ಕೃಷಿಕರ ವಲಸೆ ತಡೆಗೆ ಸರ್ಕಾರ ವಿಫಲ: ಶಾಸಕ ಶಿವಲಿಂಗೇಗೌಡ
ಅರಸೀಕೆರೆ: ಕೃಷಿ ಭಾರತದ ರೈತನ ಜೀವನಾಡಿ ಕೃಷಿ ಅವಲಂಬಿಸಿ ಹಿಂದಿನ ದಿನಗಳಲ್ಲಿ ಶೇ.70 ರಷ್ಟು ಜನ ಜೀವನ ಸಾಗಿಸುತ್ತಿದ್ದರು. ಆದರೆ ಇಂದು ಕೃಷಿಯಿಂದ ಬೇರೆಡೆಗೆ ವಲಸೆ ಹೋಗುತ್ತಿದ್ದು ಏಕೆ ಎಂಬ ಬಗ್ಗೆ ನಮ್ಮನ್ನಾಳುವ ಸರ್ಕಾರಗಳು ಚಿಂತನೆ ನಡೆಸಿ ಸೂಕ್ತ ಮಾರ್ಗೋಪಾಯಗಳನ್ನು ತೆಗೆದುಕೊಳ್ಳುವಲ್ಲಿ ವಿಫಲವಾಗಿವೆ ಎಂದು ಶಾಸಕ ಕೆ.ಎಂ.ಶಿವಲಿಂಗೇಗೌಡ ವಿಷಾದಿಸಿದರು.
ಪಟ್ಟಣದ ಶ್ರೀಗುರುಸಿದ್ದರಾಮೇಶ್ವರ ಸಮುದಾಯ ಭವನದಲ್ಲಿ ಕೃಷಿ ಇಲಾಖೆ, ತೋಟಗಾರಿಕೆ ಇಲಾಖೆ, ಪಶುಸಂಗೋಪನೆ, ಮೀನುಗಾರಿಕೆ, ಜಲಸಂಪನ್ಮೂಲ, ರೇಷ್ಮೆ ಇಲಾಖೆ ಅರಣ್ಯ ಇಲಾಖೆ ಸಹಕಾರ ಇಲಾಖೆ ಕೃಷಿ ಮಾರುಕಟ್ಟೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಕೃಷಿ ವಿಶ್ವವಿದ್ಯಾಲಯ, ಕೃಷಿಕ ಸಮಾಜ ಆಶ್ರಯದಲ್ಲಿ ಏರ್ಪಡಿಸಲಾಗಿದ್ದ ಕೃಷಿ ಉತ್ಸವ 2014ರ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದರು.
ನೀರಿನ ಸದ್ಬಳಕೆಯಾಗಲಿ: ಮಳೆಯ ಅಭಾವದಿಂದ ರೈತರು ಕೃಷಿಯಿಂದ ವಿಮುಖರಾಗುತ್ತಿದ್ದಾರೆ. ಅಣೆಕಟ್ಟೆಗಳು ತುಂಬಿ ಸಮುದ್ರ ಸೇರುತ್ತಿರುವ ನೀರನ್ನು ಸದ್ಬಳಕೆ ಮಾಡಿಕೊಂಡು ರೈತರ ಹೊಲಕ್ಕೆ ಹರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ. ವ್ಯರ್ಥವಾಗಿ ಹರಿದು ಹೇಗುವ ನೀರನ್ನು ಸದುಪಯೋಗ ಪಡಿಸಿಕೊಂಡರೆ ಕೃಷಿ ಅಭಿವೃದ್ಧಿ ಸಾಧ್ಯ ಎಂದು ತಿಳಿಸಿದರು.
ಸರ್ಕಾರ ರೈತರು ಬೆಳೆದ ಎಲ್ಲಾ ಬೆಳೆಗಳ ಕಚ್ಚಾ ಪದಾರ್ಥವನ್ನು ಬಳಸಿಕೊಳ್ಳುವಂತಹ ಕೈಗಾರಿಕೆಗಳನ್ನು ಸ್ಥಾಪಿದರೆ ರೈತರು ಬೆಳೆದ ಬೆಳೆಗೆ ಉತ್ತಮ ಬೆಲೆ ದೊರಕುತ್ತದೆ. ಹವಾಮಾನ ವೈಪರಿತ್ಯ ಕೂಡ ಕೃಷಿಗೆ ದೊಡ್ಡ ಹೊಡೆತ ನೀಡಿದೆ. ಆಧುನಿಕ ಕೃಷಿ ಪದ್ಧತಿ ರೈತನಿಗೆ ವರವಾಗುವ ಬದಲು ಶಾಪವಾಗಿ ಪರಿಣಮಿಸಿದೆ ಎಂದು ಬೇಸರ ವ್ಯಕ್ತಪಡಿಸಿದರು. ಕೃಷಿ ಕಡೆಗಣನೆ: ಸರ್ಕಾರಗಳು ಕೃಷಿ ನೀತಿ ರೂಪಿಸುವಾಗ ರೈತನ ಹಿತಾಸಕ್ತಿಯನ್ನು ಪರಿಗಣಿಸಬೇಕು. ಆದರೆ ಪ್ರಸಕ್ತ ಸನ್ನಿವೇಶದಲ್ಲಿ ಕೃಷಿಯನ್ನು ಕಡೆಗಣಿಸಿರುವುದು ದೇಶದ ಆರ್ಥಿಕ ಅಭಿವೃದ್ಧಿಯ ಮೇಲೆ ದುಷ್ಪರಿಣಾಮ ಉಂಟು ಮಾಡಲಿದೆ ಎಂದು ಆತಂಕ ವ್ಯಕ್ತಪಡಿಸಿದರು.
ಜಿಲ್ಲಾ ಪಂಚಾಯತ್ ಉಪಾಧ್ಯಕ್ಷ ಬೀಳಿಚೌಡಯ್ಯ ಮಾತನಾಡಿ, ಹಿಂದಿನ ದಿನಗಳಲ್ಲಿ ರೈತರು ನೈಸರ್ಗಿಕ ಕೃಷಿಯನ್ನು ಅವಲಂಬಿಸುವ ಮೂಲಕ ಉತ್ತಮ ಆರೋಗ್ಯದಾಯಕ ಬೆಳೆ ಬೆಳೆದು ನೆಮ್ಮದಿಯಿಂದ ಜೀವನ ಸಾಗಿಸುತ್ತಿದ್ದರು. ಆದರೆ ಇಂದು ರಸಾಯನಿಕ ಗೊಬ್ಬರಕ್ಕೆ ಅವಲಂಬಿತವಾದ ಪರಿಣಾಮ ಭೂಮಿ ಸತ್ವವನ್ನು ಕಳೆದುಕೊಳ್ಳುತ್ತಿದ್ದು ರೈತ ಗುಳೇ ಹೋಗುವ ಸ್ಥಿತಿ ನಿರ್ಮಾಣವಾಗಿದೆ ಎಂದರು.
ಜಂಟಿ ಕೃಷಿ ಸಹಾಯಕ ನಿರ್ದೇಶಕ ಬಿ ಶಿವರಾಜು ಮಾತನಾಡಿದರು. ಪುರಸಭೆ ಅಧ್ಯಕ್ಷ ಮೋಹನ್ ಕುಮಾರ್, ತಾಪಂ ಅಧ್ಯಕ್ಷೆ ಚಿಕ್ಕಮ್ಮ ಧರ್ಮಪ್ಪ, ಜಿಪಂ ಸದಸ್ಯರಾದ ಪಾರ್ವತಮ್ಮ ಶಿವಮೂರ್ತಿ, ರತ್ನಮ್ಮ ಗೋಪಾಲಸ್ವಾಮಿ, ತಿಪಟೂರಿನ ಸಾವಯವ ಕೃಷಿಕ ಸದಾಶಿವಯ್ಯ, ತಾ.ಪಂ.ಮಾಜಿ ಅಧ್ಯಕ್ಷ ಹೆಚ್,ಟಿ.ಶಿವಮೂರ್ತಿ, ಸದಸ್ಯರಾದ ದಿನೇಶ್, ಲಕ್ಷ್ಮಣ್, ಜಯಮ್ಮ, ಹನುಮೇಗೌಡ ಇದ್ದರು