ಜಿಲಿಟನ್ ಸಾಗಿಸುತ್ತಿದ್ದ ವಾಹನ ವಶ, ಚಾಲಕ ಪರಾರಿ
ಹೊಳೆನರಸೀಪುರ: ಅಕ್ರಮವಾಗಿ ಸ್ಪೋಟಕ ಜಿಲಿಟಿನ್ ಕದ್ದು ಸಾಗಿಸುತ್ತಿದ್ದ ಮಾರುತಿ ಓಮ್ನಿ ವಾಹನವನ್ನು ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ತಮ್ಮ ವಶಕ್ಕೆ ಪಡೆದಿರುವ ಘಟನೆ ತಾಲೂಕಿನ ಗಡಿ ಗ್ರಾಮವಾದ ದೊಡ್ಡಹಳ್ಳಿ ಗ್ರಾಮದ ಸರಹದ್ದಿನಲ್ಲಿ ಇತ್ತೀಚೆಗೆ ನಡೆದಿದೆ.
ತಾಲೂಕಿನ ಗಡಿ ಗ್ರಾಮವಾದ ಹಾಸನ-ಮೈಸೂರು ರಸ್ತೆಯಲ್ಲಿನ ದೊಡ್ಡಹಳ್ಳಿ ಗ್ರಾಮದ ಬಳಿಯಲ್ಲಿ ಇಲ್ಲಿನ ಗ್ರಾಮಾಂತರ ಠಾಣೆ ಪೊಲೀಸರು ರಾತ್ರಿ ಗಸ್ತಿನಲ್ಲಿದ್ದ ಅವಧಿಯಲ್ಲಿ ಮೈಸೂರು ಕಡೆಯಿಂದ ಬಂದ ಮಾರುತಿ ಓಮ್ನಿ ವ್ಯಾನನ್ನು ತಡೆದು ಪರೀಕ್ಷಿಸಲು ಮುಂದಾದಾಗ ವ್ಯಾನಿನ ಚಾಲಕ ವಾಹನವನ್ನು ಅಲ್ಲಿಯೇ ಬಿಟ್ಟು ಪರಾರಿಯಾಗಿದನು. ವ್ಯಾನನ್ನು ಪರೀಕ್ಷಿಸಲಾಗಿ, ಮಾರುತಿ ಓಮ್ಮಿನಲ್ಲಿ ಸಾವಿರಾರು ರು. ಮೌಲ್ಯದ ನಾಲ್ಕು ಬಾಕ್ಸ್ಗಳಷ್ಟು ಸ್ಫೋಟಕ ಜಿಲೆಟಿನ್ ಪತ್ತೆಯಾಗಿದೆ.ಕೂಡಲೇ ವಿಷಯ ತಿಳಿದ ಗ್ರಾಮಾಂತರ ಠಾಣೆ ಪಿಎಸ್ಸೈ ಲೋಕೇಶ್ ಅವರು ಸ್ಥಳಕ್ಕೆ ತೆರಳಿ ಜಿಲಿಟನ್ ತುಂಬಿದ್ದ ವಾಹನವನ್ನು ವಶಕ್ಕೆ ಪಡೆದು ಪ್ರಕರಣವನ್ನು ದಾಖಲಿಸಿದ್ದಾರೆ.