ರುಕ್ಮಿಣಿ-ಪಾಂಡುರಂಗ ದೇಗುಲದಲ್ಲಿ ಏಕಾದಶಿ ಮಹೋತ್ಸವ 8ರಿಂದ
ಹಾಸನ: ಭಾವಸಾರ ಕ್ಷತ್ರಿಯ ಮಂಡಲಿ ವತಿಯಿಂದ ನಗರದ ರುಕ್ಮಿಣಿ- ಪಾಂಡುರಂಗ ದೇವಾಲಯದಲ್ಲಿ 43ನೇ ವರ್ಷದ ಪ್ರಥಮ ಏಕಾದಶಿ ಮಹೋತ್ಸವವನ್ನು ಜು. 8 ಮತ್ತು 9 ರಂದು ಏರ್ಪಡಿಸಲಾಗಿದೆ. ಏಕಾದಶಿ ಮಹೋತ್ಸವದ ಅಂಗವಾಗಿ ಜು. 7 ರಂದು ಗಣಪತಿ- ಉಮಾಮಹೇಶ್ವರ ದೇವರುಗಳ ಪುನರ್ ಪ್ರತಿಷ್ಠಾಪನೆ ನಡೆಯಲಿದೆ. ಜು. 8 ರಂದು ಬೆಳಿಗ್ಗೆ 10.30 ರಿಂದ ಗಣಹೋಮ ಮತ್ತು ಉಮಾ ಮಹೇಶ್ವರ ಹೋಮ, ಪೂರ್ಣಾಹುತಿ, ಮಹಾಮಂಗಳಾರತಿ, ತೀರ್ಥ ಪ್ರಸಾದ ಏರ್ಪಡಿಸಲಾಗಿದ್ದು, ಸಂಜೆ 7ಕ್ಕೆ ಸಾಕ್ಸೋಫೋನಾ ವಾದನ, ರಾತ್ರಿ 9ಕ್ಕೆ ಮಹಾಮಂಗಳಾರತಿ ನೆರವೇರಲಿದೆ. ಜು. 9 ರಂದು ಮಹಾ ಗಣಪತಿ, ಉಮಾಮಹೇಶ್ವರ ಸಮೇತ ಶ್ರೀ ರುಕ್ಮಿಣಿ ಪಾಂಡುರಂಗ ಸ್ವಾಮಿಗೆ ಬೆಳಿಗ್ಗೆ 6-30ರಿಂದ ಮಹಾಭಿಷೇಕ, 9-30ಕ್ಕೆ ಮಹಾ ಮಂಗಳಾರತಿ ನಂತರ 10-30ಕ್ಕೆ ರಾಜಬೀದಿಗಳಲ್ಲಿ ರುಕ್ಮಿಣಿ ಪಾಂಡುರಂಗ ಸ್ವಾಮಿಯವರ ದಿವ್ಯ ರಥೋತ್ಸವ ನಡೆಯಲಿದೆ. ಶಾಸಕ ಹೆಚ್.ಎಸ್. ಪ್ರಕಾಶ್ ಉದ್ಘಾಟಿಸುವರು. ಮುಖ್ಯ ಅತಿಥಿ ಗಳಾಗಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಹಾಗೂ ಮಾಜಿ ಸಚಿವ ಬಿ. ಶಿವರಾಂ, ಜಿಪಂ ಮಾಜಿ ಉಪಾಧ್ಯಕ್ಷ ಖಂಡೇರಾವ್, ನಗರಸಭೆಯ ಸದಸ್ಯ ಹೆಚ್.ಬಿ. ಗೋಪಾಲ್ ಭಾಗವಹಿಸುವರು.