ನೋಡೆಲ್ ಏಜೆನ್ಸಿ ವಿರುದ್ಧ ಕ್ರಮಕ್ಕೆ ಆಗ್ರಹ
ಶ್ರೀರಂಗಪಟ್ಟಣ: ಕೆಆರ್ಎಸ್ ಜಲಾಶಯದಲ್ಲಿ ಮೀನುಗಾರಿಕೆ ನಡೆಸುತ್ತಿರುವ ನೋಡೆಲ್ ಏಜೆನ್ಸಿ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸ್ಥಳೀಯ ಮೀನುಗಾರರು ಮೀನುಗಾರಿಕೆ ಇಲಾಖೆಯ ಸಹಾಯಕ ನಿರ್ದೇಶಕ ಮಹದೇವುಗೆ ಮನವಿ ಸಲ್ಲಿಸಿದರು. ಕೃಷ್ಣರಾಜ ಸಾಗರದಲ್ಲಿ ಮಾರಿಬಲೆ ಹಾಗೂ ಎಳೆಬಲೆ ಬಳಸಿ ಮೀನುಗಾರಿಕೆ ನಡೆಸದಂತೆ ಸರ್ಕಾರ ಆದೇಶ ಹೊರಡಿಸಿದ್ದರು ಏಜೆನ್ಸಿಯವರು ಈ ಬಲೆಗಳ ಮೂಲಕವೇ ಮೀನುಗಾರಿಕೆ ನಡೆಸುತ್ತಿದ್ದಾರೆ. ಇದರಿಂದ ಸಣ್ಣ ಮೀನುಗಳು ಬಲೆಗೆ ಸಿಲುಕಿ ಸಾವನ್ನಪ್ಪುತ್ತವೆ, ಸಣ್ಣ ಮೀನುಗಾರಿಕೆ ನಡೆಸುವವರಿಗೆ ಪೆಟ್ಟು ಬೀಳುತ್ತದೆ ಎಂದು ದೂರಿದರು. ಮನವಿ ಸ್ವೀಕರಿಸಿದ ಮಹದೇವು, ಕಾನೂನು ಉಲ್ಲಂಘಿಸಿ ಮೀನುಗಾರಿಕೆ ನಡೆಸುವವರ ವಿರುದ್ಧ ನಿರ್ದಾಕ್ಷಿಣ್ಯ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಮೀನುಗಾರರ ಮುಖಂಡರಾದ ರಾಜು, ಶಿವು, ಬೋರ, ವೆಂಕಟೇಶ್, ರವಿ, ರಂಗ, ಸ್ವಾಮಿ ಇದ್ದರು.