ರಾಜ್ಯದೇಶರಾಜಕೀಯಕ್ರಿಕೆಟ್ವಿದೇಶವಾಣಿಜ್ಯ
ಸಿನಿಮಾ▾
ಅಂಕಣಗಳು
⋮
ಹಾಸನ

ರಾಜ್ಯ ಸರ್ಕಾರ ಸತ್ತಿದೆ: ಈಶ್ವರಪ್ಪ

Rashmi Kasaragodu
Updated On : 6 Jul 2014, 12:18 pm

ಅರಸೀಕೆರೆ: ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಎಲ್ಲಾ ರಂಗಗಳಲ್ಲಿಯೂ ಸಂಪೂರ್ಣ ವಿಫಲಗೊಂಡಿದ್ದು, ಕೋಮಾಸ್ಥಿತಿ ತಲುಪಿ ಸತ್ತುಹೋಗಿದೆ ಎಂದು ಮಾಜಿ ಉಪ ಮುಖ್ಯಮಂತ್ರಿ ಕೆ.ಎಸ್. ಈಶ್ವರಪ್ಪ  ಕಟು ಟೀಕೆ ಮಾಡಿದ್ದಾರೆ.
 ಶನಿವಾರ ಸುದ್ದಿಗಾರರೊಂದಿಗೆ ಮಾತನಾಡುತ್ತಿದ್ದ ಅವರು, ಕಾನೂನು ಸುವ್ಯವಸ್ಥೆ ಕಾಪಾಡುವಲ್ಲಿ ಸರ್ಕಾರ ಸಂಪೂರ್ಣ  ವಿಫಲವಾಗಿದೆ. ಅದಕ್ಕೆ ಎಡಿಜಿಪಿ ರವೀಂದ್ರನಾಥ ಪ್ರಕರಣ, ಹುನಗುಂದ ಶಾಸಕ ವಿಜಯಾನಂದ ಕಾಶಪ್ಪನವರ್ ಪ್ರಕರಣಗಳೇ ಸಾಕ್ಷಿಯಾಗಿದೆ. ಇನ್ನೂ ಗೃಹಸಚಿವರಿಗೇ ಭೂಗತಲೋಕದ ಪಾತಕಿಗಳಿಂದ ಬೆದರಿಕೆ ಕರೆಗಳು ಬರುತ್ತಿದೆ ಎಂಬುದು ಕಾನೂನು ಸುವ್ಯವಸ್ಥೆ ಹದಗೆಟ್ಟಿದೆ ಎಂಬುದಕ್ಕೆ ಮತ್ತಷ್ಟು ಪುಷ್ಟಿ ನೀಡಿದೆ ಎಂದು ಟೀಕಿಸಿದರು.
ಸರ್ಕಾರದ ವಿರುದ್ಧ ಹೋರಾಟ: ಬರ ಪರಿಹಾರ ಕಾಮಗಾರಿ, ಕೆರೆ ಹೂಳೆತ್ತುವುದು, ಗೋಶಾಲೆ ಆರಂಭ ಸಂಬಂಧ ಯಾವುದೇ ನಿರ್ಧಾರಗಳನ್ನು ತೆಗೆದುಕೊಳ್ಳಲು ಸಾಧ್ಯವಾಗದಿರುವ ಸರ್ಕಾರ ಬದುಕಿದೆಯೇ ಎಂಬುದರಲ್ಲಿ ಸಂಶಯವಿದ್ದು ಈ ತಿಂಗಳ 11 ಮತ್ತು 12 ರಂದು ಮೈಸೂರಿನಲ್ಲಿ ಪಕ್ಷದ ಅಧಿವೇಶನ ಆಯೋಜಿಸಿದ್ದು ಸರ್ಕಾರದ ವಿರುದ್ಧ ಹೋರಾಟದ ರೂಪುರೇಷೆಗಳನ್ನು ಸಿದ್ಧಪಡಿಸಲಾಗುವುದು ಎಂದರು.
 ತೆಂಗು ಬೆಳೆಗೆ ಸೂಕ್ತವಾದ ಪರಿಹಾರ ಮಾರ್ಗವನ್ನು ಕಂಡುಹಿಡಿದು ರಾಷ್ಟ್ರ ಮಟ್ಟದಲ್ಲಿ ಚಿಂತನೆ ನಡೆಸಲು ರಾಜ್ಯದ ಸಂಸದರು ಒಟ್ಟಾಗಿ ದೆಹಲಿಗೆ ನಿಯೋಗ ಹೋಗಲಿದ್ದೇವೆ ಎಂದು ಹೇಳಿದರು.
ಖಂಡನೆ: ಕೆಂಪುಸಾಗರ ಗ್ರಾಮದಲ್ಲಿ 2 ಗುಂಪುಗಳ ನಡುವೆ ನಡೆದಿರುವ ಸಣ್ಣಜಗಳದ ಕಾರಣವನ್ನು ಮುಂದಿಟ್ಟು ಹಿಂದೂ ಸಮುದಾಯದ ಯುವಕನ ಮೇಲೆ ಪೊಲೀಸರು ಹಲ್ಲೆ ನಡೆಸಿ ಏಕಾಏಕಿ ಬಂಧಿಸಿದ್ದಾರೆ. ಇದು ಖಂಡನೀಯ. ಇದರ ವಿರುದ್ಧ ಸದನದಲ್ಲಿ ಧ್ವನಿ ಎತ್ತಲಾಗುವುದು ಎಂದರಲ್ಲದೆ ಆಸ್ಪತ್ರೆಗೆ ಭೇಟಿ ನೀಡಿ ಗಾಯಾಳುವಿನ ಆರೋಗ್ಯ ವಿಚಾರಿಸಿದರು.  ಜಿಲ್ಲಾ ಬಿಜೆಪಿ ವಕ್ತಾರ ಎನ್.ಡಿ.ಪ್ರಸಾದ್, ಕಾರ್ಯದರ್ಶಿ  ಜಿ.ವಿ.ಟಿ.ಬಸವರಾಜ್, ಹಿಂದುಳಿದ ವರ್ಗಗಳ ತಾ ಅಧ್ಯಕ್ಷ ವೈಕೆ.ದೇವರಾಜ್, ನಗರ ಘಟಕದ ಅಧ್ಯಕ್ಷ ಹಿರಿಯಣ್ಣ, ಚೇತನ್ ಕುಮಾರ್, ಜಿ.ಜಿ.ಲೋಕೇಶ್, ದುಮ್ಮೇನಹಳ್ಳಿ ರಮೇಶ್, ತಾ ಬಿಜೆಪಿ ಅಧ್ಯಕ್ಷ ಹರಳಕಟ್ಟ ರಮೇಶ್, ತಾ ಪ್ರಧಾನ ಕಾರ್ಯದರ್ಶಿ ಮನೋಜ್, ಪ್ರಭಾಕರ್, ವಕೀಲ ಯತೀಶ್, ಸುಭಾಶ್, ಮದ್ನಳ್ಳಿ ಸರ್ವೇಚಂದ್ರು, ಚಲ್ಲಾಪುರ ಬಸವರಾಜ್, ಕೆಂಪುಸಾಗರ ಶಿವರಾಜ್, ಮಹಿಳಾ ಅಧ್ಯಕ್ಷೆ ಸುವರ್ಣಮ್ಮ, ಇನ್ನಿತರರು ಇದ್ದರು.

Follow KannadaPrabha channel on WhatsApp

Subscribe to KannadaPrabha YouTube Channel and watch Videos

Download the KannadaPrabha News app to follow the latest news updates

Subscribe and Receive exclusive content and updates on your favorite topics

Advertisement