ರಾಜ್ಯ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನ
ಹಾಸನ: ಅಕ್ಟೋಬರ್ 1 ರಂದು ವಿಶ್ವ ಹಿರಿಯ ದಿನಾಚರಣೆಯನ್ನು ರಾಜ್ಯ ಮಟ್ಟದಲ್ಲಿ ಆಚರಿಸುವ ಸಂಬಂಧವಾಗಿ, ಹಿರಿಯ ನಾಗರಿಕರಿಗಾಗಿ ಉತ್ತಮ ಸೇವೆ ಸಲ್ಲಿಸಿದ ಸಂಸ್ಥೆ ಹಾಗೂ ಹಿರಿಯ ನಾಗರಿಕರು ನಾನಾ ಕ್ಷೇತ್ರಗಳಲ್ಲಿ (ಶಿಕ್ಷಣ, ಸಾಹಿತ್ಯ, ಕಲೆ, ಕಾನೂನು, ಸ್ವಾತಂತ್ರ್ಯ ಹೋರಾಟಗಾರರು, ಕ್ರೀಡೆ) ಸೇವೆ ಸಲ್ಲಿಸಿದ ವ್ಯಕ್ತಿಗಳಿಗೆ ರಾಜ್ಯ ಪ್ರಶಸ್ತಿ ನೀಡಲು ಅರ್ಜಿ ಆಹ್ವಾನಿಸಲಾಗಿದೆ. ಹಿರಿಯ ನಾಗರಿಕರು ಜು. 21ರೊಳಗೆ ಅರ್ಜಿಗಳನ್ನು ತಮ್ಮ ಸಾಧನೆಯ ದಾಖಲಾತಿಗಳೊಂದಿಗೆ ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳು, ಉಪನಿರ್ದೇಶಕರ ಕಚೇರಿ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, 9ನೇ ಕ್ರಾಸ್, ಕೆ.ಆರ್.ಪುರಂ, ಹಾಸನ ಇವರಿಗೆ ಸಲ್ಲಿಸಿ. ವಿವರಗಳಿಗಾಗಿ ದೂ-08172-264546 ಸಂಪರ್ಕಿಸಿ.
ಪಠ್ಯಪುಸ್ತಕ ವಿತರಣೆ
ಅರಸೀಕೆರೆ: ಸರ್ಕಾರ ಯಾವುದೇ ಮಕ್ಕಳು ಶಿಕ್ಷಣದಿಂದ ವಂಚಿತರಾಗಬಾರದೆಂದು ಗುಣಮಟ್ಟದ ಶಿಕ್ಷಣದೊಂದಿಗೆ ಬಿಸಿಯೂಟ, ಉಚಿತ ಪಠ್ಯಪುಸ್ತಕ, ಸಮವಸ್ತ್ರ ಸೌಲಭ್ಯ ನೀಡುತ್ತಿದ್ದು ಇದನ್ನು ಸದುಪಯೋಗಪಡಿಸಿಕೊಂಡು ವಿದ್ಯಾವಂತರಾಗಬೇಕೆಂದು ನಿವೃತ್ತ ಶಿಕ್ಷಕ ಆರ್. ಚಂದ್ರಪ್ಪ ತಿಳಿಸಿದರು. ತಾಲೂಕಿನ ರಾಂಪುರ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸಿ ಅವರು ಮಾತನಾಡಿದರು. ಕಾರ್ಯಕ್ರಮದಲ್ಲಿ ರಾಂಪುರ ಗ್ರಾಪಂ ಉಪಾಧ್ಯಕ್ಷೆ ಲೋಲಾಕ್ಷಮ್ಮ, ಎಸ್ಡಿಎಂಸಿ ಅಧ್ಯಕ್ಷ ಆರ್.ಸಿ. ನಟರಾಜ್, ಉಪಾಧ್ಯಕ್ಷೆ ಎಚ್.ಬಿ. ಭಾಗ್ಯ, ಮುಖ್ಯ ಶಿಕ್ಷಕ ಡಿ.ಸಿ. ರಾಮಣ್ಣ ಇದ್ದರು.