ಮದ್ಯ ಮುಕ್ತದಿಂದ ಸುಖೀ ಸಮಾಜ: ಪ್ರೊ. ಬಸವೇಗೌಡ
ನುಗ್ಗೇಹಳ್ಳಿ (ಚನ್ನರಾಯಪಟ್ಟಣ ತಾ.): ಮದ್ಯ ಮುಕ್ತತೆಯಿಂದ ಮಾತ್ರ ಸುಖೀ ಸಮಾಜ ಸಾಧ್ಯ. ಸರ್ಕಾರ ಮದ್ಯ ನಿಷೇದಿಸಲು ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಪ್ರೊ. ಜಿ.ಕೆ ಬಸವೇಗೌಡ ಆಗ್ರಹಿಸಿದ್ದಾರೆ.
ಇಲ್ಲಿಗೆ ಸಮೀಪದ ಗಂಗನಘಟ್ಟದ ಗೇಟ್ನಲ್ಲಿ ಇತ್ತೀಚೆಗೆ ನಡೆದ ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಾರೇಹಳ್ಳಿ ಬಜಗೂರು ಪ್ರಗತಿ ಬಂದು ಸ್ವಸಹಾಯ ಸಂಘಗಳ ಒಕ್ಕೂಟದಲ್ಲಿ ನಡೆದ 702ನೇ ಮದ್ಯವರ್ಜನ ಶಿಬಿರ ಉದ್ಘಾಟಿಸಿ ಮಾತನಾಡಿದರು. ಧರ್ಮಸ್ಥಳದ ಧರ್ಮಾಧಿಕಾರಿ ಡಾ. ಡಿ ವಿರೇಂದ್ರ ಹೆಗ್ಗಡೆಯವರು ಮಾಡುತ್ತಿರುವ ಸೇವೆಯನ್ನು ಶ್ಲಾಘಿಸಿದರು.
ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನಾಧಿಕಾರಿ ಪಿ. ಶ್ರೀನಿವಾಸ್ ಮಾತನಾಡಿ, ಸಂಬಂಧಪಟ್ಟ ಅಬಕಾರಿ ಅಧಿಕಾರಿಗಳು ರೈತರ ನೆಮ್ಮದಿಗೋಸ್ಕರ ಹಳ್ಳಿಗಳಲ್ಲಿ ಮದ್ಯ ಮಾರುವವರನ್ನು ಕೂಡಲೇ ಬಂಧಿಸಬೇಕು ಎಂದು ಆಗ್ರಹಿಸಿದರು. ಮದ್ಯವರ್ಜನ ಶಿಬಿರದಿಂದ ಸುಮಾರು 60.000 ಜನ ಕುಡಿತ ಬಿಟ್ಟಿದ್ದಾರೆ ಎಂದು ತಿಳಿಸಿದರು.
ಸಮಾರಂಭದಲ್ಲಿ ಕೆ.ಟಿ. ನಟೇಶ್, ಮೇಲ್ವಿಚಾರಕ ಚಂದ್ರಹಾಸ್, ಕಾಂಗ್ರೆಸ್ ಮುಖಂಡ ಜಗದೀಶ್, ರವೀಶ್, ರಾಜಶೇಖರ್, ವೆಂಕಟರಾಮಯ್ಯ, ದಿವಾಕರ್ ಪೂಜಾರಿ ಇದ್ದರು.