ಮಹಿಳಾ ದೌರ್ಜನ್ಯ ತಡೆಗೆ ಸಂಘಟಿತ ಹೋರಾಟಕ್ಕೆ ಕರೆ
ಮೈಸೂರು: ಮಹಿಳೆಯರ ಮೇಲೆ ಇತ್ತೀಚೆಗೆ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣಗಳು ಹೆಚ್ಚಾಗಿ ನಡೆಯುತ್ತಿರುವುದು ಆತಂಕಕಾರಿ ಬೆಳವಣಿಗೆಯಾಗಿದ್ದು, ಮಹಿಳೆಯರು ಅಂತಹ ದುಷ್ಟಶಕ್ತಿಗಳ ವಿರುದ್ಧ ಸಂಘಟಿತರಾಗಿ ಹೋರಾಟ ಮಾಡಬೇಕು ಎಂದು ಜಿಪಂ ಹಂಗಾಮಿ ಅಧ್ಯಕ್ಷ ಸಿ.ಜೆ. ದ್ವಾರಕೀಶ್ ಕರೆ ನೀಡಿದರು.
ಮೈಸೂರು ತಾಲೂಕಿನ ಶ್ರೀರಾಂಪುರ ಗ್ರಾಪಂ ವತಿಯಿಂದ ಶ್ರೀರಾಂಪುರದ ಅಶ್ವಿನಿ ಕಲ್ಯಾಣಮಂಟದಲ್ಲಿ ನಡೆದ ಮಹಿಳೆಯರಿಗಾಗಿ ವಿಶೇಷ ಗ್ರಾಮ ಸಭೆ ಕಾರ್ಯಕ್ರಮವನ್ನು ಅವರು ಉದ್ಘಾಟಿಸಿ ಮಾತನಾಡಿದರು. ಸರ್ಕಾರ ಮಹಿಳೆಯರಿಗಾಗಿ ಅನೇಕ ಅಭಿವೃದ್ಧಿ ಕಾರ್ಯಕ್ರಮವನ್ನು ಹಮ್ಮಿಕೊಂಡು, ಮಹಿಳೆ ಅಬಲೆಯಲ್ಲ, ನಿಮ್ಮೊಂದಿಗೆ ನಾವಿದ್ದೇವೆ ಎಂದು ಸಾರಿದೆ. ನಿಮ್ಮ ಹಕ್ಕು ಮತ್ತು ರಕ್ಷಣೆ ನಮ್ಮ ಜವಾಬ್ದಾರಿ ಎಂಬ ಘೋಷಣೆಗಳೊಂದಿಗೆ ಹಲವಾರು ಜಾಗೃತಿ ಕಾರ್ಯಕ್ರಮಗಳನ್ನು ಜಾರಿಗೊಳಿಸಿದೆ ಎಂದರು. ಮಹಿಳೆಯರು ಮೊದಲು ಮಕ್ಕಳನ್ನು ವಿದ್ಯಾವಂತರನ್ನಾಗಿ ಮಾಡಿ ಗುಡಿ ಕೈಗಾರಿಕೆ, ಹೈನುಗಾರಿಕೆಯಂತಹ ಕಸುಬುಗಳನ್ನು ಅವಲಂಬಿಸಿ, ಆರ್ಥಿಕವಾಗಿ ಸಬಲರಾಗಬೇಕು. ಮೂಢನಂಬಿಕೆ, ಅಜ್ಞಾನ, ಅನಕ್ಷರತೆ ತೊಲಗಿಸಿ ಜಾಗೃತರಾಗಿ ಬದುಕನ್ನು ಕಟ್ಟಿಕೊಳ್ಳಬೇಕು ಎಂದರು.