ಕಾಡಾನೆ ಹಿಡಿದರೂ ನಿಲ್ಲದ ಹಾವಳಿ
ಆರು ತಿಂಗಳಲ್ಲಿ 5 ಮಂದಿ ಕಾಡಾನೆಗಳಿಗೆ ಬಲಿ 25 ಕಾಡಾನೆಗಳಲ್ಲಿ 22ನ್ನು ಹಿಡಿಯಲಾಗಿದೆ
ಟಿ ಪಿ.ರವಿಕುಮಾರ್
ಕನ್ನಡಪ್ರಭ ವಾರ್ತೆ ಹಾಸನ ಜು. 6
ಕಾಡಾನೆ ಮತ್ತು ಮಾನವನ ನಡುವಿನ ಸಂಘರ್ಷ ತಪ್ಪಿಸುವ ಸಲುವಾಗಿ ಈ ಭಾಗದ 22 ಕಾಡಾನೆಗಳನ್ನು ಹಿಡಿದು ಸ್ಥಳಾಂತರ ಮಾಡಿದ ನಂತರವೂ ಆನೆ ದಾಳಿಗೆ ಅಮಾಯಕರು ಬಲಿಯಾಗುವುದು ನಿಂತಿಲ್ಲ. ಕಳೆದ ಆರು ತಿಂಗಳಿನಲ್ಲಿ 5 ಮಂದಿ ಕಾಡಾನೆ ದಾಳಿಯಿಂದ ಮೃತಪಟ್ಟಿದ್ದಾರೆ.
ಜಿಲ್ಲೆಯ ಆಲೂರು ತಾಲೂಕು ಹಾಗೂ ಸಕಲೇಶಪುರ ತಾಲೂಕಿನಲ್ಲಿ ಬೀಡು ಬಿಟ್ಟು ಜನರಿಗೆ ತೊಂದರೆ ನೀಡುತ್ತಿದ್ದ 25 ಕಾಡಾನೆಗಳಲ್ಲಿ ಈಗಾಗಲೇ 4 ಮರಿಯಾನೆ ಸೇರಿದಂತೆ 22 ಕಾಡಾನೆಗಳನ್ನು ಸೆರೆ ಹಿಡಿದ್ದಾರೆ. ಉಳಿಕೆ ಆನೆಗಳನ್ನು ಹಿಡಿಯಲು ಮಳೆಗಾಲ ಅಡ್ಡಿಯಾಗಿದ್ದರಿಂದ ಕಾರ್ಯಾಚರಣೆಯನ್ನು ಸ್ಥಗಿತಗೊಳಿಸಲಾಗಿದೆ.
ಮತ್ತೆ ಅದೇ ಸಮಸ್ಯೆ: ಕಾಡಾನೆ ಸೆರೆ ಕಾರ್ಯಚರಣೆ ಸಂದರ್ಭದಲ್ಲಿ ಈ ಭಾಗದಲ್ಲಿ ಇದ್ದಂತಹ ಆನೆಗಳ ಹಿಂಡು ಸಕಲೇಶಪುರ, ಯಸಳೂರು ಹಾಗೂ ಕೊಡಗಿನ ಅರಣ್ಯ ಪ್ರದೇಶಕ್ಕೆ ಪಲಾಯನ ಮಾಡಿದ್ದವು. ಇದರಿಂದ ಸದ್ಯಕ್ಕೆ ಕಾಡಾನೆ ಸಮಸ್ಯೆ ಬಗೆಹರಿಯಿತು ಎಂದು ಈ ಭಾಗದ ಜನ ನಿಟ್ಟೂಸಿರು ಬಿಟ್ಟದ್ದರು. ಪ್ರಸ್ತುತ ಕಾರ್ಯಾಚರಣೆ ಸ್ಥಗಿತಗೊಂಡು ಎರಡು ತಿಂಗಳ ಕಳೆದಿರುವುದರಿಂದ ಈಗ ಮತ್ತೆ ಆನೆ ಸಮಸ್ಯೆ ಪ್ರಾರಂಭವಾಗಿದೆ.
ಈಗ ಕಾಡಾನೆಗಳು ಮತ್ತೆ ದಾಳಿಯನ್ನು ಪ್ರಾರಂಭಿಸಿದ್ದು, ಕಳೆದ ಜು.3 ರಂದು ಬೆಳಗ್ಗೆ ಕಾಫಿ ತೋಟದಲ್ಲಿ ಕೆಲಸ ಮಾಡುತ್ತಿದ್ದ ಕೂಲಿ ಕಾರ್ಮಿಕ ಮಹಿಳೆಯೊಬ್ಬರು, ಆನೆ ತುಳಿತಕ್ಕೆ ಬಲಿಯಾಗಿದ್ದಾರೆ. ಆಲೂರು ತಾಲೂಕಿನ ಮಳಗಳಲೆ ಗ್ರಾಮದ ಮರಿಯಮ್ಮ ಮೃತಪಟ್ಟ ವೃದ್ಧೆ. ಅದೃಷ್ಟವಶಾತ್ ಮರಿಯಮ್ಮನ ಜೊತೆ ಕೆಲಸ ಮಾಡುತ್ತಿದ್ದ ರತ್ನಮ್ಮ ಎಂಬ ಇನ್ನೊಬ್ಬ ಮಹಿಳೆ ಪ್ರಾಣಾಪಾಯದಿಂದ ಪಾರಾಗಿದ್ದು, ಆಲೂರು ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.
ಶಾಶ್ವತ ಪರಿಹಾರ ಅಗತ್ಯ: ಕಾಡಾನೆಗಳನ್ನು ಸೆರೆ ಹಿಡದರು ಸಹ ಮಾನವ ಮತ್ತು ಕಾಡಾನೆ ನಡುವಿನ ಸಂಘರ್ಷವನ್ನು ನಿಯಂತ್ರಿಸಲು ಸಾಧ್ಯವಾಗಿಲ್ಲ. ಆದ್ದರಿಂದ ಕಾಡಾನೆ ದಾಳಿಯಿಂದ ಸತ್ತಾಗ ಪರಿಹಾರ ನೀಡುವ ಸರ್ಕಾರ, ಕಾಡಾನೆ ಸಮಸ್ಯೆಗೆ ಶಾಶ್ವತ ಪರಿಹಾರ ಕಂಡು ಹಿಡಿಯಲು ವಿಫಲವಾಗಿದೆ ಎಂದು ಈ ಭಾಗದ ಜನತೆ ತೀವ್ರ ಆಕ್ರೊಶ ವ್ಯಕ್ತಪಡಿಸಿದ್ದಾರೆ. ಆನೆ-ಮಾನವರ ಸಂಘರ್ಷ ತಡೆಗಟ್ಟಲು ಸಂಬಂಧಪಟ್ಟ ಸಚಿವರು ಕೂಡಲೇ ಈ ಬಗ್ಗೆ ಸಭೆ ಕರೆದು ಚರ್ಚಿಸಬೇಕು. ಹಾಲಿ 22 ಆನೆಗಳನ್ನು ಮಾತ್ರ ಹಿಡಿಯಲಾಗಿದೆಯಾದರೂ ಅವೆಲ್ಲಾ ಮರಿಯಾನೆಗಳು. ಹೀಗಾಗಿಯೇ ದೊಡ್ಡ ದೊಡ್ಡ ಸಲಗಗಳ ಅಟ್ಟಹಾಸ ಮುಂದುವರಿಸಿವೆ. ಇದರಿಂದ ಈ ಭಾಗದ ಜನ ಭಯಭೀತಿಯಿಂದ ಬದುಕುವಂತಾಗಿದೆ ಹೀಗಾಗಿ ಸರ್ಕಾರ ಎಲ್ಲಾ ಆನೆಗಳ ಸ್ಥಳಾಂತರಕ್ಕೆ ಮುಂದಾಗದೇ ಹೋದ್ರೆ, ಹೋರಾಟ ಅನಿವಾರ್ಯ ಎಂದು ಎಚ್ಚರಿಕೆ ನೀಡಿದ್ದಾರೆ.
ಸರ್ಕಾರದ ಅನುಮತಿಗೆ ಮನವಿ: ಮಳೆಗಾಲ ಹಿನ್ನೆಲೆಯಲ್ಲಿ ಮಲೆನಾಡು ಭಾಗದ ಎಲ್ಲಾ ಆನೆಗಳನ್ನು ಹಿಡಿದು ಸ್ಥಳಾಂತರ ಮಾಡಲು ಹಿನ್ನಡೆಯಾಗಿದೆ. ಉಳಿದ ಆನೆಗಳನ್ನು ಹಿಡಿಯಲು ಸರ್ಕಾರದ ಅನುಮತಿ ಕೋರಲಾಗಿದೆ. ಅಲ್ಲಿಂದ ಅನುಮತಿ ಸಿಕ್ಕ ನಂತರ ಎಲ್ಲಾ ಆನೆಗಳನ್ನು ಹಿಡಿಯುವ ಬಗ್ಗೆ ಕ್ರಮ ಕೈಗೊಳ್ಳಲಾಗುವುದು.
ಅಲ್ಲದೇ ಊರಿನ ಪಕ್ಕದಲ್ಲಿ ಬೀಡುಬಿಟ್ಟಿರುವ ಕಾಡಾನೆಗಳನ್ನು ಮರಳಿ ಅರಣ್ಯಕ್ಕೆ ಅಟ್ಟಲು ಸ್ಥಳೀಯರಿಗೆ ಪಟಾಕಿ ನೀಡಿ, ಸಿಬ್ಬಂದಿ ಕಾವಲು ಹಾಕುವುದಾಗಿ ಅರಣ್ಯ ಇಲಾಖೆಯವರು ಹೇಳುತ್ತಿದ್ದಾರೆ. ಒಟ್ಟಿನಲ್ಲಿ ಕಾಡಾನೆ ಸೆರೆ ಕಾರ್ಯಾಚರಣೆ ನಡೆದರೂ ಆನೆ ಸಮಸ್ಯೆ ಜೀವಂತವಾಗಿರುವುದು ಪದೇ ಪದೇ ಸಂಕಷ್ಟ ಅನುಭವಿಸುತ್ತಿರುವ ಜನ ಮತ್ತೆ ಮತ್ತೆ ತೊಂದರೆ ಅನುಭವಿಸುವಂತಾಗಿದೆ.
ಇದಕ್ಕೆ ಯಾವಾಗ ಮುಕ್ತಿ ಸಿಗುತ್ತೋ ಅನ್ನೋದನ್ನು ಕಾದು ನೋಡಬೇಕಿದೆ.