ಬಂಟರಿಗೆ ಆರ್ಥಿಕ ನೆರವು: ಆಳ್ವ ಭರವಸೆ
ಸಕಲೇಶಪುರ: ಸಕಲೇಶಪುರ ಬಂಟ ಸಮುದಾಯದಲ್ಲಿ ಆರ್ಥಿಕವಾಗಿ ಹಿನ್ನಡೆಯುಳ್ಳ ಜನರಿಗೆ ಸಮುದಾಯದ ವತಿಯಿಂದ ಮನೆ ನಿರ್ಮಿಸಲು, ಹೆಣ್ಣು ಮಕ್ಕಳ ವಿದ್ಯಾಭ್ಯಾಸ ಹಾಗೂ ವಿವಾಹಕ್ಕೆ ನೆರವು ನೀಡುವುದಾಗಿ ಜಿಲ್ಲಾ ಬಂಟರ ಸಂಘದ ನೂತನ ಅಧ್ಯಕ್ಷ ಸೀನಪ್ಪ ಆಳ್ವ ತಿಳಿಸಿದ್ದಾರೆ. ಇತ್ತೀಚೆಗೆ ಪಟ್ಟಣದ ಸೀನಪ್ಪ ಶೆಟ್ಟಿ ಸಮುದಾಯ ಭವನದ ಸಭಾಂಗಣದಲ್ಲಿ ಶುಕ್ರವಾರ ನಡೆದ ಸರ್ವ ಸದಸ್ಯರ ಸಭೆಯಲ್ಲಿ ಅಧಿಕಾರ ಸ್ವೀಕರಿಸಿ ಮಾತನಾಡಿದ ಅವರು, ಈ ನಿಟ್ಟಿನಲ್ಲಿ ಸಮುದಾಯದಲ್ಲಿ ಆರ್ಥಿಕವಾಗಿ ಸಬಲರಾಗಿರುವವರ ಸಹಕಾರ ಅಗತ್ಯ ಎಂದರು. ನಿಕಟ ಪೂರ್ವ ಅಧ್ಯಕ್ಷ ಎಚ್.ಎ. ಭಾಸ್ಕರ್ ಶೆಟ್ಟಿ ಅವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ನೂತನ ಪದಾಧಿಕಾರಿಗಳನ್ನು ಆಯ್ಕೆ ಮಾಡಲಾಯಿತು. ಉಪಾಧ್ಯಕ್ಷರಾಗಿ ಹಾಸನ ವಕೀಲ ಜಯರಾಂ ಶೆಟ್ಟಿ, ಕಾರ್ಯದರ್ಶಿ ಆನಂದ್, ಸಹ ಕಾರ್ಯದರ್ಶಿ ಜಗದೀಶ್ ಶೆಟ್ಟಿ, ಹಾಗೂ ಖಜಾಂಜಿಯಾಗಿ ದೇವ ರಾಜ್ ಶೆಟ್ಟಿ ಇವರುಗಳನ್ನು ಆಯ್ಕೆ ಮಾಡಲಾಯಿತು. ಇದೇ ಸಂದರ್ಭದಲ್ಲಿ ಸಮುದಾಯದ ಮುಖಂಡರಾದ ಹಂಸರಾಜ ಶೆಟ್ಟಿ, ಸಂಜೇತ್ ಶೆಟ್ಟಿ, ಚೆನ್ನವೆಣೀ ಎಂ.ಶೆಟ್ಟಿ ಇತರರು ಇದ್ದರು.