ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಘರ್ಷಣೆಗೆ ತಿರುಗಿದ ಯೋಜನೆ ಕಾಮಗಾರಿ

Rashmi Kasaragodu
Updated On : 4 Jul 2014, 11:51 am

ಕನ್ನಡಪ್ರಭ ವಾರ್ತೆ, ಬೇಲೂರು. ಜು 4
ಕರಗಡ ಕುಡಿಯುವ ನೀರಿನ ಏತ ನೀರಾವರಿ ಯೋಜನೆ ವಿವಾಧ ತೀವ್ರ ಸ್ವರೂಪ ಪಡೆಯುತ್ತಿದ್ದು, ತಾಲೂಕಿನ ಮಾಳೇನಹಳ್ಳಿ ಗ್ರಾಮಸ್ಥರು ಹಾಗೂ ಚಿಕ್ಕಮಗಳೂರು ತಾಲೂಕು ಲಕ್ಯಾ ಹೋಬಳಿಯ ನಾನಾ ಗ್ರಾಮಗಳ ಗ್ರಾಮಸ್ಥರ ನಡುವೆ  ನಡೆದ ಗಲಾಟೆಯಲ್ಲಿ  ಹಲವರು ಗಾಯಗೊಂಡು ಬೇಲೂರು ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಕರಗಡ ಕುಡಿಯುವ ನೀರಿನ ಏತ ನೀರಾವರಿ ಕಾಮಗಾರಿ ವಿಳಂಬವಾಗುತ್ತಿರುವುದನ್ನು ವಿರೋಧಿಸಿ ಲಕ್ಯಾ ಹೋಬಳಿಯ 41 ಗ್ರಾಮಗಳ ಗ್ರಾಮಸ್ಥರು ಶುಕ್ರವಾರ ಸ್ವತಃ ಕಾಮಗಾರಿ ಮಾಡಿ ಪೈಪ್ಲೈನ್ ಅಳವಡಿಸಲು ಮಾಳೇನಹಳ್ಳಿ ಗ್ರಾಮಕ್ಕೆ ತೆರಳಿದ್ದರು. ಈ ಸಂದರ್ಭದಲ್ಲಿ ಮಾಳೇನಹಳ್ಳಿ ಗ್ರಾಮಸ್ಥರು ಬಂಡೆಯನ್ನು ಸಿಡಿಸಲು ಸ್ಫೋಟಕಗಳನ್ನು ಬಳಸುತ್ತಿದ್ದು, ಇದರಿಂದ ಸುತ್ತಲಿನ ಮನೆಗಳು ಬಿರುಕು ಬಿಡುತ್ತಿವೆ. ಮನೆಗಳಿಗೆ ಪರಿಹಾರ ನೀಡಬೇಕೆಂದು ಒತ್ತಾಯಿಸಿ ಕಾಮಗಾರಿಗೆ ಅಡ್ಡಿಪಡಿಸಲು ಮುಂದಾದರು.
ಆಕ್ರೋಶ: ಈ ಸಂದರ್ಭದಲ್ಲಿ ಮಾತಿನ ಚಕಮಕಿ ನಡೆದು ಒರ್ವ ವ್ಯಕ್ತಿ ಮತ್ತೊಬ್ಬನ ಮೇಲೆ ಹಲ್ಲೆ ನಡೆಸಿದನು. ಕೂಡಲೇ ಮಾಳೇನಹಳ್ಳಿ ಗ್ರಾಮಸ್ಥರು ತಮ್ಮ ಮನೆಗಳಿಗೆ ತೆರಳಿ ಮಚ್ಚು ಹಾಗೂ ಕೋಲುಗಳನ್ನು ತಂದರು. ಇದರಿಂದ ಆಕ್ರೋಶಗೊಂಡ ಚಿಕ್ಕಮಗಳೂರು ತಾಲೂಕು ಲಕ್ಯಾ ಹೋಬಳಿಯ ನಾನಾ ಗ್ರಾಮಗಳ ಗ್ರಾಮಸ್ಥರು ಮಾಳೇನಹಳ್ಳಿ ಗ್ರಾಮಸ್ಥರ ಮೇಲೆ ತಿರುಗಿ ಬಿದ್ದರು. ಕೈಗೆ ಸಿಕ್ಕ ಕಲ್ಲನ್ನು ಎತ್ತಿಕೊಂಡು ಗ್ರಾಮಸ್ಥರ ಮೇಲೆ ಬಿಸಾಡತೊಡಗಿದರು. ಬೆರಳೆಣಿಕೆಯಷ್ಟಿದ್ದ ಮಾಳೇನಹಳ್ಳಿ ಗ್ರಾಮಸ್ಥರು ಮತ್ತೊಂದೆಡೆ ಸಹಸ್ರಾರು ಜನ ಇರುವುದನ್ನು ಮನಗಂಡು ಸ್ಥಳದಿಂದ ಕಾಲ್ಕಿತ್ತರು. ಆದರೂ ಬಿಡದೆ ಅವರನ್ನು ಬೆನ್ನಟ್ಟಿದ ಗ್ರಾಮಸ್ಥರು ಹೊಡೆಯಲು ಆರಂಭಿಸಿದರು.  ಸ್ಥಳಕ್ಕೆ ಆಗಮಿಸಿದ ಪೊಲೀಸರು ಕೂಡಲೇ ಜನರನ್ನು ಸ್ಥಳದಿಂದ ತೆರಳುವಂತೆ ನೋಡಿಕೊಂಡರು. ಪೊಲೀಸರು ಬರುವುದು ಇನ್ನೂ ಸ್ವಲ್ಪ ತಡವಾಗಿದ್ದರೂ ಸಹ ಹೆಚ್ಚಿನ ಅನಾಹುತ ಸಂಭವಿಸುವ ಸಾಧ್ಯತೆಗಳಿತ್ತು.   ಈ ಘರ್ಷಣೆಯಲ್ಲಿ 10 ರಿಂದ 12 ಜನರಿಗೆ ಗಾಯಗಳಾಗಿವೆ. ಮಾಳೇನಹಳ್ಳಿ ಗ್ರಾಮದ ಹೇಮಂತ, ರಂಗಸ್ವಾಮಿ, ಶಿವು, ಬಸವೇಗೌಡ, ಧರಣೇಶ್ ಎಂಬುವವರಿಗೆ ತೀವ್ರ ಗಾಯಗಳಾಗಿವೆ. ಗಾಯಾಳುಗಳನ್ನು ಬೇಲೂರು ಸರ್ಕಾರಿ ಆಸ್ಪತ್ರೆಗೆ ಚಿಕಿತ್ಸೆಗೆ ದಾಖಲಿಸಲಾಗಿದೆ.
ಪರಿಹಾರ: ಆಸ್ಪತ್ರೆಯಲ್ಲಿ ಗಾಯಾಳು ಹೇಮಂತ್ ತಾಯಿ ಯಶೋದ ಮಾತನಾಡಿ, ನೀರು ಹರಿಸುವ ಕಾಮಗಾರಿ ಹಿನ್ನಲೆಯಲ್ಲಿ  1 ಗುಂಟೆಗೆ ರು. 7 ಸಾವಿರ ಪರಿಹಾರವನ್ನು ನೀಡಲಾಗಿತ್ತು.
  ಆದರೆ ಬಂಡೆಯ ಆಳಕ್ಕೆ ಸಿಡಿಮದ್ದು ಇಟ್ಟು ಸ್ಫೋಟಿಸುತ್ತಿದ್ದ ಹಿನ್ನಲೆಯಲ್ಲಿ ಗ್ರಾಮದಲ್ಲಿರುವ ಮನೆಗಳ ಗೋಡೆ ಬಿರುಕು ಬಿಟ್ಟಿದ್ದು ಪರಿಹಾರ ಕೊಡುವುದಾಗಿ ಗುತ್ತಿಗೆದಾರರು ಭರವಸೆ ನೀಡಿದ್ದರು.  ಮೊದಲು ಬಿರುಕು ಬಿಟ್ಟಿರುವ ಮನೆಗಳಿಗೆ ಪರಿಹಾರ ಕೊಟ್ಟು ನಂತರ ಕಾಮಗಾರಿ ಮಾಡಿ ಎಂಬುದು ಗ್ರಾಮಸ್ಥರ ಬೇಡಿಕೆಯಾಗಿತ್ತು.   ಆದರೆ ಇಂದು ಏಕಾಏಕಿ ಲಾರಿ ಮತ್ತು ವ್ಯಾನಿನಲ್ಲಿ ಬಂದ ಸಾವಿರಾರು ಗ್ರಾಮಸ್ಥರು ಮನೆಮನೆಗೆ ನುಗ್ಗಿ ಹೊರಗೆ ಎಳೆದು ಹಲ್ಲೆ ನಡೆಸಿ ದೌರ್ಜನ್ಯ ಎಸಗಿದ್ದಾರೆ. ಮನೆಯಲ್ಲಿ ಟಿವಿ ನೋಡುತ್ತಿದ್ದ ಹೇಮಂತ್ ಎನ್ನುವ ಅಮಾಯಕ ಯುವಕನಿಗೆ ಕಲ್ಲಿನಿಂದ ಹಲ್ಲೆ ಮಾಡಿದ್ದು, ಇಷ್ಟು ದೌರ್ಜನ್ಯ ನಡೆಯುತ್ತಿದ್ದರೂ ಸರ್ಕಾರ ಹಾಗೂ ಜಿಲ್ಲಾಡಳಿತ ತಲೆ ಹಾಕಿಲ್ಲ ಎಂದು ದೂರಿದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement