ ವೈದ್ಯರು ಬಂದು ಕಣ್ಣುಗಳನ್ನು ಪಡೆದು ನೋವಿನ ಸಂದರ್ಭದಲ್ಲಿ ಸಹೃದಯತೆ ತೋರಿದ ಶ್ರೀನಿವಾಸ ಹಾಗೂ ಮೃತಳ ಸಹೋದದರ ಉದಾರತೆಯನ್ನು ಅಭಿನಂದಿಸಿದರು. ಈ ದೃಷ್ಟಿದಾನದ ಪುಣ್ಯ 12ದಿನಗಳಲ್ಲೇ ತಾಯಿಯನ್ನು ಕಳೆದುಕೊಂಡು ತಬ್ಬಲಿಯಾದ ಹಸುಗೂಸನ್ನು ಕಾಯಲಿ ಎಂದು ಹಾರೈಸುತ್ತಾರೆ ವಾರ್ತಾಧಿಕಾರಿ ವಿನೋದ್ ಚಂದ್ರ.


Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement