ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ಆಗಸ್ಟ್ನಲ್ಲಿ ಅರಸೀಕೆರೆ ಕುಡಿವ ನೀರು ಯೋಜನೆ ಜಾರಿ

Rashmi Kasaragodu
Updated On : 6 Jul 2014, 12:17 pm

ಅರಸೀಕೆರೆ: ಪಟ್ಟಣಕ್ಕೆ ಶುದ್ಧ ಕುಡಿಯುವ ನೀರನ್ನು ಸರಬರಾಜು ಮಾಡುವ ಯೋಜನೆ ಆಗಸ್ಟ್ನಲ್ಲಿ ಅನುಷ್ಠಾನಗೊಳ್ಳಲಿದೆ.
ಯೋಜನೆ ಕಾಮಗಾರಿ ಹೇಮಾವತಿ ಮೂಲದ ಚನ್ನರಾಯಪಟ್ಟಣ ತಾಲೂಕು ಗನ್ನೀಘಡದ ಬಳಿ ಭರದಿಂದ ನಡೆಯುತ್ತಿದ್ದು, ಸ್ಥಳಕ್ಕೆ ಶಾಸಕ ಕೆ.ಎಂ. ಶಿವಲಿಂಗೇಗೌಡ, ಜಿಲ್ಲಾಧಿಕಾರಿ ಅನ್ಬುಕುಮಾರ್ ನೇತೃತ್ವದ ತಂಡ ಶುಕ್ರವಾರ ಭೇಟಿ ನೀಡಿ ಕಾಮಗಾರಿ ಪರಿಶೀಲನೆ ನಡೆಸಿದರು.
ಗನ್ನೀಘಡದಲ್ಲಿ ಕಾಮಗಾರಿ ಪರಿಶೀಲಿಸಿದ ಜಿಲ್ಲಾಧಿಕಾರಿಗಳು ತ್ವರಿತಗತಿಯಲ್ಲಿ ಯಂತ್ರೋಪಕರಣಗಳನ್ನು ಅಳವಡಿಸಿ ಶೀಘ್ರದಲ್ಲಿ ನೀರು ಪೂರೈಕೆ ಮಾಡಬೇಕೆಂದು ಸೂಚನೆ ನೀಡಿದರು.
 ಬಳಿಕ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಜಿಲ್ಲಾಧಿಕಾರಿಗಳು, 2010 ರಲ್ಲಿ ಸರ್ಕಾರ ಅರಸೀಕೆರೆ ಪಟ್ಟಣಕ್ಕೆ ನೀರು ಪೂರೈಸುವ ಮಹತಾಕಾಂಕ್ಷಿ ಯೋಜನೆಗೆ 121.85 ಕೋಟಿ ರೂ. ಮೊತ್ತದ ಕಾಮಗಾರಿಗೆ ಅನುಮೋದನೆ ನೀಡಿತ್ತು. ತದನಂತರ ಯೋಜನೆಯಡಿಯಲ್ಲಿ ಚನ್ನರಾಯಪಟ್ಟಣ ತಾಲ್ಲೂಕಿನ ಗನ್ನೀಘಡ ಸಮೀಪ ಹೇಮಾವತಿ ನದಿ ದಂಡೆಯಲ್ಲಿ 8 ್ಢ 8.20 ಅಳತೆಯ ಆರ್.ಸಿ.ಸಿ. ಜಾಕ್ ನಿರ್ಮಿಸಿ 180 ಎಚ್.ಪಿ.ಸಾಮರ್ಥ್ಯದ ಟರ್ಬೈನ್ ಪಂಪುಗಳನ್ನು ಅಳವಡಿಸಿ 610 ಮಿ.ಮೀ.ವ್ಯಾಸದ ಕೊಳವೆಗಳ ಮೂಲಕ ಮೊದಲನೇ ಹಂತದಿಂದ ನೀರು ಸಂಗ್ರಹಿಸಿ ನಂತರ 270 ಹೆಚ್.ಪಿ. ಸಾಮರ್ಥ್ಯದ ಸೆಂಟ್ರಿಪ್ಯೂಗಲ್ ಪೈಪ್ಗಳ ಮೂಲಕ 30 ಕಿ.ಮೀ.ದೂರದಲ್ಲಿರುವ ಗಂಡಸಿ ಹ್ಯಾಂಡ್ ಪೋಸ್ಟ್ ಸಮೀಪ ನಿರ್ಮಿಸಿರುವ ಓವರ್ಹೆಡ್ಟ್ಯಾಂಕ್ಗೆ ಪಂಪು ಮಾಡಲಾಗುವುದು. ನಂತರ ನೀರನ್ನು ಶುದ್ಧೀಕರಿಸಿ ಗುರುತ್ವಾಕರ್ಷಣೆಯ ಮೂಲಕವೇ ಅರಸೀಕೆರೆ ಪಟ್ಟಣಕ್ಕೆ ನೀರು ಪೂರೈಸಲಾಗುವ ಯೋಜನೆ ಇದಾಗಿದೆ ಎಂದು ಮಾಹಿತಿ ನೀಡಿದರು.
ಯೋಜನೆಯ ಕಾಮಗಾರಿಗಳು ಶೇ.80ರಷ್ಟು  ಪೂರ್ಣಗೊಂಡಿದ್ದು ಆಗಸ್ಟ್ ಅಂತ್ಯದ ವೇಳೆಗೆ ಪ್ರಾಯೋಗಿಕವಾಗಿ ಹರಿಸಲಾಗುವುದು ಎಂದು ವಿವರಿಸಿದರು.. ಶಾಸಕ ಕೆ.ಎಂ.ಶಿವಲಿಂಗೇಗೌಡ ಮಾತನಾಡಿ, ತಾಲೂಕಿನಲ್ಲಿ ನಡೆಯುತ್ತಿರುವ ಎಲ್ಲಾ ಅಭಿವೃದ್ಧಿ ಕಾಮಗಾರಿಗಳಿಗೆ ಕೆಲವು ಕುತಂತ್ರಿಗಳು ಕಿರುಕುಳ ನೀಡುತ್ತಿದ್ದು, ಅಭಿವೃದ್ಧಿ ಕಾಮಗಾರಿಗಳಿಗೆ ಎಷ್ಟೇ ಅಡ್ಡಿ ಆತಂಕ ಎದುರಾದರೂ ಅದನ್ನು ಸಮರ್ಥವಾಗಿ ನಿಭಾಯಿಸಿ ಯೋಜನೆಯನ್ನು ಪೂರ್ಣಗೊಳಿಸಲಾಗುವುದು ಎಂದರು.  ಆಗಸ್ಟ್ ಅಂತ್ಯದ ವೇಳೆಗೆ ಪಟ್ಟಣಕ್ಕೆ ಸುಮಾರು 90 ದಿನಗಳ ಕಾಲ ಪ್ರತಿನಿತ್ಯ 150 ಲಕ್ಷ ಲೀ. ನೀರು ಸರಬರಾಜಾಗಲಿದ್ದು ಪಟ್ಟಣದ ಜನತೆಯ ಕುಡಿಯುವ ನೀರಿನ ಬವಣೆ ನೀಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಈ ಸಂದರ್ಭದಲ್ಲಿ ವೇಳೆ ತಹಸಾಲ್ದಾರ್ ನಟರಾಜ್, ತಾಪಂ ಇಓ ಟಿ.ಎನ್.ಮೂರ್ತಿ, ಪುರಸಭೆ ಮುಖ್ಯಾಧಿಕಾರಿ ಸತ್ಯನಾರಾಯಣ, ಎಇಇ ಸುಬ್ರಹ್ಮಣ್ಯ, ಇಇ ಕರಿಯಪ್ಪ, ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್, ಸಮೀವುಲ್ಲಾ, ಪುರಸಭಾ ಸದಸ್ಯರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement