ಹೂತಿಟ್ಟಿದ್ದ ಶವ ತೆಗೆದು ಸುಟ್ಟುಹಾಕಿದ ಕೊಲೆಗಾರ
ಅರಕಲಗೂಡು: ವಾಸದ ಮನೆಯೊಂದರಲ್ಲಿ ಹೂತಿದ್ದ ಶವವನ್ನು ಕೊಲಗಾರನೇ ಹೊರ ತೆಗೆದು ರಸ್ತೆ ಬದಿಯ ಗಿಡಗಳ ನಡುವೆ ಹಾಕಿ ಸೀಮೆ ಎಣ್ಣೆ ಸುರಿದು ಸುಟ್ಟಿರುವ ಘಟನೆ ತಾಲೂಕಿನ ಚೌರಗಲ್ಲು ಗ್ರಾಮದಲ್ಲಿ ಬುಧವಾರ ರಾತ್ರಿ ನಡೆದಿದೆ. ಬರ್ಬರವಾಗಿ ಕೊಲೆಯಾಗಿದ್ದ ಕೃಷ್ಣಪ್ಪಚಾರಿಯ ಶವವನ್ನು ಕುಟುಂಬದವರು ಹೂಳಲು ಜಾಗವಿಲ್ಲದೆ ತಾವು ವಾಸ ಮಾಡುತ್ತಿದ್ದ ಮನೆಯಲ್ಲಿಯೇ ಹೂತಿದ್ದರು.
ಸಮಾದಿಯಿಂದ ಶವ ಹೊರಕ್ಕೆ: ಈ ಮನೆಯ ಪಕ್ಕದಲ್ಲಿಯೇ ವಾಸ ಮಾಡುತ್ತಿದ್ದ ಹಾಗೂ ಕೃಷ್ಣಪ್ಪಚಾರಿಯನ್ನು ಅಮಾನುಷವಾಗಿ ಕೊಲೆ ಮಾಡಿ ಜಾಮೀನು ಮೇಲೆ ಬಿಡುಗಡೆಗೊಂಡಿದ್ದ ಗಣೇಶ ಎಂಬಾತ ಬುಧವಾರ ರಾತ್ರಿ ಶವ ಹೂತಿದ್ದ ಮನೆಯಿಂದ ಶವವನ್ನು ಹೊರತೆಗೆದು ಗ್ರಾಮದ ಹೊರಭಾಗದ ರಸ್ತೆ ಬದಿಯಲ್ಲಿ ಸೀಮೆ ಎಣ್ಣೆ ಸುರಿದು ಮತ್ತೆ ಮೃತ ಶವವನ್ನು ಸುಟ್ಟಿದ್ದಾನೆ. ಗುರುವಾರ ಬೆಳಗ್ಗೆ ಹಳೆಯ ಮನೆಯ ಬಳಿ ಮೃತ ಕೃಷ್ಣಪ್ಪಚಾರಿಯ ಹೆಂಡತಿ ಸೀತಮ್ಮ ಬಂದು ನೋಡಿದಾಗ ಬಾಗಿಲು ಬೀಗ ಒಡೆಯಲಾಗಿತ್ತು. ಗಾಬರಿಯಿಂದ ಒಳ ಹೋಗಿ ನೋಡಿದಾಗ ಮನೆಯಲ್ಲಿ ಕೊಳತೆ ವಾಸನೆ ಬೀರತೊಡಗಿದೆ. ನಂತರ ರಸ್ತೆ ಬದಿ ವಾಸನೆ ಬರುತ್ತಿರುವುದನ್ನು ಗಮನಿಸಿ ನೋಡಿದ ವೇಳೆ ಸುಟ್ಟಿರುವ ಶವದ ಅವಶೇಷಗಳು ಪತ್ತೆಯಾಗಿವೆ. ಕೂಡಲೇ ಅರಕಲಗೂಡು ಠಾಣಾ ಪೊಲೀಸರಿಗೆ ವಿಷಯ ಮುಟ್ಟಿಸಿದ್ದಾರೆ.
ಘಟನೆ ವಿವರ: 2012ರ ನವೆಂಬರ್ 17ರಂದು ಗ್ರಾಮದ ಬಳಿಯ ತೋಟಗಾರಿಕಾ ಕ್ಷೇತ್ರದ ಆವರಣದಲ್ಲಿ ಕೃಷ್ಣಪ್ಪಚಾರಿ(65) ಎಂಬಾತನನ್ನು ಅದೇ ಗ್ರಾಮದ ಗಣೇಶ ಎಂಬಾತ ಹಳೆಯ ವೈಷಮ್ಯದ ಹಿನ್ನೆಲೆ ಬರ್ಬರವಾಗಿ ಕೊಚ್ಚಿ ಕೊಲೆಮಾಡಿದ್ದ. ಬಳಿಕ ಮೃತನ ಶವ ಮಣ್ಣು ಮಾಡಲು ಜಾಗದ ಸಮಸ್ಯೆ ಎದುರಾಗಿ ಕೊನೆಗೆ ಆತ ವಾಸಿಸುತ್ತಿದ್ದ ಮನೆಯಲ್ಲೇ ಶವ ಸಂಸ್ಕಾರ ಮಾಡಿದ್ದನು. ಮೃತನ ಮಗ ರಾಘವೇಂದ್ರ ನೀಡಿದ್ದ ದೂರಿನ ಅನ್ವಯ ಪೊಲೀಸರು ಆರೋಪಿಯನ್ನು ಬಂಧಿಸಿದ್ದರು.
ಜಾಮೀನಿನ ಮೇಲೆ ಬಿಡುಗಡೆ: ಆದರೆ ಇತ್ತೀಚೆಗೆ ಜಾಮೀನಿನ ಮೇಲೆ ಬಿಡುಗಡೆಗೊಂಡಿರುವ ಗಣೇಶ್ ಸಮಾದಿಯಿಂದ ಶವವನ್ನು ಹೊರ ತೆಗೆದು ಸುಡ್ಡಿದ್ದಾನೆ.
ಶವ ಸುಟ್ಟಿರುವ ಹಾಗೂ ಸಮಾದಿ ಮಾಡಿದ್ದ ಸ್ಥಳದ ತಪಾಸಣೆ ಮಾಡಿರುವ ಪೊಲೀಸರು, ಸುಟ್ಟಿರುವ ದೇಹವನ್ನು ವಶಕ್ಕೆ ಪಡೆದು ಗಣೇಶನನ್ನು ಬಂಧಿಸಿದ್ದಾರೆ. ಶವ ಪರೀಕ್ಷೆ ಬಳಿಕ ಮುಂದಿನ ಕ್ರಮ ಕೈಗೊಳ್ಳಲಾಗುವುದು ಎಂದು ಸಿಪಿಐ ರಾಜು ತಿಳಿಸಿದರು.